ಹೆಚ್1-ಬಿ ವೀಸಾ ಮಾನದಂಡ ಮತ್ತಷ್ಟು ಕಠಿಣಗೊಳಿಸಿದ ಟ್ರಂಪ್ ಸರ್ಕಾರ; ಭಾರತದ ಮೇಲೆ ಗಂಭೀರ ಪರಿಣಾಮ

ಭಾರತೀಯರ ಆತಂಕಕ್ಕೆ ಕಾರಣವಾಗಿರುವ ಟ್ರಂಪ್ ಸರ್ಕಾರದ ಅಮೆರಿಕ ನಾಗರಿಕತ್ವ ಮತ್ತು ವಲಸೆ ಸೇವೆಗಳ ನೀತಿ 2018ರ ಜಾರಿಗೆ ಅಮೆರಿಕ ಸರ್ಕಾರ ಮುಂದಾಗಿದ್ದು, ಹೆಚ್ 1 ಬಿ ವೀಸಾ ನೀತಿ ಮತ್ತಷ್ಟು ಕಠಿಣವಾಗಿರಲಿದೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ವಾಷಿಂಗ್ಟನ್: ಭಾರತೀಯರ ಆತಂಕಕ್ಕೆ ಕಾರಣವಾಗಿರುವ ಟ್ರಂಪ್ ಸರ್ಕಾರದ ಅಮೆರಿಕ ನಾಗರಿಕತ್ವ ಮತ್ತು ವಲಸೆ ಸೇವೆಗಳ ನೀತಿ 2018ರ ಜಾರಿಗೆ ಅಮೆರಿಕ ಸರ್ಕಾರ ಮುಂದಾಗಿದ್ದು, ಹೆಚ್ 1 ಬಿ ವೀಸಾ ನೀತಿ ಮತ್ತಷ್ಟು  ಕಠಿಣವಾಗಿರಲಿದೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಅಮೆರಿಕದ ಐಟಿ ಕಂಪನಿಗಳು ತಮ್ಮ ಕಾರ್ಯಕ್ಕಾಗಿ ಮೂರನೇ ಸಂಸ್ಥೆಗಳ ಉದ್ಯೋಗಿಗಳನ್ನು ಬಳಸಿಕೊಳ್ಳುವಾಗ ಅಮೆರಿಕದ ನಾಗರಿಕತ್ವ ಮತ್ತು ವಲಸೆ ಸೇವೆಗಳ ನೀತಿ 2018ಯಲ್ಲಿರುವ ಮಾನದಂಡಗಳ ಅನ್ವಯವೇ ವಿದೇಶಿ ಉದ್ಯೋಗಿಗಳಿಗೆ ಹೆಚ್ 1 ಬಿ ವೀಸಾ ನೀಡಲು ಮುಂದಾಗಿದ್ದು, ಅಮೆರಿಕ ಸರ್ಕಾರದ ಈ ನೀತಿಯಿಂದಾಗಿ ಅಮೆರಿಕದಲ್ಲಿ ಕೆಲಸ ಮಾಡುವ ವಿದೇಶಿ ಉದ್ಯೋಗಸ್ಥರಿಗೆ ಹೆಚ್ 1 ಬಿ ವೀಸಾ ಪಡೆಯಲು  ಕಠಿಣವಾಗಲಿದೆ. ಪ್ರಮುಖವಾಗಿ ಅಮೆರಿಕವನ್ನೇ ಹೆಚ್ಚು ನೆಚ್ಚಿಕೊಂಡಿರುವ ಲಕ್ಷಾಂತರ ಭಾರತೀಯ ಐಟಿ ಸಂಸ್ಥೆಗಳು ಮತ್ತು ಉದ್ಯೋಗಿಗಳ ಮೇಲೆ ಇದು ನೇರ ಪರಿಣಾಮ ಬೀರಲಿದೆ.
