ಇರಾನ್ ನಿಂದ ಕಚ್ಚಾ ತೈಲ ಆಮದಿಗೆ ನಿರ್ಬಂಧ: ಅಮೆರಿಕಾದ ಒತ್ತಡಕ್ಕೆ ಮಣಿಯುವುದೇ ಭಾರತ?

ಮುಂದಿನ ನವೆಂಬರ್ ನಿಂದ ಬದಲಿ ಕಚ್ಚಾ ತೈಲ ಪೂರೈಕೆ ಮೂಲಗಳನ್ನು ನೋಡಿಕೊಳ್ಳುವಂತೆ ಕೇಂದ್ರ ...
ಪ್ರಧಾನಿ ನರೇಂದ್ರ ಮೋದಿಯವರನ್ನು ನಿನ್ನೆ ದೆಹಲಿಯಲ್ಲಿ ಭೇಟಿ ಮಾಡಿದ ಅಮೆರಿಕಾ ರಾಯಭಾರಿ ನಿಕ್ಕಿ ಹ್ಯಾಲೆ
ಪ್ರಧಾನಿ ನರೇಂದ್ರ ಮೋದಿಯವರನ್ನು ನಿನ್ನೆ ದೆಹಲಿಯಲ್ಲಿ ಭೇಟಿ ಮಾಡಿದ ಅಮೆರಿಕಾ ರಾಯಭಾರಿ ನಿಕ್ಕಿ ಹ್ಯಾಲೆ

ನವದೆಹಲಿ: ಮುಂದಿನ ನವೆಂಬರ್ ನಿಂದ ಬದಲಿ ಕಚ್ಚಾ ತೈಲ ಪೂರೈಕೆ ಮೂಲಗಳನ್ನು ನೋಡಿಕೊಳ್ಳುವಂತೆ ಕೇಂದ್ರ ಸರ್ಕಾರ ತೈಲ ಸಂಸ್ಕರಣಾಗಾರಗಳಿಗೆ ಸೂಚನೆ ನೀಡಿದೆ. ಅಮೆರಿಕಾ ಇರಾನ್ ನಿಂದ ತೈಲ ಆಮದು ಮೇಲೆ ನಿರ್ಬಂಧ ಹೇರಲಿರುವುದರಿಂದ ಸರ್ಕಾರ ಈ ಸೂಚನೆ ನೀಡಿದೆ.

ಇರಾನ್ ನಿಂದ ಎಲ್ಲಾ ಕಚ್ಚಾ ತೈಲ ಆಮದುಗಳನ್ನು ನಿಲ್ಲಿಸುವಂತೆ ಅಮೆರಿಕಾ ಹೇರಿರುವ ಒತ್ತಾಯವನ್ನು ಭಾರತ ಇನ್ನೂ ಸ್ವೀಕರಿಸಿಲ್ಲ. ಈ ಮಧ್ಯೆಯೇ ತೈಲ ಸಚಿವಾಲಯ ಸಂಸ್ಕರಣಾಗಾರಗಳು ಮುಂದಿನ ನಾಲ್ಕೈದು ತಿಂಗಳಲ್ಲಿ ತೈಲ ಪೂರೈಕೆಯಲ್ಲಿ ಉಂಟಾಗಬಹುದಾದ ವ್ಯತ್ಯಯಕ್ಕೆ ಸಿದ್ದವಾಗಿರುವಂತೆ ಹೇಳಿದೆ. ಬೇರೆ ರಾಷ್ಟ್ರಗಳಾದ ಸೌದಿ ಅರೇಬಿಯಾ, ಕುವೈತ್ ಮೊದಲಾದ ಕಡೆಗಳಿಂದ ತೈಲ ಪೂರೈಕೆಯ ಮೂಲಗಳನ್ನು ಹುಡುಕಿಕೊಳ್ಳುವಂತೆ ಹೇಳಿರುವುದು ಸರ್ಕಾರದ ನಡೆಯ ಬಗ್ಗೆ ಸಂಶಯ ಮೂಡಿಸುತ್ತಿದೆ.

