ಜಿನೊವಾ: ಇಟಲಿಯ ಜಿನೊವಾದಲ್ಲಿ ಸೇತುವೆ ಕುಸಿದ ಪರಿಣಾಮ ಕನಿಷ್ಟ 22 ಮಂದಿ ಮೃತಪಟ್ಟಿದ್ದಾರೆ.
ಕರಾವಳಿ ನಗರ ಜಿನೊವಾದಲ್ಲಿ ಮ್ಂಗಳವಾರ ಸ್ಥಳೀಯ ಸಮಯ ಬೆಳಗ್ಗೆ 11.30ರ ಸುಮಾರಿಗೆ ಈ ಅವಘಡ ಸಂಭವಿಸಿದೆ.
ಇಟಲಿಯಿಂದ ಫ್ರಾನ್ಸ್ ಸಂಪರ್ಕಿಸುವ ಅಂತರಾಷ್ಟ್ರಿಯ ಹೆದ್ದಾರಿಯ ನಡುವೆ 100 ಯಾರ್ಡ್ ಉದ್ದದ ಸೇತುವೆ ಕುಸಿದಿದೆ. ಎಡೆಬಿಡದೆ ಸುರಿಯುತ್ತಿದ್ದ ಗುಡುಗು ಸಹಿತ ಭಾರೀ ಮಳೆಯು ಈ ದುರಂತಕ್ಕೆ ಕಾರಣವೆನ್ನಲಾಗಿದೆ.
ಇಟಲಿಯ ಸಾರಿಗೆ ಇಲಾಖೆ ಉಪ ಸಚಿವರು ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಲಕ್ಷಣವಿದೆ ಎಂದಿದ್ದಾರೆ.
ಗಾಯಾಳುಗಳನ್ನು ಹೆಲಿಕಾಪ್ಟರ್ ಮುಖೇನ ಆಸ್ಪತ್ರೆಗೆ ದಾಖಲಿಸಲಾಗಿದ್ದು ಬದುಕುಳಿದವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಘಟನೆ ನಡೆದ ವೇಳೆ 8-9 ವಾಹನಗಳು ಸೇತುವೆ ಮೇಲೆ ಪ್ರಯಾಣಿಸುತ್ತಿದ್ದವು. ಆಗ ಇದ್ದಕ್ಕಿದ್ದಂತೆ ಸೇತುವೆ ಕುಸಿದಿದೆ. ಹಲವರು ರಕ್ಷಣೆಗಾಗಿ ಕೂಗಿಕೊಳ್ಳುತ್ತಿದ್ದರೆಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಇಂದು ಕುಸಿದು ಬಿದ್ದ ಸೇತುವೆಯನ್ನು 1960ರ ದಶಕದಲ್ಲಿ ಎ 10 ಟೋಲ್ ಮೋಟಾರ್ ವೇ ಗಾಗಿ ನಿರ್ಮಾಣ ಮಾಡಲಾಗಿತ್ತು.