ಅಮೆರಿಕ ಸರ್ಕಾರ ಇದೀಗ ತನ್ನ ನೂತನ  ನಾಗರಿಕತ್ವ ಮತ್ತು ವಲಸೆ ನೀತಿಯಲ್ಲಿ ಪ್ರಸ್ತಾಪಿಸಿರುವಂತೆ ನಿರ್ದಿಷ್ಟ ಕಾರಣ ಮತ್ತು ನಿರ್ದಿಷ್ಟ ಅವಧಿಗೆ ಮಾತ್ರ ವಿದೇಶಿಗರನ್ನು ಉದ್ಯೋಗಿಗಳಾಗಿ ಕರೆಸಿಕೊಳ್ಳಬೇಕಿದ್ದು, ಊಹಾತ್ಮಕ  ಉದ್ಯೋಗ ಅಂದರೆ ಭವಿಷ್ಯದಲ್ಲಿ ದೊರೆಯಬಹುದಾದ ಯೋಜನೆಗಳಿಗೆ ಈಗಲೇ ಉದ್ಯೋಗಿಗಳನ್ನು ಅಮೆರಿಕಕ್ಕೆ ಕರೆಸಿಕೊಳ್ಳುವ ಅವಕಾಶ ನೀಡದಿರಲು ನೂತನ ನೀತಿಯಲ್ಲಿ ಪ್ರಸ್ತಾಪಿಸಲಾಗಿದೆ. ಇದಲ್ಲದೆ ಹೀಗೆ ಕರೆಸಿಕೊಳ್ಳುವ  ವಿದೇಶಿ ಉದ್ಯೋಗಸ್ಥರೂ ಕೂಡ ನೀತಿಯಲ್ಲಿ ಉಲ್ಲೇಖ ಮಾಡಿರುವ ಮಾನದಂಡಗಳ ಅಡಿಯಲ್ಲಿ ಬರಲೇಬೇಕು ಮತ್ತು ನೀತಿಯಲ್ಲಿ ಸೂಚಿಸಲಾಗಿರುವ ವಿಶೇಷ ಕೌಶಲ್ಯ ಹೊಂದಿರಬೇಕು ಎಂದು ನೂತನ ವೀಸಾ ನೀತಿಯಲ್ಲಿ  ಹೇಳಲಾಗಿದೆ.
ಅಂತೆಯೇ ವಿದೇಶಿ ಉದ್ಯೋಗಸ್ಥರನ್ನು ಕರೆಸಿಕೊಳ್ಳುವ ಸಂಸ್ಥೆಗಳು ತಾವು ಯಾವ ಕಾರಣಕ್ಕೆ ವಿದೇಶಿ ಉದ್ಯೋಗಸ್ಥರನ್ನು ಕರೆಸಿಕೊಳ್ಳುತ್ತಿದ್ದೇವೆ ಎಂಬ ಸಂಪೂರ್ಣ ಮಾಹಿತಿಯನ್ನು ಸರ್ಕಾರಕ್ಕೆ ನೀಡಲೇಬೇಕಿದ್ದು, ದೇಶಿ  ಉದ್ಯೋಗಸ್ಥರನ್ನು ಹೊರತು ಪಡಿಸಿ ವಿದೇಶಿ ಉದ್ಯೋಗಸ್ಥರೇ ಏಕೆ ಬೇಕು..? ಮತ್ತು ವಿದೇಶಿ ಉದ್ಯೋಗಸ್ಥರು ಸರ್ಕಾರ ಸೂಚಿಸಿರುವ ವಿಶೇಷ ಕೌಶಲ್ಯ ಮತ್ತು ಮಾನದಂಡಗಳಿಗೆ ಅರ್ಹರಾಗಿರುವರೇ ಎಂಬಿತ್ಯಾದಿ ಅಂಶಗಳ ಕುರಿತು  ಅಧಿಕೃತ ದಾಖಲೆಗಳನ್ನು ಸರ್ಕಾರಕ್ಕೆ ಸಲ್ಲಿಸಬೇಕಿದೆ.
