ಜಾಗತಿಕ ಉಗ್ರರ ಪಟ್ಟಿಗೆ ಅಜರ್ ಮಸೂದ್ ಹೆಸರು: ಚೀನಾ ಎದುರು ಭಾರತಕ್ಕೆ ಭರ್ಜರಿ ಮೇಲುಗೈ

ದಶಕಗಳಿಂದಲೂ ಜೈಷ್ ಇ ಮೊಹಮದ್ ಉಗ್ರ ಸಂಘಟನೆ ಸಂಸ್ಥಾಪಕ ಅಜರ್ ಮಸೂದ್ ನನ್ನು ಜಾಗತಿಕ ಉಗ್ರ ಪಟ್ಟಿಗೆ ಸೇರಿಸಬೇಕು ಎಂಬ ತನ್ನ ಪ್ರಯತ್ನದಲ್ಲಿ ಭಾರತ ಚೀನಾ ವಿರುದ್ಧ ಮಹತ್ವದ ಮೇಲುಗೈ ಸಾಧಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ವಾಷಿಂಗ್ಟನ್: ದಶಕಗಳಿಂದಲೂ ಜೈಷ್ ಇ ಮೊಹಮದ್ ಉಗ್ರ ಸಂಘಟನೆ ಸಂಸ್ಥಾಪಕ ಅಜರ್ ಮಸೂದ್ ನನ್ನು ಜಾಗತಿಕ ಉಗ್ರ ಪಟ್ಟಿಗೆ ಸೇರಿಸಬೇಕು ಎಂಬ ತನ್ನ ಪ್ರಯತ್ನದಲ್ಲಿ ಭಾರತ ಚೀನಾ ವಿರುದ್ಧ ಮಹತ್ವದ ಮೇಲುಗೈ ಸಾಧಿಸಿದೆ.
ಪುಲ್ವಾಮ ಉಗ್ರ ದಾಳಿಗೆ ಸಂಬಂಧಿಸಿದಂತೆ ಇಂದು ನಡೆದ ಭದ್ರತಾ ಮಂಡಳಿಯಲ್ಲಿ ಉಗ್ರ ದಾಳಿಯನ್ನು ಖಂಡಿಸಿದ್ದು ಮಾತ್ರವಲ್ಲದೇ, ಜೈಷ್ ಇ ಮೊಹಮದ್ ಉಗ್ರ ಸಂಘಟನೆಯ ಹೆಸರನ್ನೂ ಪ್ರಸ್ತಾಪಿಸಿ ದಾಳಿಯನ್ನು ತೀವ್ರವಾಗಿ ಖಂಡಿಸಿದೆ. ಅಲ್ಲದೆ ಚೀನಾ ದೇಶವನ್ನೂ ಒಳಗೊಂಡಂತೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿರುವ ಶಾಶ್ವತ ಹಾಗೂ ತಾತ್ಕಾಲಿಕ ಸದಸ್ಯ ರಾಷ್ಟ್ರಗಳೂ ಕೂಡ ಉಗ್ರ ದಾಳಿಗೆ ಸಂಬಂಧಿಸಿದಂತೆ ಭಾರತದೊಂದಿಗೆ ಸಹಕರಿಸಬೇಕು ಎಂದು ಭದ್ರತಾ ಮಂಡಳಿಯಲ್ಲಿ ಅವಿರೋಧ ನಿರ್ಣಯ ಕೈಗೊಳ್ಳಲಾಗಿದೆ. 
ಇದು ಭಾರತಕ್ಕೆ ಅತ್ಯಂತ ಮಹತ್ವದ ಮೇಲುಗೈ ಆಗಿದ್ದು, ಉಗ್ರ ಮಸೂದ್ ಅಜರ್ ನನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸಬೇಕು ಎಂಬ ಭಾರತದ ದಶಕಗಳ ವಾದಕ್ಕೆ ಇದೀಗ ಮನ್ನಣೆ ಸಿಕ್ಕಂತಾಗಿದೆ. ಅಲ್ಲದೆ ಸಾಕ್ಷ್ಯಾಧಾರಗಳನ್ನು ನೀಡಿ ಎನ್ನುತ್ತಿದ್ದ ಚೀನಾಗೂ ಇದು ಭಾರಿ ಮುಖಭಂಗವಾಗಿದ್ದು, ಮುಂದಿನ ದಿನಗಳಲ್ಲಿ ಮತ್ತೆ ಈ ವಿಚಾರವನ್ನು ಭಾರತ ವಿಶ್ವಸಂಸ್ಥೆಯಲ್ಲಿ ಪ್ರಸ್ತಾಪಿಸಲಿದೆ. ಕೇವಲ ಭಾರತ ಮಾತ್ರವಲ್ಲದೇ ಅಮೆರಿಕ, ಫ್ರಾನ್ಸ್ ಮತ್ತು ರಷ್ಯಾ ದೇಶಗಳೂ ಕೂಡ ಉಗ್ರ ಮಸೂದ್ ಅಜರ್ ನನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸುವ ಪ್ರಸ್ತಾಪ ಮಂಡಿಸುವುದಾಗಿ ಘೋಷಣೆ ಮಾಡಿವೆ.
