ಕೊರೋನಾ ಪ್ರಾರಂಭವಷ್ಟೇ, ವೈರಸ್ ಗಳ ಕುರಿತು ಸರಿಯಾದ ಅಧ್ಯಯನವಾಗದೇ ಹೋದರೆ ಭಾರಿ ವಿಪತ್ತು; ಚೀನಾದ ‘ಬಾವಲಿ ಮಹಿಳೆ’ ಎಚ್ಚರಿಕೆ

ಕೊರೋನಾ ವೈರಸ್ ಇನ್ನೂ ಪ್ರಾರಂಭವಷ್ಟೇ.. ಇಂತಹ ಲಕ್ಷಾಂತರ ವೈರಸ್ ಗಳು ಇದ್ದು ಈ ಬಗ್ಗೆ ಸೂಕ್ತ ಮತ್ತು ಸರಿಯಾದ ಅಧ್ಯಯನ ನಡೆಯದೇ ಹೋದರೆ ಭವಿಷ್ಯದಲ್ಲಿ ಭಾರಿ ವಿಪತ್ತು ಅಪ್ಪಳಿಸಲಿದೆ ಎಂದು ಚೀನಾದ ಬಾವಲಿ ಮಹಿಳೆ ಎಂದೇ ಖ್ಯಾತಿ ಗಳಿಸಿರುವ ವೈರಸ್ ತಜ್ಞೆ ಶಿ ಝೇಂಗ್ಲಿ ಹೇಳಿದ್ದಾರೆ.
ಚೀನಾದ ಬಾವಲಿ ಮಹಿಳೆ ಖ್ಯಾತಿಯ ವೈರಸ್ ತಜ್ಞೆ ಶಿ ಝೇಂಗ್ಲಿ
ಚೀನಾದ ಬಾವಲಿ ಮಹಿಳೆ ಖ್ಯಾತಿಯ ವೈರಸ್ ತಜ್ಞೆ ಶಿ ಝೇಂಗ್ಲಿ

ಬೀಜಿಂಗ್‌: ಜಗತ್ತಿನ 213ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾ ವೈರಸ್ ಇನ್ನೂ ಪ್ರಾರಂಭವಷ್ಟೇ.. ಇಂತಹ ಲಕ್ಷಾಂತರ ವೈರಸ್ ಗಳು ಇದ್ದು ಈ ಬಗ್ಗೆ ಸೂಕ್ತ ಮತ್ತು ಸರಿಯಾದ ಅಧ್ಯಯನ ನಡೆಯದೇ ಹೋದರೆ ಭವಿಷ್ಯದಲ್ಲಿ ಭಾರಿ ವಿಪತ್ತು ಅಪ್ಪಳಿಸಲಿದೆ ಎಂದು ಚೀನಾದ ಬಾವಲಿ ಮಹಿಳೆ ಎಂದೇ ಖ್ಯಾತಿ ಗಳಿಸಿರುವ ವೈರಸ್ ತಜ್ಞೆ ಶಿ ಝೇಂಗ್ಲಿ ಹೇಳಿದ್ದಾರೆ.

ಚೀನಾ ಸರ್ಕಾರದ ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡಿರುವ ವುಹಾನ್‌ನ ವೈರಾಣು ಪ್ರಯೋಗಾಲಯದ ಉಪನಿರ್ದೇಶಕರೂ ಆಗಿರುವ ಶಿ ಝೇಂಗ್ಲಿ ಅವರು, ಪ್ರಸ್ತುತ ಪತ್ತೆಯಾದ ವೈರಸ್‌ಗಳು ‘ಹಿಮ ಪರ್ವತದ ತುದಿ ಮಾತ್ರ. ಇಂತಹ ಲಕ್ಷಾಂತರ ವೈರಸ್ ಗಳಿದ್ದು, ವೈರಸ್‌ಗಳ  ಕುರಿತು ಸರಿಯಾಗಿ ಅಧ್ಯಯನ ಮಾಡದೇ ಹೋದರೆ ಮುಂದಿನ ದಿನಗಳಲ್ಲಿ ಇಂಥದ್ದೇ ಸಾಂಕ್ರಾಮಿಕ ರೋಗಗಳು ಹುಟ್ಟಿಕೊಳ್ಳುವುದು ಖಚಿತ. ಸಾಂಕ್ರಾಮಿಕ ರೋಗಗಳ ವಿರುದ್ಧದ ಹೋರಾಡಲು ಅಂತಾರಾಷ್ಟ್ರೀಯ ಸಹಕಾರ ಅಗತ್ಯ. ವೈರಸ್‌ಗಳ ಸಂಶೋಧನೆಯಲ್ಲಿ ವಿಜ್ಞಾನಿಗಳು ಮತ್ತು  ಸರ್ಕಾರಗಳ ನಡುವೆ ಪಾರದರ್ಶಕತೆ ಮತ್ತು ಪರಸ್ಪರ ಸಹಕಾರ ಇರಬೇಕು. ವಿಜ್ಞಾನವನ್ನು ರಾಜಕೀಯಗೊಳಿಸುವುದು ತೀರಾ ಬೇಸರದ ಸಂಗತಿ ಎಂದು ಹೇಳಿದ್ದಾರೆ.

