500 ಯೋಧರಿಂದ ವಿವಾದಿತ ಡೊಕ್ಲಾಂ ಬಳಿ ಚೀನಾ ರಸ್ತೆ ವಿಸ್ತರಣೆ ಕಾಮಗಾರಿ!

ಭಾರತದ ಸಿಕ್ಕಿಂ ಗಡಿಯಲ್ಲಿನ ವಿವಾದಿತ ಡೊಕ್ಲಾಂ ಪ್ರದೇಶಕ್ಕೆ ತೀರಾ ಸಮೀಪದಲ್ಲೇ ಚೀನಾ ಸೇನೆ ಮತ್ತೆ ಬೀಡು ಬಿಟ್ಟಿದ್ದು, ಈ ಹಿಂದೆ ವಿವಾದಕ್ಕೆ ಕಾರಣವಾಗಿದ್ದ ರಸ್ತೆ ಅಗಲೀಕರಣ ಕಾಮಗಾರಿಯನ್ನು ಸಮರೋಪಾದಿಯಲ್ಲಿ ಮಾಡುತ್ತಿದೆ.
ವಿವಾದಿತ ಡೊಕ್ಲಾಂ ಪ್ರದೇಶ (ಸಂಗ್ರಹ ಚಿತ್ರ)
ವಿವಾದಿತ ಡೊಕ್ಲಾಂ ಪ್ರದೇಶ (ಸಂಗ್ರಹ ಚಿತ್ರ)
ನವದೆಹಲಿ: ಭಾರತದ ಸಿಕ್ಕಿಂ ಗಡಿಯಲ್ಲಿನ ವಿವಾದಿತ ಡೊಕ್ಲಾಂ ಪ್ರದೇಶಕ್ಕೆ ತೀರಾ ಸಮೀಪದಲ್ಲೇ ಚೀನಾ ಸೇನೆ ಮತ್ತೆ ಬೀಡು ಬಿಟ್ಟಿದ್ದು, ಈ ಹಿಂದೆ ವಿವಾದಕ್ಕೆ ಕಾರಣವಾಗಿದ್ದ ರಸ್ತೆ ಅಗಲೀಕರಣ ಕಾಮಗಾರಿಯನ್ನು ಸಮರೋಪಾದಿಯಲ್ಲಿ ಮಾಡುತ್ತಿದೆ.
ಮೂಲಗಳ ಪ್ರಕಾರ ಈ ಹಿಂದೆ ವಿವಾದಕ್ಕೆ ಕಾರಣವಾಗಿದ್ದ ಡೊಕ್ಲಾಂ ಪ್ರದೇಶದಿಂದ ಕೇವಲ 12 ಕಿ.ಮೀ. ದೂರದಲ್ಲಿ ಚೀನಾ ತನ್ನ ಸೇನೆಯನ್ನು ಜಮಾಯಿಸಿದ್ದು, ಅಲ್ಲಿನ ರಸ್ತೆಯನ್ನು ಅಗಲೀಕರಣ ಗೊಳಿಸುವ ಕಾರ್ಯವನ್ನು  ಬಿರುಸಿನಿಂದ ಆರಂಭಿಸಿದೆ. ಸುದ್ದಿಸಂಸ್ಥೆಯೊಂದರ ವರದಿಯನ್ವಯ ಚೀನಾ ಸೇನೆಯ ಸುಮಾರು 500ಕ್ಕೂ ಹೆಚ್ಚು ಸೈನಿಕರು ಕಾಮಗಾರಿಯಲ್ಲಿ ತೊಡಗಿದ್ದು, ಬೃಹತ್ ಯುದ್ಧ ಟ್ಯಾಂಕರ್ ಗಳು ಸಂಚರಿಸಬಹುದಾದಷ್ಟು ಅಗಲದ ರಸ್ತೆ  ನಿರ್ಮಾಣ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ.

ಚೀನಾ ಸೇನೆಯ ಈ ಕಾರ್ಯ ಭಾರತದ ಆತಂಕಕ್ಕೆ ಕಾರಣವಾಗಿದ್ದು, ಭಾರತೀಯ ಸೇನಾ ಪಡೆಗಳು ಇದನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ ಎಂದು ತಿಳಿದುಬಂದಿದೆ.

ನಿನ್ನೆಯಷ್ಟೇ ಭಾರತೀಯ ವಾಯುಪಡೆ ಮುಖ್ಯಸ್ಥ ಏರ್‌ ಚೀಫ್ ಮಾರ್ಶಲ್‌, ಬಿ ಎಸ್‌ ಧನೋವಾ ಅವರು, ಡೊಕ್ಲಾಂ ಬಳಿ ಚೀನಾ ಸೈನಿಕರ ಕಾಮಗಾರಿ ವಿಚಾರವನ್ನು ಪ್ರಸ್ತಾಪಿಸಿ, ಡೊಕ್ಲಾಂ ನ ಚುಂಬಿ ಕಣಿವೆಯಲ್ಲಿ ಚೀನಾ ಸೇನೆಯ  ಬೃಹತ್‌ ಜಮಾವಣೆಯು ಉದ್ವಿಗ್ನತೆಯನ್ನು ಸೃಷ್ಟಿಸಿದೆ ಎಂದು ಹೇಳಿದ್ದರು. "ವಿವಾದಿತ ಡೊಕ್ಲಾಂ ಪ್ರದೇಶದಿಂದ ಕೇವಲ 12 ಕಿ.ಮೀ. ದೂರದಲ್ಲಿ ಚೀನಾ ಸೇನೆ ಜಮಾವಣೆಯಾಗಿರುವುದು ಉಭಯ ದೇಶಗಳ ಸೇನಾ ಮುಖಾಮುಖೀ  ಅಲ್ಲವಾದರೂ ಉದ್ವಿಗ್ನತೆಗೆ ಕಾರಣವಾಗಿದೆ. ಚುಂಬಿ ಕಣಿವೆಯಲ್ಲಿ ಚೀನಾ ಸೇನೆಯ ಕಾರ್ಯ ಚಟುವಟಿಕೆಗಳು ಮುಗಿದೊಡನೆಯೇ ಅದು ಅಲ್ಲಿಂದ ಹಿಂದೆ ಸರಿಯುವುದಾಗಿ ನಾವು ನಿರೀಕ್ಷಿಸುತ್ತೇವೆ' ಎಂದು ಧನೋವಾ ಹೇಳಿದ್ದರು.

ಇತ್ತೀಚೆಗಷ್ಟೇ ಡೋಕ್ಲಾಂ ಗಡಿ ವಿಚಾರದಲ್ಲಿ ಉಭಯ ದೇಶಗಳ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡು ಯುದ್ಧದ ವಾತಾವರಣ ಸೃಷ್ಟಿಯಾಗಿತ್ತು. ಆದರೆ ಬ್ರಿಕ್ಸ್ ಸಮ್ಮೇಳನಕ್ಕೆ ಪ್ರಧಾನಿ ಮೋದಿ ಚೀನಾ ದೇಶಕ್ಕೆ ಭೇಟಿ ಕೊಡುವ  ಮೊದಲು ವಿವಾದವನ್ನು ಮಾತುಕತೆಯ ಮೂಲಕ ಬಗೆಹರಿಸಿ ಉಭಯ ದೇಶಗಳೂ ಗಡಿಯಿಂದ ಸೇನೆ ಹಿಂಪಡೆಯಲು ಒಪ್ಪಿಕೊಂಡಿದ್ದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com