ಭಾರತ, ಆಗ್ನೇಯ ಏಷ್ಯಾಕ್ಕೆ ಭೇಟಿ, ಅಧ್ಯಯನ: ಚೀನಾ ಅಪಾಯದ ಬಗ್ಗೆ ಅಮೆರಿಕ ಸೆನೆಟರ್ ಹೇಳಿದ್ದೇನು ಗೊತ್ತೆ..?

ಇತ್ತೀಚೆಗೆ ಭಾರತ ಹಾಗೂ ಆಗ್ನೇಯ ಏಷ್ಯಾಗೆ ಭೇಟಿ ನೀಡಿದ್ದ ಅಮೆರಿಕ ಸೆನೆಟರ್ ಜಾನ್ ಕಾರ್ನಿನ್ ಈ ಭಾಗಗಳಲ್ಲಿ ಚೀನಾದೊಂದಿಗೆ ಗಡಿ ಹಂಚಿಕೊಂಡಿರುವ ಪ್ರದೇಶಗಳು ಎದುರಿಸುತ್ತಿರುವ ಪರಿಸ್ಥಿತಿಯ ಬಗ್ಗೆ ಮಾತನಾಡಿದ್ದಾರೆ. 
ಅಮೆರಿಕ-ಚೀನಾ (ಸಂಗ್ರಹ ಚಿತ್ರ)
ಅಮೆರಿಕ-ಚೀನಾ (ಸಂಗ್ರಹ ಚಿತ್ರ)

ವಾಷಿಂಗ್ ಟನ್: ಇತ್ತೀಚೆಗೆ ಭಾರತ ಹಾಗೂ ಆಗ್ನೇಯ ಏಷ್ಯಾಗೆ ಭೇಟಿ ನೀಡಿದ್ದ ಅಮೆರಿಕ ಸೆನೆಟರ್ ಜಾನ್ ಕಾರ್ನಿನ್ ಈ ಭಾಗಗಳಲ್ಲಿ ಚೀನಾದೊಂದಿಗೆ ಗಡಿ ಹಂಚಿಕೊಂಡಿರುವ ಪ್ರದೇಶಗಳು ಎದುರಿಸುತ್ತಿರುವ ಪರಿಸ್ಥಿತಿಯ ಬಗ್ಗೆ ಮಾತನಾಡಿದ್ದಾರೆ. 

ಚೀನಾ ಗಡಿಗಳಲ್ಲಿ ತನ್ನ ನೆರೆಯ ರಾಷ್ಟ್ರಗಳಿಗೆ ಅಪಾಯವೊಡ್ಡುತ್ತಿದೆ ಎಂದು ಹೇಳಿರುವ ರಿಪಬ್ಲಿಕನ್ ಸಂಸದ ಕಾಂಗ್ರೆಸ್ ನ ತನ್ನ ಸಹೋದ್ಯೋಗಿಗಳೊಂದಿಗೆ ಭಾರತಕ್ಕೆ ಭೇಟಿ ನೀಡಿ ಪ್ರಧಾನಿ ಮೋದಿ ಹಾಗೂ ಇಲ್ಲಿನ ಕ್ಯಾಬಿನೆಟ್  ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ಚೀನಾದಿಂದ ಉಂಟಾಗುತ್ತಿರುವ ಸವಾಲುಗಳ ಬಗ್ಗೆ ಪ್ರತ್ಯಕ್ಷವಾಗಿ ಮಾಹಿತಿ ಪಡೆದಿದ್ದೇನೆ ಎಂದು ಹೇಳಿದ್ದಾರೆ. 