ಅಂತೆಯೇ ಭವಿಷ್ಯದಲ್ಲಿ ಯಾವುದೇ ಸಾಂಕ್ರಾಮಿಕ ಸೋಂಕುಗಳಿಗೆ ಮಾನವರು ತುತ್ತಾಗದಂತೆ ಮಾಡಲು ನಾವು ಬಯಸಿದ್ದೇ ಆದರೆ, ವನ್ಯಜೀವಿಗಳಲ್ಲಿರುವ ಅಪರಿಚಿತ ವೈರಸ್‌ಗಳ ಕುರಿತು ಈಗಿನಿಂದಲೇ ಅಧ್ಯಯನ ಆರಂಭಿಸಬೇಕು. ಮುನ್ನೆಚ್ಚರಿಕೆಗಳನ್ನು ನೀಡಬೇಕು. ಒಂದು ವೇಳೆ  ನಾವು ವೈರಸ್‌ಗಳ ಮೇಲೆ ಸೂಕ್ತ ಅಧ್ಯಯನ ಕೈಗೊಳ್ಳದೇ ಹೋದರೆ, ಕೊರೋನಾ ವೈರಸ್ ರೀತಿಯ ಮಹಾಮಾರಿ ಸೋಂಕುಗಳು ಭವಿಷ್ಯದಲ್ಲಿ ನಮ್ಮನ್ನು ಕಾಡುವುದು ಖಚಿತ ಎಂದು ಹೇಳಿದ್ದಾರೆ.

ಅಮೆರಿಕ ಆರೋಪದಲ್ಲಿ ಹುರುಳಿಲ್ಲ
ಇನ್ನು ಕೊರೋನಾ ವೈರಸ್‌ ಚೀನಾದ ವುಹಾನ್‌ ಲ್ಯಾಬ್‌ನಿಂದ ಬಂದದ್ದು ಎಂಬ ಅಮೆರಿಕದ ಗಂಭೀರ ಆರೋಪಕ್ಕೆ ತಿರುಗೇಟು ನೀಡಿರುವ ಅವರು, ನಾನು ಕೆಲಸ ಮಾಡಿದ ವೈರಸ್‌ಗಳ ಆನುವಂಶಿಕತೆಗೂ, ಸದ್ಯ ಜಗತ್ತಿನಾದ್ಯಂತ ಹರಡುತ್ತಿರುವ ಕೊರೋನಾ ವೈರಸ್‌ನ ಅನುವಂಶಿಕತೆಗೂ  ತಾಳೆಯೇ ಇಲ್ಲ ಎಂದು ಹೇಳಿದ್ದಾರೆ. 

ಈ ಹಿಂದೆ ಇದೇ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿದ್ದ ಝೆಂಗ್ಲಿ ಅವರು, ನನ್ನ ಜೀವನದ ಮೇಲೆ ಆಣೆ ಮಾಡಿ ಹೇಳುತ್ತಿದ್ದೇನೆ. ಲ್ಯಾಬ್ ಗೂ ಕೊರೋನಾ ವೈರಸ್ ಗೂ ಯಾವುದೇ ರೀತಿಯ ಸಂಬಂಧವಿಲ್ಲ. ವುಹಾನ್‌ನ ಪ್ರಯೋಗಾಲಯದಿಂದ ವೈರಸ್ ತಪ್ಪಿಸಿಕೊಂಡಿದೆ  ಎಂಬ ಕಲ್ಪನೆಯು “ಶುದ್ಧ ಕಟ್ಟುಕಥೆ” ಎಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com