ಪಾಕಿಸ್ತಾನಕ್ಕೆ ಹಣದ ಸಾಲ ಕೊಡಲ್ಲ, ಇಂಧನ ಪೂರೈಕೆ ಮಾಡಲ್ಲ: ಸೌದಿ ಅರೇಬಿಯಾ

ಪಾಕಿಸ್ತಾನಕ್ಕೆ ಇನ್ನು ಮುಂದೆ ತಾನು ಹಣದ ಸಾಲ ಅಥವಾ ತೈಲ ಪೂರೈಕೆ ಮಾಡುವುದಿಲ್ಲ ಎಂದು ಸೌದಿ ಅರೇಬಿಯಾ ಹೇಳಿದೆ.
ಇಮ್ರಾನ್ ಖಾನ್ ಮತ್ತು ಸೌದಿ ದೊರೆ
ಇಮ್ರಾನ್ ಖಾನ್ ಮತ್ತು ಸೌದಿ ದೊರೆ
Updated on

ಲಂಡನ್: ಪಾಕಿಸ್ತಾನಕ್ಕೆ ಇನ್ನು ಮುಂದೆ ತಾನು ಹಣದ ಸಾಲ ಅಥವಾ ತೈಲ ಪೂರೈಕೆ ಮಾಡುವುದಿಲ್ಲ ಎಂದು ಸೌದಿ ಅರೇಬಿಯಾ ಹೇಳಿದೆ.

ಈ ಬಗ್ಗೆ ಮಿಡ್ಲ್ ಈಸ್ಟ್ ಮಾನಿಟರ್ ಸುದ್ದಿ ಸಂಸ್ಥೆ ವರದಿ ಮಾಡಿದ್ದು, ಪಾಕಿಸ್ತಾನ ಮತ್ತು ಸೌದಿ ಅರೇಬಿಯಾ ನಡುವಿನ ಸ್ನೇಹ ಸಂಬಂಧ ಕೊನೆಗೂ ಅಂತ್ಯವಾಗಿದ್ದು, ಪಾಕಿಸ್ತಾನಕ್ಕೆ ಇನ್ನು ಮುಂದೆ ತಾನು ಹಣದ ಸಾಲ ಅಥವಾ ತೈಲ ಪೂರೈಕೆ ಮಾಡುವುದಿಲ್ಲ ಎಂದು ಸೌದಿ ಅರೇಬಿಯಾ ಘೋಷಣೆ ಮಾಡಿದೆ ಎಂದು ಹೇಳಿದೆ.

2018ರ ನವೆಂಬರ್ ನಲ್ಲಿ ಸೌದಿ ಅರೇಬಿಯಾವು ಘೋಷಣೆ ಮಾಡಿದ್ದ 6.2 ಬಿಲಿಯನ್ ಡಾಲರ್ ಪ್ಯಾಕೇಜ್ ನ ಭಾಗವಾಗಿತ್ತು ಆ ಸಾಲ. ಅದರಲ್ಲಿ 3 ಬಿಲಿಯನ್ ಹಣದ ರೂಪದ ಸಾಲ ಹಾಗೂ 3.2 ಬಿಲಿಯನ್ ಮೊತ್ತದ ತೈಲವನ್ನು ಸಾಲವನ್ನು ನೀಡುವ ಒಪ್ಪಂದ ಅದಾಗಿತ್ತು. ಕಳೆದ ವರ್ಷ ಫೆಬ್ರವರಿಯಲ್ಲಿ ರಾಜ ಮೊಹಮ್ಮದ್ ಬಿನ್ ಸಲ್ಮಾನ್ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ್ದರು. ಆದರೆ ಈಗ ಪಾಕಿಸ್ತಾನಕ್ಕೆ ತಾನು ಹಣದ ಸಾಲ ಮತ್ತು ಇಂಧನ ಪೂರೈಕೆ ಮಾಡುವುದಿಲ್ಲ ಎಂದು ಸೌದಿ ಘೋಷಣೆ ಮಾಡಿದೆ. 

ಸೌದಿ-ಪಾಕ್ ಸ್ನೇಹಕ್ಕೆ ಧಕ್ಕೆ ತಂದ ವಿದೇಶಾಂಗ ಸಚಿವ ಶಾ ಮಹ್ಮೂದ್ ಖುರೇಷಿ
ಇನ್ನು ಈ ಹಿಂದೆ ಕಾಶ್ಮೀರ ವಿಚಾರವಾಗಿ ಪಾಕಿಸ್ತಾನ ಸೌದಿ ವಿರುದ್ಧ ಮುನಿಸಿಕೊಂಡಿತ್ತು. ಸೌದಿ ಪಾರಮ್ಯ ಇರುವ ಆರ್ಗನೈಸೇಷನ್ ಆಫ್ ಇಸ್ಲಾಮಿಕ್ ಕೋಆಪರೇಷನ್ (OIC) ಕಾಶ್ಮೀರ ವಿಚಾರದಲ್ಲಿ ಅಗತ್ಯ ಪ್ರಮಾಣದಲ್ಲಿ ಏನನ್ನೂ ಮಾಡುತ್ತಿಲ್ಲ ಎಂದು ಪಾಕಿಸ್ತಾನ ಟೀಕೆ ಮಾಡಿತ್ತು.  ಕಾಶ್ಮೀರ ವಿಚಾರವಾಗಿಯೇ ಪ್ರತ್ಯೇಕ ಸೆಷನ್ ಮಾಡದಿದ್ದಲ್ಲಿ OICಯನ್ನೇ ವಿಭಜಿಸುವುದಾಗಿ ಪಾಕಿಸ್ತಾನದ ವಿದೇಶಾಂಗ ಸಚಿವ ಬೆದರಿಕೆಯೊಡ್ಡಿದ್ದರು. ಕಾಶ್ಮೀರ ವಿಚಾರದಲ್ಲಿ ಒಐಸಿಯಲ್ಲಿ ಚರ್ಚೆ ನೇತೃತ್ವ ವಹಿಸಲೇಬೇಕು ಎಂದು ಆಗ್ರಹಿಸಿತ್ತು.