ಚೀನಾದಿಂದ ಅತಿ ಹೆಚ್ಚು ಹಾಗೂ ಸದ್ಯಕ್ಕೆ ಅಪಾಯವಿರುವುದು ಆ ದೇಶದೊಂದಿಗೆ ಗಡಿ ಹಂಚಿಕೊಂಡಿರುವ ಪ್ರದೇಶಗಳಲ್ಲಿ ಎಂದು ಜಾನ್ ಕಾರ್ನಿನ್ ಸೆನೆಟ್ ನ ಸದಸ್ಯರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಅಂತಾರಾಷ್ಟ್ರೀಯ ಜಲ ಪ್ರದೇಶಗಳಲ್ಲಿ ಚೀನಾ ಮುಕ್ತ ಸಂಚಾರಕ್ಕೆ ಅಡ್ಡಿಯುಂಟುಮಾಡಿ ಬೆದರಿಕೆ ಹಾಕುತ್ತಿದೆ. ತನ್ನದೇ ಪ್ರಜೆಗಳಾಗಿರುವ ಉಯ್ಘರ್ ಮುಸ್ಲಿಮರ ಮೇಲೆ ದೌರ್ಜನ್ಯ ಎಸಗುತ್ತಿದೆ. ಭಾರತದೊಂದಿಗೆ ಗಡಿ ಸಂಘರ್ಷದಲ್ಲಿ ತೊಡಗಿದೆ ಹಾಗೂ ರಿಪಬ್ಲಿಕ್ ಆಫ್ ಚೀನಾ ಎಂದು ಕರೆಯಲ್ಪಡುವ ತೈವಾನ್ ಮೇಲೆ ದಾಳಿ ನಡೆಸಲು ಯತ್ನಿಸುತ್ತಿದೆ ಎಂದು ಜಾನ್ ಕಾರ್ನಿನ್ ಹೇಳಿದ್ದಾರೆ. 

ಜಾನ್ ಕಾರ್ನಿನ್ 2020 ರ ಮೇ-ಜೂನ್ ತಿಂಗಳಲ್ಲಿ ಈಶಾನ್ಯ ಲಾಡಾಖ್ ನಲ್ಲಿ ನಡೆದ ಚೀನಾ-ಭಾರತೀಯ ಸೇನಾಪಡೆಗಳ ಸಂಘರ್ಷದ ಬಗ್ಗೆಯೂ ಜಾನ್ ಕಾರ್ನಿನ್ ಉಲ್ಲೇಖಿಸಿದ್ದಾರೆ. 

ಭಾರತ, ತೈವಾನ್ ಅಷ್ಟೇ ಅಲ್ಲದೇ ಫಿಲಿಪೈನ್ಸ್ ಮೇಲೆಯೂ ಚೀನಾ ಕಣ್ಣಿಟ್ಟಿದ್ದು, ಅಲ್ಲಿನ ವಿವಾದಿತ ಜಲ ಪ್ರದೇಶಕ್ಕೆ ತಾವು ಭೇಟಿ ನೀಡಿದ ಬೆನ್ನಲ್ಲೇ ಅಲ್ಲಿನ ಗೂಢಚಾರಿಕೆಯ ಮಾಹಿತಿಯನ್ನು ಸಂಗ್ರಹಿಸುವುದಕ್ಕಾಗಿ ನಿಯೋಜನೆಗೊಂಡಿರುವ ಚೀನಾದ ಪತ್ತೇದಾರಿ ಹಡಗು ಅಲ್ಲಿಗೆ ಬಂದಿತ್ತು.

ತಮ್ಮ ಭೇಟಿಯ ಬಹುಪಾಲು ವಿಷಯ ತೈವಾನ್ ಮೇಲಿನ ಚೀನಾದ ಆಕ್ರಮಣದ ಕುರಿತಾಗಿತ್ತು. ತೈವಾನ್ ಅಥವಾ ರಿಪಬ್ಲಿಕ್ ಆಫ್ ಚೀನಾ, ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾಗಿಂತಲೂ ಸಂಪೂರ್ಣ ವ್ಯತಿರಿಕ್ತವಾಗಿದ್ದು, ನಿಜವಾದ ಪ್ರಜಾಪ್ರಭುತ್ವ ಮೌಲ್ಯಗಳನ್ನು ಹೊಂದಿರುವ ದೇಶವಾಗಿದೆ ಎಂದು ಜಾನ್ ಕಾರ್ನಿನ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com