ವಿಶ್ವಸಂಸ್ಥೆ ಹೇರುವ ನಿರ್ಬಂಧವನ್ನು ಮಾತ್ರ ಪರಿಗಣಿಸುವುದಾಗಿ ಇಷ್ಟು ದಿನ ಭಾರತ ಹೇಳಿಕೊಂಡು ಬಂದಿದ್ದರೂ ಇದೀಗ ತೈಲ ಸಂಸ್ಕರಣಾಗಾರಗಳಿಗೆ ತೈಲ ಪೂರೈಕೆಗೆ ಬದಲಿ ಮೂಲಗಳನ್ನು ಕಂಡುಕೊಳ್ಳುವಂತೆ ಹೇಳಿರುವುದು ಅಮೆರಿಕಾದ ಒತ್ತಡಕ್ಕೆ ಮಣಿಯುತ್ತದೆಯೇ ಎಂಬ ಸಂದೇಹವನ್ನುಂಟುಮಾಡುತ್ತಿದೆ.

ಇರಾನ್ ನಿಂದ ತೈಲ ಪೂರೈಕೆಯಾಗುವಲ್ಲಿ ಕಡಿತವಾಗುವ ಸಾಧ್ಯತೆಯಿದೆ ಆದರೆ ಸಂಪೂರ್ಣವಾಗಿ ತೈಲ ಆಮದಿಗೆ ನಿರ್ಬಂಧ ಹೇರುವುದು ಸಾಧ್ಯವಿಲ್ಲ ಎಂದು ವಿಶ್ಲೇಷಕರು ಹೇಳುತ್ತಾರೆ. ಭಾರತಕ್ಕೆ ಪ್ರಸ್ತುತ ಕಚ್ಚಾ ತೈಲ ಪೂರೈಕೆ ಮಾಡುತ್ತಿರುವ ರಾಷ್ಟ್ರಗಳಲ್ಲಿ ಇರಾನ್ ಮೂರನೇ ಸ್ಥಾನದಲ್ಲಿದೆ. ಕಳೆದ ಕೆಲ ತಿಂಗಳುಗಳಲ್ಲಿ ಇರಾನ್ ನಿಂದ ಭಾರತಕ್ಕೆ ಪೂರೈಕೆಯಾಗುತ್ತಿರುವ ತೈಲ ಪ್ರಮಾಣ ಇನ್ನೂ ಹೆಚ್ಚಾಗಿತ್ತು. ಮುಂದಿನ ದಿನಗಳಲ್ಲಿ ಇರಾನ್ ನಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳುವುದು ಅದು ರೂಪಾಯಿ ಆಧಾರದ ಮೇಲೆ ಹಣ ಪಾವತಿ ಮಾಡುವುದಕ್ಕೆ ಒಪ್ಪಿಕೊಳ್ಳುವುದರ ಮೇಲೆ ನಿರ್ಧರಿತವಾಗಲಿದೆ ಎನ್ನುತ್ತಾರೆ ಅವರು.

ಇಂದಿನ ಪರಿಸ್ಥಿತಿ ಅನಿಶ್ಚಿತವಾಗಿದೆ. ಭಾರತ, ಇರಾನ್ ನಿಂದ ತೈಲ ಆಮದು ಮಾಡಿಕೊಳ್ಳುತ್ತದೆಯೇ ಇಲ್ಲವೇ ಎಂಬುದು ಸಂಧಾನ ಮಾತುಕತೆ ಆಧಾರದ ಮೇಲೆ ಮುಂದಿನ ದಿನಗಳಲ್ಲಿ ನಿರ್ಧಾರವಾಗಲಿದೆ ಎಂದು ತೈಲ ಕೈಗಾರಿಕೆ ಮೂಲಗಳು ಹೇಳುತ್ತವೆ.

ಈ ಹಿಂದೆ ಅಮೆರಿಕಾ ಮತ್ತು ಐರೋಪ್ಯ ಒಕ್ಕೂಟಗಳು ಇರಾನ್ ಮೇಲೆ ದಿಗ್ಬಂಧನ ಹೇರಿದ್ದಾಗ ಭಾರತ ತೈಲವನ್ನು ಅಲ್ಲಿಂದ ಆಮದು ಮಾಡಿಕೊಂಡಿತ್ತು. ಇನ್ನೂ ಕೆಲ ದೇಶಗಳು ಭಾರತದ ಕ್ರಮಗಳನ್ನು ಅನುಸರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com