ಕಾಶ್ಮೀರ ವಿಷಯ ಕುರಿತು ಪ್ರತ್ಯೇಕ ಚರ್ಚೆಗೆ ಆಗ್ರಹ 
ಆದರೆ, ಭಾರತದೊಂದಿಗೆ ಸಹಭಾಗಿತ್ವ ವಿಸ್ತರಣೆಯಲ್ಲಿ ತೊಡಗಿರುವ ಸೌದಿ ಅರೇಬಿಯಾವು ಕಾಶ್ಮೀರ ವಿಚಾರಕ್ಕೆ ಪ್ರತ್ಯೇಕ ಚರ್ಚೆ ಆಯೋಜಿಸುವುದಕ್ಕೆ ಸಾಧ್ಯವಿಲ್ಲ ಎಂದಿತ್ತು. ಕಳೆದ ವಾರ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೆಹ್ಮೂದ್ ಖುರೇಷಿ ಮಾಧ್ಯಮಗಳೊಂದಿಗೆ ಇದೇ ವಿಚಾರ ಮಾತನಾಡಿದ್ದರು. ಒಐಸಿಗೆ ನಾನು ಮತ್ತೊಮ್ಮೆ ಗೌರವಪೂರ್ವಕವಾಗಿ ಕೇಳಿಕೊಳ್ಳುತ್ತಿದ್ದೇನೆ. ವಿದೇಶಾಂಗ ಸಚಿವರ ಸಮಿತಿಯ ಸಭೆ ಕರೆಯಬೇಕು ಎಂಬುದು ನಮ್ಮ ನಿರೀಕ್ಷೆ. ನೀವು ಅದನ್ನು ಕರೆಯಲು ಸಾಧ್ಯವಿಲ್ಲದಿದ್ದರೆ ಇಸ್ಲಾಮಿಕ್ ರಾಷ್ಟ್ರಗಳ ಸಭೆ ಕರೆಯುವಂತೆ ನಾನು ಪ್ರಧಾನಿ ಇಮ್ರಾನ್ ಖಾನ್ ಅವರನ್ನೇ ಒತ್ತಾಯಿಸುತ್ತೇನೆ. ಕಾಶ್ಮೀರ ವಿಷಯದಲ್ಲಿ ಹಾಗೂ ದಮನಿತ ಕಾಶ್ಮೀರಿಗಳ ಬೆಂಬಲಕ್ಕೆ ನಿಲ್ಲಲು ಇಸ್ಲಾಮಿಕ್ ರಾಷ್ಟ್ರಗಳು ಸಿದ್ಧವಾಗಿವೆ ಎಂದು ಖುರೇಷಿ ಹೇಳಿದ್ದರು.

ಇದೇ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರ ನೀಡಿದ್ದ ಖುರೇಷಿ, ಇನ್ನಷ್ಟು ಸಮಯ ಕಾಯಲು ಪಾಕಿಸ್ತಾನ ಸಿದ್ಧವಿಲ್ಲ. ಒಂದು ವೇಳೆ ವಿದೇಶಾಂಗ ಸಚಿವರ ಸಮಿತಿ ಸಭೆಯನ್ನು ಕರೆಯಲು ಸಾಧ್ಯವಾಗದಿದ್ದಲ್ಲಿ ಒಐಸಿ ಹೊರಗೆ ಸೆಷನ್ ನಡೆಸಲು ಪಾಕಿಸ್ತಾನವು ಸಿದ್ಧವಿದೆ ಎಂದು ಸೌದಿಗೆ ಬೆದರಿಕೆಯೊಡ್ಡಿದ್ದರು. ಇದು ಸೌದಿ ಕೆಂಗಣ್ಣಿಗೆ ಪಾಕಿಸ್ತಾನ ಗುರಿಯಾಗುವಂತೆ ಮಾಡಿತ್ತು. ಇದಕ್ಕೆ ದಿಟ್ಟ ಉತ್ತರ ನೀಡಿದ್ದ ಸೌದಿ 'ಕಾಶ್ಮೀರ ವಿಚಾರ ಭಾರತಕ್ಕೆ ಸಂಬಂಧಿಸಿದ್ದು' ಎಂದು ಹೇಳಿತ್ತು.  

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com