'ಚಪ್ಪಲಿ ಕಳ್ಳ ಪಾಕಿಸ್ತಾನ': ವಾಷಿಂಗ್ಟನ್ ನಲ್ಲಿ ಬಲೂಚ್, ಇಂಡೋ-ಅಮೆರಿಕನ್ನರ ಪ್ರತಿಭಟನೆ ವೈರಲ್

ಕುಲಭೂಷಣ್ ಜಾದವ್ ಭೇಟಿ ವೇಳೆ ಜಾದವ್ ಪತ್ನಿ ಚಪ್ಪಲಿ ಕಸಿದು ಅಮಾನವೀಯತೆ ಪ್ರದರ್ಶನ ಮಾಡಿದ್ದ ಪಾಕಿಸ್ತಾನದ ವಿರುದ್ಧ ಅಮೆರಿಕದ ವಾಷಿಂಗ್ಟನ್ ನಲ್ಲಿ ಬಲೂಚಿಸ್ತಾನ ಪ್ರಜೆಗಳು ಮತ್ತು ಇಂಡೋ ಅಮೆರಿಕನ್ನರ ಸಮೂಹವೊಂದು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿವೆ.
ವಾಷಿಗ್ಟನ್ ನಲ್ಲಿ ಪಾಕ್ ವಿರುದ್ಧ ಪ್ರತಿಭಟನೆ
ವಾಷಿಗ್ಟನ್ ನಲ್ಲಿ ಪಾಕ್ ವಿರುದ್ಧ ಪ್ರತಿಭಟನೆ
ವಾಷಿಂಗ್ಟನ್: ಕುಲಭೂಷಣ್ ಜಾದವ್ ಭೇಟಿ ವೇಳೆ ಜಾದವ್ ಪತ್ನಿ ಚಪ್ಪಲಿ ಕಸಿದು ಅಮಾನವೀಯತೆ ಪ್ರದರ್ಶನ ಮಾಡಿದ್ದ ಪಾಕಿಸ್ತಾನದ ವಿರುದ್ಧ ಅಮೆರಿಕದ ವಾಷಿಂಗ್ಟನ್ ನಲ್ಲಿ ಬಲೂಚಿಸ್ತಾನ ಪ್ರಜೆಗಳು ಮತ್ತು ಇಂಡೋ  ಅಮೆರಿಕನ್ನರ ಸಮೂಹವೊಂದು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿವೆ.
ಹೆಪ್ಪುಗಟ್ಟಿಸುವ ಚಳಿಯ ನಡುವೆಯೂ ಅಮೆರಿಕದ ವಾಷಿಂಗ್ಟನ್ ನಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿ ಎದುರು ಬಲೂಚಿಸ್ತಾನ ಪ್ರಜೆಗಳು ಮತ್ತು ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಮೂಲದವರು ಪ್ರತಿಭಟನೆ  ನಡೆಸುತ್ತಿದ್ದಾರೆ. ಚಪ್ಪಲ್ ಚೋರ್ ಪಾಕಿಸ್ತಾನ ಎಂಬ ಭಿತ್ತಿಪತ್ರಗಳನ್ನು ಹಿಡಿದು ಪ್ರತಿಭಟನೆ ನಡೆಸುತ್ತಿರುವ ಪ್ರತಿಭಟನಾಕಾರರು, ಕುಲಭೂಷಣ್ ಜಾದವ್ ಪ್ರಕರಣದಲ್ಲಿ ಪಾಕಿಸ್ತಾನ ಅಂತಾರಾಷ್ಟ್ರೀಯ ನಿಯಮಾವಳಿಗಳನ್ನು  ಉಲ್ಲಂಘನೆ ಮಾಡಿದೆ ಎಂದು ಆರೋಪಿಸಿದ್ದಾರೆ.
