ಪ್ರಧಾನಿ ಮೋದಿ- ಇಮ್ರಾನ್ ಖಾನ್ ಪರಸ್ಪರ ಚರ್ಚಿಸಿ ನಿರ್ಣಯ ಕೈಗೊಂಡರೆ ಒಳಿತು: ಡೊನಾಲ್ಡ್ ಟ್ರಂಪ್

ಕಾಶ್ಮೀರ ವಿಚಾರವಾಗಿ ಭಾರತ-ಪಾಕ್ ಶಾಶ್ವತ ಪರಿಹಾರದತ್ತ ಚಿಂತಿಸಬೇಕು ಎಂದು ಹೇಳಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಕುರಿತಂತೆ ಪ್ರಧಾನಿ ಮೋದಿ-ಇಮ್ರಾನ್ ಖಾನ್ ಪರಸ್ಪರ ಚರ್ಚಿಸಿ ಕಾಶ್ಮೀರ ಕುರಿತು ನಿರ್ಣಯ ಕೈಗೊಂಡರೆ ಅದ್ಭುತವಾಗಿರುತ್ತದೆ ಎಂದು ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕಾಶ್ಮೀರ ವಿಚಾರವಾಗಿ ಭಾರತ-ಪಾಕ್ ಶಾಶ್ವತ ಪರಿಹಾರದತ್ತ ಚಿಂತಿಸಬೇಕು ಮತ್ತು ಅದಕ್ಕೆ ತಕ್ಕಂತೆ ಯೋಜನೆ ರೂಪಿಸಬೇಕು ಎಂದ ಅಮೆರಿಕ ಅಧ್ಯಕ್ಷ

ವಾಷಿಂಗ್ಟನ್: ಕಾಶ್ಮೀರ ವಿಚಾರವಾಗಿ ಭಾರತ-ಪಾಕ್ ಶಾಶ್ವತ ಪರಿಹಾರದತ್ತ ಚಿಂತಿಸಬೇಕು ಎಂದು ಹೇಳಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಕುರಿತಂತೆ ಪ್ರಧಾನಿ ಮೋದಿ-ಇಮ್ರಾನ್ ಖಾನ್ ಪರಸ್ಪರ ಚರ್ಚಿಸಿ ಕಾಶ್ಮೀರ ಕುರಿತು ನಿರ್ಣಯ ಕೈಗೊಂಡರೆ ಅದ್ಭುತವಾಗಿರುತ್ತದೆ ಎಂದು ಹೇಳಿದ್ದಾರೆ.

ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಚರ್ಚೆ ಬಳಿಕ ಮಾತನಾಡಿದ ಟ್ರಂಪ್, ಕಾಶ್ಮೀರ ವಿಚಾರವಾಗಿ ಭಾರತ ಮತ್ತು ಪಾಕಿಸ್ತಾನ ಶಾಶ್ವತ ಪರಿಹಾರದ ಕುರಿತು ಆಲೋಚಿಸಬೇಕು. ಈ ಕುರಿತು ಪ್ರಧಾನಿ ಮೋದಿ ಮತ್ತು ಇಮ್ರಾನ್ ಖಾನ್ ಪರಸ್ಪರ ಕುಳಿತು ಚರ್ಚೆ ನಡೆಸಿದರೆ ಅದ್ಭುತವಾಗಿರುತ್ತದೆ. ಆದರೆ ಭಾರತ ಪಾಕಿಸ್ತಾನದೊಂದಿಗೆ ಮಾತುಕತೆಗೆ ಸಿದ್ಧವಾಗಿದ್ದರೂ, ಪಾಕಿಸ್ತಾನದಿಂದ ಕೆಲ ಕಾರ್ಯಗಳನ್ನು ನಿರೀಕ್ಷಿಸುತ್ತಿದೆ ಎಂದು ಹೇಳಿದ್ದಾರೆ.

