ಕಾಶ್ಮೀರ ವಿಚಾರವಾಗಿ ಮಧ್ಯಸ್ಥಿಕೆ ವಹಿಸುವಂತೆ ಪ್ರಧಾನಿ ಮೋದಿ ಟ್ರಂಪ್ ರನ್ನು ಕೇಳಿಲ್ಲ: ದೊಡ್ಣಣ್ಣನಿಗೆ ತಿವಿದ ಭಾರತ

ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿದಂತೆ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಹೇಳಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ಭಾರತ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು, ಮಧ್ಯಸ್ಥಿಕೆ ವಹಿಸುವಂತೆ ಪ್ರಧಾನಿ ಮೋದಿ ಟ್ರಂಪ್ ರನ್ನು ಕೇಳಿಲ್ಲ ಎಂದು ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವಿನ ತಿಕ್ಕಾಟಕ್ಕೆ ಕಾರಣವಾಗಿರುವ ಜಮ್ಮು ಮತ್ತು ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿದಂತೆ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಹೇಳಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ಭಾರತ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು, ಮಧ್ಯಸ್ಥಿಕೆ ವಹಿಸುವಂತೆ ಪ್ರಧಾನಿ ಮೋದಿ ಟ್ರಂಪ್ ರನ್ನು ಕೇಳಿಲ್ಲ ಎಂದು ಹೇಳಿದೆ.
ಅಲಿಪ್ತ ಕೂಟದ (ಎನ್‌ಎಎಮ್‌) ದೇಶಗಳ ಸಭೆಯಲ್ಲಿ ಕಾಶ್ಮೀರ ವಿಷಯ ಪ್ರಸ್ತಾ‍ಪಿಸಿದ ಪಾಕಿಸ್ತಾನ ನಿಲುವಿಗೆ ಭಾರತ ಆಕ್ಷೇಪ ವ್ಯಕ್ತಪಡಿಸಿದ್ದು, ಅಷ್ಟು ಮಾತ್ರವಲ್ಲದೇ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಹೇಳಿರುವ ಅಮೆರಿಕ ನಡೆಯನ್ನು ಭಾರತ ಟೀಕಿಸಿದೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ವಿದೇಶಾಂಗ ಇಲಾಖೆ, ವೆನಿಜುವೆಲ ರಾಜಧಾನಿ ಕಾರಕಸ್‌ನಲ್ಲಿ ನಡೆದ ಅಲಿಪ್ತ ರಾಷ್ಟ್ರಗಳ ಸಂಪುಟ ಸಭೆಯಲ್ಲಿ ಪಾಕ್‌ನ ಈ ನಡೆಯನ್ನು ಖಂಡಿಸಿದೆ. ಇದು ‘ಸ್ವಹಿತಾಸಕ್ತಿಯ ಧೋರಣೆ’ ಆಗಿದ್ದು, ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ‘ಗಾಳಿ ಹಿಡಿಯುವ ಸಾಹಸಕ್ಕೆ’ ಪಾಕಿಸ್ತಾನ ಮುಂದಾಗಿದೆ ಎಂದು ಕಿಡಿಕಾರಿದೆ. 
ಈ ಬಗ್ಗೆ ಟ್ವೀಟ್ ಮಾಡಿರುವ ವಿದೇಶಾಂಗ ಇಲಾಖೆ ಸಚಿವ ರವೀಶ್ ಕುಮಾರ್ ಅವರು, 'ಕಾಶ್ಮೀರ ವಿಚಾರವಾಗಿ ನಾವು ಅಮೆರಿಕವನ್ನು ಮಧ್ಯಸ್ಥಿಕೆ ವಹಿಸುವಂತೆ ಕೇಳಿಲ್ಲ. ಹೀಗಿರುವಾಗ ಆ ರೀತಿಯ ಹೇಳಿಕೆ ಸರಿಯಲ್ಲ.  ಈ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಟ್ರಂಪ್ ರ ಬಳಿ ಯಾವುದೇ ರೀತಿಯ ಮನವಿ ಮಾಡಿಲ್ಲ. ಶಿಮ್ಲಾ ಒಪ್ಪಂದ ಮತ್ತು ಲಾಹೋರ್ ಘೋಷಣಾ ಒಪ್ಪಂದ ಉಭಯ ದೇಶಳಗಳ ನಡುವಿನ ಗಡಿ ವಿವಾದ ಬಗೆಹರಿಸುವ ಸಂಬಂಧ ಒಪ್ಪಂದ ಮಾಡಿಕೊಳ್ಳಲಾಗಿದೆ. ಒಪ್ಪಂದದ ಅನ್ವಯ ಪಾಕಿಸ್ತಾನ ಸ್ಪಂದಿಸಬೇಕಿತ್ತು. ಆದರೆ ಆ ದೇಶ ಈ ವರೆಗೂ ಆ ಒಪ್ಪಂದಗಳನ್ನು ಸರಿಯಾಗಿ ಪಾಲನೆ ಮಾಡಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಇದೇ ವಿಚಾರವಾಗಿ ಮಾತನಾಡಿರುವ ವಿಶ್ವಸಂಸ್ಥೆಯಲ್ಲಿರುವ ಭಾರತದ ರಾಯಭಾರಿ ಸೈಯದ್ ಅಕ್ಬರುದ್ದೀನ್‌, 'ಜವಾಬ್ದಾರಿಯುತವಾಗಿ ವರ್ತಿಸಬೇಕಾದ ದೇಶ ಒಕ್ಕೂಟದ ಆಶಯಗಳನ್ನು ಉಲ್ಲಂಘಿಸಿ ಪ್ರಾದೇಶಿಕ ಸಮಸ್ಯೆಯನ್ನು ಮುನ್ನಲೆಗೆ ತರುತ್ತಿದೆ. ಭಯೋತ್ಪಾದನೆ, ಹವಾಮಾನ ವೈಪರೀತ್ಯ ಸಮಸ್ಯೆಗಳನ್ನು ಜಗತ್ತು ಎದುರಿಸುತ್ತಿದೆ. ಇವುಗಳ ಬಗ್ಗೆ ಅದು ಗಮನ ಹರಿಸಲಿ ಎಂದು ಪಾಕಿಸ್ತಾನದ ಹೆಸರೆತ್ತದೆ ಟೀಕಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com