ಹೀಗಾಗಿ ಮುಂದಿನ ದಿನಗಳಲ್ಲಿ ಚೀನಾ ಮತ್ತು ಪಾಕಿಸ್ತಾನಕ್ಕೆ ಕಠಿಣ ಪರಿಸ್ಥಿತಿಗಳು ಎದುರಾಗಲಿದ್ದು, ಒಂದು ವೇಳೆ ಉಗ್ರ ಮಸೂದ್ ಅಜರ್ ನನ್ನು ರಕ್ಷಿಸುವ ನಿಟ್ಟಿನಲ್ಲಿ ಚೀನಾ ಯತ್ನಿಸಿದ್ದೇ ಆದರೆ ಆಗ ಖಂಡಿತಾ ಚೀನಾಗೆ ಮತ್ತೆ ಭಾರಿ ಮುಖಭಂಗವಾಗುವುದಲ್ಲಿ ಎರಡು ಮಾತಿಲ್ಲ.
ಈ ಹಿಂದೆ  ಮಸೂದ್ ಅಜರ್ ನನ್ನು ವಿಶ್ವಸಂಸ್ಥೆಯಿಂದ ನಿಷೇಧ ಹೇರುವಂತೆ ಮಾಡುವ ಭಾರತದ ಪ್ರಯತ್ನಕ್ಕೆ ಚೀನಾ ಮೂರು ಬಾರಿ ಅಡ್ಡಿಪಡಿಸಿತ್ತು. ವಿಶ್ವಸಂಸ್ಥೆಯು ನಿಷೇಧಿತ ಉಗ್ರರ ಪಟ್ಟಿಯನ್ನು ತಯಾರಿಸುವ ವಿಚಾರದಲ್ಲಿ ಈಗಾಗಲೇ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳಿಂದಲೇ ತೀವ್ರ ಆಕ್ಷೇಪವಿದೆ. ಹಾಗಾಗಿ, ಚೀನಾ ದೇಶವು ಈ ವಿಚಾರದಲ್ಲಿ ಯಾರನ್ನೂ ಬೆಂಬಲಿಸುವುದಿಲ್ಲ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಗೆಂಗ್ ಶುವಾಂಗ್ ಹೇಳಿದ್ದರು. 
ವಿಶ್ವಸಂಸ್ಥೆಯ 1267 ಭದ್ರತಾ ಸಮಿತಿಯ ಮುಂದೆ ಈ ವಿಚಾರ ಚರ್ಚೆಗೆ ಬಂದಾಗ, ಭಾರತದ ಬೇಡಿಕೆಗೆ ವಿಶ್ವ ಸಂಸ್ಥೆಯ ಉಳಿದ ಸದಸ್ಯ ರಾಷ್ಟ್ರಗಳ ಬೆಂಬಲ ಬೇಕಾಗುತ್ತದೆ. ಭಾರತದ ಬೇಡಿಕೆಗೆ ಪಾಕಿಸ್ತಾನ, ಚೀನಾ ಪ್ರತಿರೋಧ ಒಡ್ಡುತ್ತಿದೆ. ಸಂಸತ್ ದಾಳಿ, ಪಠಾಣ್ ಕೋಟ್ ದಾಳಿ ರೂವಾರಿ ಮೌಲಾನ ಮಸೂದ್ ಅಜರ್ ನನ್ನು ಜಾಗತಿಕ ಭಯೋತ್ಪಾದಕನಾಗಿ ಘೋಷಿಸಬೇಕು ಎಂಬ ಭಾರತದ ಬೇಡಿಕೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡಾ ಎರಡು ವರ್ಷಗಳ ಹಿಂದೆ ಬೆಂಬಲ ವ್ಯಕ್ತಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com