ಅಂತೆಯೇ ಕುಲಭೂಷಣ್ ಜಾದವ್ ಮತ್ತು ಅವರ ಕುಟುಂಬಸ್ಥರ ಭೇಟಿಯನ್ನು ಅಮಾನವೀಯ ಎಂದು ಕರೆದಿರುವ ಬಲೂಚಿಸ್ತಾನ ಪ್ರಜೆಗಳು, ಜಾದವ್ ಪತ್ನಿ ಚೇತನಾ ಅವರ ಚಪ್ಪಲಿ, ತಾಳಿ, ಸಿಂಧೂರವನ್ನು ಅಳಿಸುವ ಮೂಲಕ  ಪಾಕಿಸ್ತಾನ ತನ್ನ ಕ್ರೂರತ್ವವನ್ನು ಜಗತ್ತಿಗೇ ಪರಿಚಯಿಸಿದೆ ಎಂದು ಹೇಳಿದ್ದಾರೆ. ಅಂತೆಯೇ ಅಮೆರಿಕನ್ನರು ಬಲೂಚ್ ಪ್ರಜೆಗಳ ಸ್ನೇಹಿತರಾಗಿದ್ದು, ತಮ್ಮ ಪ್ರತಿಭಟನೆಗೆ ಬೆಂಬಲ ನೀಡಿದ್ದಾರೆ ಎಂದು ಬಲೂಚಿಸ್ತಾನ ಮೂಲದ ಅಹ್ಮರ್  ಮುಸ್ತಿಖಾನ್ ಹೇಳಿದ್ದಾರೆ.
ಅಲ್ಲದೆ ಜಾದವ್ ಮತ್ತು ಅವರ ಕುಟುಂಬಸ್ಥರ ಭೇಟಿ ಸಂಪೂರ್ಣ ಪಾಕಿಸ್ತಾನ ನಿಯಂತ್ರಿತ ಭೇಟಿಯಾಗಿದ್ದು, 40 ನಿಮಿಷಗಳ ಭೇಟಿ ಪಾಕಿಸ್ತಾನ ಅಧಿಕಾರಿಗಳ ಆದೇಶದಂತೆ ಸಾಗಿತ್ತು ಎಂಜು ಅವರು ಆರೋಪಿಸಿದ್ದಾರೆ.
ಇದೇ ವೇಳೆ ಮಾತನಾಡಿದ ಅಮೆರಕಿದಲ್ಲಿರುವ ಹಿಂದೂ ಸಂಘಟನೆಯ ಮುಖಂಡ ಕೃಷ್ಣಗುಡಿಪಟಿ ಅವರು, ಜಾದವ್ ಕುಟುಂಬಸ್ಥರ ಪಾಕಿಸ್ತಾನ ಭೇಟಿ ಪ್ರಕರಣ ಪಾಕ್ ನ ನೀಚ ಕೃತ್ಯಗಳಿಗೆ ಒಂದು ಉದಾಹರಣೆಯಾಗಿದೆ. ಹಿಂದೂ  ಸಂಪ್ರದಾಯದಲ್ಲಿ ಗಂಡ ಸತ್ತಾಗ ಮಾತ್ರ ಹಣೆಯಲ್ಲಿನ ಸಿಂಧೂರ ಮತ್ತು ಮಾಂಗಲ್ಯವನ್ನು ತೆಗೆಸಲಾಗುತ್ತದೆ. ಆದರೆ ಪಾಕಿಸ್ತಾನ ಜಾದವ್ ಬದುಕಿರುವಾಗಲೇ ಅವರ ಬಿಂದಿ ಮತ್ತು ಮಾಂಗಲ್ಯ ತೆಗೆಸಿ ಅಮಾನವೀಯತೆ ಮೆರಿದಿದೆ  ಎಂದು ಕಿಡಿಕಾರಿದ್ದಾರೆ. ಅಂತೆಯೇ ಪಾಕಿಸ್ತಾನದ ವಿರುದ್ಧ ಆರ್ಥಿಕ ನಿರ್ಬಂಧ ಹೇರಿ ಎಂದು ಆಗ್ರಹಿಸಿದ್ದಾರೆ.
ಒಟ್ಟಾರೆ ಅಮೆರಿಕದ ವಾಷಿಂಗ್ಟನ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com