ವಾಷಿಂಗ್ಟನ್: ಭಾರತ ಹಾಗೂ ಚೀನಾ ಸೇರಿದಂತೆ ಎಂಟು ರಾಷ್ಟ್ರಗಳು ಇರಾನ್ ನಿಂದ ತೈಲ ಖರೀದಿಸಲು ಅಮೆರಿಕದ ನಿರ್ಬಂಧದಿಂದ ತಾತ್ಕಾಲಿಕ ವಿನಾಯಿತಿ ನೀಡಲಾಗಿದೆ ಎಂದು ಸೋಮವಾರ ಅಮೆರಿಕ ವಿದೇಶಾಂಗ ಸಚಿವ ಮೈಕ್ ಪ್ಯಾಂಪೊ ಅವರು ಹೇಳಿದ್ದಾರೆ.
ಇರಾನ್ ಮೇಲೆ ನಿರ್ಬಂಧ ಹೇರಿದ ಬಳಿಕ ಈ ಎಂಟು ದೇಶಗಳು ಅಲ್ಲಿಂದ ತೈಲ ಆಮದು ಮಾಡಿಕೊಳ್ಳುವ ಪ್ರಮಾಣ ತಗ್ಗಿಸಿದ್ದರಿಂದ ಈ ವಿನಾಯ್ತಿ ನೀಡಲಾಗಿದೆ ಎಂದು ಮೈಕ್ ಪ್ಯಾಂಪೊ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಭಾರತ, ಚೀನಾ, ಇಟಲಿ, ಗ್ರೀಸ್, ದಕ್ಷಿಣ ಕೊರಿಯಾ, ತೈವಾನ್ ಹಾಗೂ ಟರ್ಕಿ ದೇಶಗಳಿಗೆ ಅಮೆರಿಕದ ನಿರ್ಬಂಧದಿಂದ ತಾತ್ಕಾಲಿಕ ವಿನಾಯಿತಿ ನೀಡಲಾಗಿದೆ ಎಂದು ಮೈಕ್ ಹೇಳಿದ್ದಾರೆ.
ಅಮೆರಿಕ ವಿಧಿಸಿರುವ ನಿರ್ಬಂಧಗಳು ನವೆಂಬರ್ ನಿನ್ನೆಯಿಂದ ಜಾರಿಗೆ ಬಂದಿದ್ದು, ನಿರ್ಬಂಧದ ನಂತರವೂ ಇರಾನ್ ನಿಂದ ತೈಲ ಆಮದು ಮಾಡಿಕೊಳ್ಳಲು ಭಾರತ ಅವಕಾಶ ಪಡೆದಿದ್ದರಿಂದ ದೇಶದಲ್ಲಿ ತೈಲ ದರ ಸ್ವಲ್ಪಮಟ್ಟಿಗೆ ಇಳಿಕೆಯಾಗುವ ಸಾಧ್ಯತೆಯಿದೆ.
ವಿನಾಯ್ತಿ ಪಡೆದಿರುವ ಎಲ್ಲ ದೇಶಗಳೂ ಏಷ್ಯಾ ಖಂಡದ ರಾಷ್ಟ್ರಗಳಾಗಿದ್ದು, ಇರಾನ್‌ನಿಂದ ಹೇರಳ ಪ್ರಮಾಣದಲ್ಲಿ ಕಚ್ಚಾ ತೈಲ ಆಮದು ಮಾಡಿಕೊಳ್ಳುವ ರಾಷ್ಟ್ರಗಳಾಗಿವೆ.
2015ರಲ್ಲಿ ಇರಾನ್ ಮೇಲಿನ ನಿರ್ಬಂಧಗಳನ್ನು ತೆರವುಗೊಳಿಸಿದ್ದ ಅಮೆರಿಕ, ಅದು ಭಯೋತ್ಪಾದನೆಗೆ ಉತ್ತೇಜನ ನೀಡುತ್ತಿದೆ ಎಂದು ಆರೋಪಿಸಿ ಈ ವರ್ಷದ ಆರಂಭದಲ್ಲಿ ಮತ್ತೆ ನಿರ್ಬಂಧ ವಿಧಿಸಿತ್ತು.
ನಿರ್ಬಂಧದ ಮೊದಲ ಹಂತ ಈಗಾಗಲೇ ಜಾರಿಯಲ್ಲಿದ್ದು, ಅದು ನವೆಂಬರ್ 4ರಿಂದ ಪೂರ್ಣ ಪ್ರಮಾಣದಲ್ಲಿ ಜಾರಿಯಾಗಲಿದೆ. ಈ ಅವಧಿಯಲ್ಲಿ ಭಾರತ ಸೇರಿದಂತೆ ಎಲ್ಲ ದೇಶಗಳೂ ಇರಾನ್‌ನಿಂದ ತೈಲ ಆಮದು ಮಾಡಿಕೊಳ್ಳುವುದನ್ನು ಸಂಪೂರ್ಣ ಸ್ಥಗಿತಗೊಳಿಸಲಿವೆ ಎಂದು ಅಮೆರಿಕ ನಿರೀಕ್ಷಿಸಿತ್ತು. ಆದರೆ ಅಂತಿಮವಾಗಿ ಭಾರತ ಇರಾನ್ ನಿಂದ ತೈಲ ಆಮದು ಮುಂದುವರೆಸಲು ಅವಕಾಶ ನೀಡಿದೆ.