ಅಂತೆಯೇ ಹಾಲಿ ಇರುವ ಹೆಚ್ 1 ಬಿ ವೀಸಾದ ಮೂರು ವರ್ಷಗಳ ಅವಧಿಯನ್ನು ಕಡಿತಗೊಳಿಸಲು ಅಮೆರಿಕ ಸರ್ಕಾರ ನಿರ್ಧರಿಸಿದ್ದು, ನಿರ್ದಿಷ್ಟ ಕೆಲಸಕ್ಕಾಗಿ ಅಮೆರಿಕಕ್ಕೆ ಆಗಮಿಸಿದ ಉದ್ಯೋಗಸ್ಥರು ವೀಸಾ ಅವಧಿ ಮುಗಿಯದೇ  ಇದ್ದರೂ ಅವರ ಉದ್ದೇಶಿತ ಕಾರ್ಯ ಪೂರ್ಣಗೊಂಡ ಮೇಲೆ ವೀಸಾ ಅವಧಿ ಕೂಡ ತಾನೇ ತಾನಾಗಿ ಕಡಿತಗೊಳ್ಳುವಂತೆ ನೀತಿ ರೂಪಿಸಲಾಗಿದೆ. ಅದರಂತೆ ವೀಸಾ ಅವಧಿ 3 ವರ್ಷವಾಗಿದ್ದರೂ, 3 ವರ್ಷದೊಳಗೆ ಕೆಲಸ  ಪೂರ್ಣಗೊಂಡರೆ ಅಂತಹಗ ಉದ್ಯೋಗಸ್ಥರ ವೀಸಾ ಅವಧಿ ಕೂಡ ಅಲ್ಲಿಗೇ ಪೂರ್ಣಗೊಳ್ಳುತ್ತದೆ. ಕೆಲಸ ಪೂರ್ಣಗೊಂಡ ಬಳಿಕ ಉದ್ಯೋಗಸ್ಥರು ಈ ಸಮಯದಲ್ಲಿ ನಿರುದ್ಯೋಗಿಗಳಾಗುವುದರಿಂದ ಅಮೆರಿಕ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ. ಅಂತೆಯೇ ವೀಸಾ ಅವಧಿ ಪೂರ್ಣಗೊಂಡು ಉದ್ದೇಶಿತ ಕಾರ್ಯ ಪೂರ್ಣಗೊಳ್ಳದ ಉದ್ಯೋಗಸ್ಥರು ಸಂಬಂಧ ಪಟ್ಟ ಸಂಸ್ಛೆಗಳ ಮೂಲಕ ಅಧಿಕೃತ ದಾಖಲೆಗಳೊಂದಿಗೆ ವೀಸಾ ಅವಧಿ ನವೀಕರಣಕ್ಕೆ ಅರ್ಜಿ ಸಲ್ಲಿಸಲೂ ಅವಕಾಶ ನೀಡಲಾಗಿದೆ ಎನ್ನಲಾಗಿದೆ.
ಪ್ರಸ್ತುತ ಭಾರತ ಸೇರಿದಂತೆ ಅಮೆರಿಕದಲ್ಲಿ ಕೋಟ್ಯಾಂತರ ವಿದೇಶಿಗರು ಅಮೆರಿಕದ ಬ್ಯಾಕಿಂಗ್, ಪ್ರವಾಸ, ವಾಣಿಜ್ಯ, ತಂತ್ರಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದು,  ಅಮೆರಿಕ ಸರ್ಕಾರದ ನೂತನ ನೀತಿಯಿಂದಾಗಿ ಈ ಉದ್ಯೋಗಸ್ಥರಿಗೆ ಕೆಲಸಗಳಿಗೆ ಕತ್ತರಿ ಬೀಳುವ ಸಾಧ್ಯತೆ ಇದೆ. ಇನ್ನು ಇದೇ ಅಕ್ಟೋಬರ್ ತಿಂಗಳಿನಿಂದ ಅಮೆರಿಕದಲ್ಲಿ ಹೆಚ್ 1 ಬಿ ವೀಸಾ ನೀಡಿಕೆ ಪ್ರಕ್ರಿಯೆ ಆರಂಭವಾಗಲಿದ್ದು, ಅಷ್ಟರೊಳಗೆ ನೂತನ ನೀತಿ ಜಾರಿ ಮಾಡಲು ಅಮೆರಿಕ ಸರ್ಕಾರ ಮುಂದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com