ಮಹಾಮಾರಿ ಕೊರೋನಾ: ಸಾವಿನಲ್ಲಿ ಇಟಲಿ ಹಿಂದಿಕ್ಕಿದ ಅಮೆರಿಕಾ, 20 ಸಾವಿರಕ್ಕೇರಿದ ಮೃತರ ಸಂಖ್ಯೆ
ವಾಷಿಂಗ್ಟನ್: ವಿಶ್ವದಲ್ಲೇ ಸುಸಜ್ಜಿತ ಆರೋಗ್ಯ ಸೇವೆ ಹೊಂದಿರುವ ಅಮೆರಿಕಾ ರಾಷ್ಟ್ರದಲ್ಲಿ ಮಹಾಮಾರಿ ಕೊರೋನಾ ವೈರಸ್ ನಿಂದ ತೀವ್ರವಾಗಿ ತತ್ತರಿಸಿ ಹೋಗಿದೆ. ಶುಕ್ರವಾರ ಒಂದೇ ದಿನ ಅಮೆರಿಕಾದಲ್ಲಿ ಸಾರ್ವಕಾಲಿಕ ದಾಖಲೆಯ 2100 ಮಂದಿ, ಶನಿವಾರ 1300 ಮಂದಿ ವೈರಾಣುವಿಗೆ ಬಲಿಯಾಗಿದ್ದಾರೆ.
ಈ ಸಂಖ್ಯೆಗಲಿಂದಾಗಿ ಈ ವರೆಗೆ ಸಾವಿನ ಸಂಖ್ಯೆಯಲ್ಲಿ ವಿಶ್ವದಲ್ಲಿಯೇ ಪ್ರಥಮ ಸ್ಥಾನದಲ್ಲಿದ್ದ ಇಟಲಿಯನ್ನು ಅಮೆರಿಕಾ ಶನಿವಾರ ಹಿಂದಿಕ್ಕಿ, ಪ್ರಥಮ ಸ್ಥಾನಕ್ಕೇರಿದೆ. ಅಮೆರಿಕಾದಲ್ಲಿನ ಒಟ್ಟು ಸಾವಿನ ಸಂಖ್ಯೆ 20 ಸಾವಿರಕ್ಕೆ ಏರಿಕೆಯಾಗಿದೆ.
ಮತ್ತೊಂದೆಡೆ ಅಮೆರಿಕಾದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಕೂಡ 5 ಲಕ್ಷ ಗಡಿ ದಾಟಿದೆ. ವಿಶ್ವದಲ್ಲಿಯೇ ಈ ಸಂಖ್ಯೆಯೂ ಅಧಿಕ. ಹೀಗಾಗಿ ಕೊರೋನಾ ವಿಷಯದಲ್ಲೂ ಅಮೆರಿಕಾ ವಿಶ್ವಕ್ಕೆ ದೊಡ್ಡಣ್ಣ ಎನಿಸಿಕೊಂಡಿದೆ.
ಏ.7ರಂದು ಅಮೆರಿಕಾದಲ್ಲಿ ಒಂದೇ ದಿನ 1939 ಮಂದಿ ಸಾವಿಗಿಡಾಗಿದ್ದು, ಈ ವರೆಗಿನ ಗರಿಷ್ಠ ಎನಿಸಿಕೊಂಡಿತ್ತು. ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ, ಶುಕ್ರವಾರ ರಾತ್ರಿ 8.30ಕ್ಕೆ (ಅಮೆರಿಕಾ ಕಾಲಮಾನ) ಕೊನೆಗೊಂಡ 24 ಗಂಟೆಯಲ್ಲಿ ಅಮೆರಿಕಾದಲ್ಲಿ 2,108 ಮಂದಿ ಸಾವನ್ನಪ್ಪಿದ್ದಾರೆ.
ಮತ್ತೊಂದೆಡೆ ಶನಿವಾರ 1000ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ. ಇದರಿಂದಾಗಿ ಅಮೆರಿಕಾದ ಸಾವಿನ ಸಂಖ್ಯೆ 20 ಸಾವಿರಕ್ಕೇರಿಕೆಯಾಗಿದೆ. ಇಟಲಿಯಲ್ಲಿ ಸಾವಿನ ಸಂಖ್ಯೆ 19000ದಲ್ಲಿದೆ. ಹೀಗಾಗಿ ಇಟಲಿಯನ್ನು ಅಮೆರಿಗಾ ಹಿಂದಿಕ್ಕಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