ಇನ್ನು ವಿಶ್ವಸಂಸ್ಥೆಯ ಸಭೆ ನಿಮಿತ್ತ ಅಮೆರಿಕಕ್ಕೆ ತೆರಳಿರುವ ಪ್ರಧಾನಿ ಮೋದಿ ಇದೇ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿ ಮಾಡಿ ಸುಮಾರು 40 ನಿಮಿಷಗಳ ಕಾಲ ಚರ್ಚೆ ನಡೆಸಿದರು. ಪ್ರಮುಖವಾಗಿ ದ್ವಿಪಕ್ಷೀಯ ಒಪ್ಪಂದಗಳ ಕುರಿತು ಮೋದಿ-ಟ್ರಂಪ್ ಚರ್ಚೆ ನಡೆಸಿದ್ದು, ಇದೇ ವೇಳೆ ಕಾಶ್ಮೀರ ವಿಚಾರವಾಗಿಯೂ ಉಭಯ ನಾಯಕರು ಚರ್ಚಿಸಿದ್ದಾರೆ.

ಪ್ರಮುಖವಾಗಿ ಭಾರತ ಭಯೋತ್ಪಾದನೆ ಕುರಿತಂತೆ ಪಾಕಿಸ್ತಾನ ಕಠಿಣ ನಿಲುವು ತಳೆಯದಹೊರತು ತಾನು ಮಾತುಕತೆ ನಡೆಸುವುದಿಲ್ಲ ಎಂದು ಕಡ್ಡಿ ಮುರಿದಂತೆ ಈ ಹಿಂದೆಯೇ ಹೇಳಿತ್ತು. ಇದೇ ವಿಚಾರವಾಗಿ ಮಾಹಿತಿ ನೀಡಿರುವ ಕೇಂದ್ರ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಅವರು, ಕಳೆದ 30 ವರ್ಷಗಳಲ್ಲಿ ಕಣಿವೆ ರಾಜ್ಯದಲ್ಲಿ ಭಯೋತ್ಪಾದನೆಯಿಂದಾಗಿ ಬರೊಬ್ಬರಿ 42 ಸಾವಿರ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಭಯೋತ್ಪಾದನೆಗೆ ಒಂದು ದೇಶ ಮತ್ತು ಅತರ ಸೇನೆ, ಗುಪ್ತಚರ ಸಂಸ್ಛೆ ಕೆಲಸ ಮಾಡುತ್ತಿರುವುದು ಈಗ ರಹಸ್ಯವಾಗಿಯೇನೂ ಉಳಿದಿಲ್ಲ. ಹೀಗಿದ್ದೂ ಅಂತಾರಾಷ್ಟ್ಪೀಯ ಸಮುದಾಯ ಈ ಕುರಿತು ನಿರ್ಣಾಯಕ ಕ್ರಮ ಕೈಗೊಳ್ಳುತ್ತಿಲ್ಲ. ಹೀಗಾಗಿ ಈ ಮೂಲಕ ತಾವು ವಿಶ್ವ ಸಮುದಾಯಕ್ಕೆ ಮನವಿ ಮಾಡುತ್ತಿದ್ದು, ಆ ದೇಶದ ಮೇಲೆ ಒತ್ತಡ ಹೇರುವಂತೆ ಒತ್ತಾಯಿಸುತ್ತಿದ್ದೇವೆ ಎಂದು ಗೋಖಲೆ ಹೇಳಿದರು.

ಅಂತೆಯೇ ಪಾಕಿಸ್ತಾನದೊಂದಿಗಿನ ಮಾತುಕತೆ ಕುರಿತು ಮಾತನಾಡಿದ ಗೋಖಲೆ, ಪಾಕಿಸ್ತಾನದ ನಾಯಕರೊಂದಿಗೆ ಚರ್ಚೆ ನಡೆಸಲು ನಮಗೆ ಯಾವುದೇ ಮುಜುಗರವಿಲ್ಲ. ಆದರೆ ಅವರು ಮೊದಲು ತಮ್ಮ ನೆಲದಲ್ಲಿ ಬೆಳೆಯುತ್ತಿರುವ ಭಯೋತ್ಪಾದನೆ ಎಂಬ ವಿಷದ ಗಿಡವನ್ನು ಬುಡಸಹಿತ ಕಿತ್ತು ಬಿಸಾಡಬೇಕು. ಆಗ ಮಾತ್ರ ಪಾಕಿಸ್ತಾನದೊಂದಿಗೆ ಕಾಶ್ಮೀರ ವಿಚಾರವಾಗಿ ಚರ್ಚೆ ನಡೆಸಲು ನಾವೇ ಮುಂದಾಗುತ್ತೇವೆ ಎಂದು ಗೋಖಲೆ ಹೇಳಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com