ವರ್ಷದಲ್ಲಿ ಮೊದಲ ಬಾರಿಗೆ ವಿದೇಶ ಪ್ರವಾಸ ಕೈಗೊಂಡ ಜಾಕ್ ಮಾ: ಆಲಿ ಬಾಬಾ ಮೇಲೆ ಕೆಂಗಣ್ಣು ಬೀರಿದ್ದ ಚೀನಾ
ಆಲಿಬಾಬ ಸಂಸ್ಥೆಯ ಮೇಲೆ ಚೀನಾ ಅಧಿಕಾರಿಗಳು ದಾಳಿ ನಡೆಸಿದ್ದರು. ಇದಾದ ಸ್ವಲ್ಪ ಸಮಯದಲ್ಲೇ ಹೊರಜಗತ್ತಿನಿಂದ ಜಾಕ್ ಮಾ ನಾಪತ್ತೆಯಾಗಿದ್ದರು. ಅವರನ್ನು ಚೀನಾ ಸರ್ಕಾರ ಬಂಧಿಸಿದೆ ಎನ್ನುವ ಊಹಾಪೋಹಗಳು ಆ ಸಂದರ್ಭದಲ್ಲಿ ಹರಿದಾಡಿದ್ದವು.
Published: 20th October 2021 02:59 PM | Last Updated: 20th October 2021 03:14 PM | A+A A-

ಆಲಿಬಾಬಾ ಇ ಕಾಮರ್ಸ್ ಸಂಸ್ಥೆ ಸ್ಥಾಪಕ ಜಾಕ್ ಮಾ
ಬೀಜಿಂಗ್: ಚೀನಾದ ಕೋಟ್ಯಧಿಪತಿ, ಆಲಿಬಾಬಾ ಇ ಕಾಮರ್ಸ್ ಸಂಸ್ಥೆ ಸ್ಥಾಪಕ ಜಾಕ್ ಮಾ ಕಳೆದೊಂದು ವರ್ಷದಲ್ಲಿ ಇದೇ ಮೊದಲ ಬಾರಿಗೆ ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಅವರು ಕೃಷಿ ಅಧ್ಯಯನಕ್ಕೆ ಸಂಬಂಧಿಸಿದಂತೆ ಯುರೋಪ್ ಪ್ರವಾಸ ಕೈಗೊಂಡಿದ್ದಾರೆ.
ಇದನ್ನೂ ಓದಿ: ಸರ್ಕಾರದ ವಿರುದ್ಧ ಸಂಘರ್ಷದ ಬೆನ್ನಲ್ಲೇ ಚೀನೀ ಕೋಟ್ಯಾಧಿಪತಿ, ಅಲಿಬಾಬಾ ಸಂಸ್ಥಾಪಕ ಜಾಕ್ ಮಾ ಕಣ್ಮರೆ!
ಕಳೆದ ವರ್ಷ ಚೀನಾ ಸರ್ಕಾರ, ಒಂದೇ ಸಂಸ್ಥೆ ಮಾರುಕಟ್ಟೆಯಲ್ಲಿ ಪಾರಮ್ಯ ಮೆರೆಯುವುದನ್ನು ತಡೆಗಟ್ಟಲು ನೀತಿ ತಂದಿತ್ತು. ಈ ಏಕ ಸ್ವಾಮ್ಯ ವಿರೋಧಿ ನೀತಿಯನ್ನು ಟೀಕಿಸಿ ಜಾಕ್ ಮಾ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದ್ದರು. ಅಲ್ಲದೆ ಅಮೆರಿಕಾಧ್ಯಕ್ಷರಾಗಿದ್ದ ಟ್ರಂಪ್ ಜೊತೆ ಮಾತುಕತೆ ನಡೆಸಿದ್ದು ಕೂಡಾ ಚೀನಾದ ಕಮ್ಯುನಿಸ್ಟ್ ಸರ್ಕಾರದ ಕಣ್ಣು ಕೆಂಪಗಾಗಿಸಿತ್ತು.
ಇದನ್ನೂ ಓದಿ: ಕಣ್ಮರೆಯಾದ ತಿಂಗಳುಗಳ ನಂತರ ಮತ್ತೆ ಜಾಕ್ ಮಾ ಸಾರ್ವಜನಿಕವಾಗಿ ಪ್ರತ್ಯಕ್ಷ!
ಇವೆಲ್ಲದರಿಂದಾಗಿ ಜಾಕ್ ಮಾ ಅವರ ಆಲಿಬಾಬ ಸಂಸ್ಥೆಯ ಮೇಲೆ ಸರ್ಕಾರಿ ಅಧಿಕಾರಿಗಳು ದಾಳಿ ನಡೆಸಿದ್ದರು. ಇದಾದ ಸ್ವಲ್ಪ ಸಮಯದಲ್ಲೇ ಹೊರಜಗತ್ತಿನಿಂದ ಜಾಕ್ ಮಾ ನಾಪತ್ತೆಯಾಗಿದ್ದರು. ಅವರನ್ನು ಚೀನಾ ಸರ್ಕಾರ ಬಂಧಿಸಿದೆ ಎನ್ನುವ ಊಹಾಪೋಹಗಳು ಆ ಸಂದರ್ಭದಲ್ಲಿ ಹರಿದಾಡಿದ್ದವು. ನಂತರ ಸಾರ್ವಜನಿಕವಾಗಿ ಕಾಣಿಸಿಕೊಂಡ ಜಾಕ್ ಮಾ ತಾವು ಬಿಜಿನೆಸ್ ಸಂಬಂಧಿ ಚಟುವಟಿಕೆಗಳಲ್ಲಿ ತೊಡಗಿರುವುದಾಗಿ ಸಬೂಬು ಹೇಳಿದ್ದರು.
ಇದನ್ನೂ ಓದಿ: ಮಾಧ್ಯಮ ಸ್ವತ್ತುಗಳ ವಿಲೇವಾರಿಗೆ ಜಾಕ್ ಮಾ ಮೇಲೆ ಚೀನಾ ಸರ್ಕಾರ ಒತ್ತಡ!ನಿಖರತೆಯೇ ಯಶಸ್ಸಿಗೆ ರಹದಾರಿ! ಚೀನಾದಲ್ಲಿ ಇದ್ಯಾವುದೂ ಲೆಕ್ಕಕಿಲ್ಲ ಕಣ್ರೀ!!
2018ರ ವೇಳೆ ಜಾಕ್ ಮಾ ಮೂರು ದಿನಗಳಿಗೆ ಒಮ್ಮೆ ವಿದೇಶ ಪ್ರವಾಸ ಮಾಡುತ್ತಿದ್ದರು. ಆದರೆ ಚೀನಾ ಸರ್ಕಾರದ ವಿರೋಧ ಕಟ್ಟಿಕೊಂಡ ನಂತರ ವಿದೇಶ ಪ್ರವಾಸಗಳಿಗೆ ಕತ್ತರಿ ಬಿದ್ದಿತು. ಅಲ್ಲದೆ ಚೀನಾದ ಅಗ್ರ ಶ್ರೀಮಂತ ಎನ್ನುವ ಪಟ್ಟಿಯಿಂದಲೂ ಜಾಕ್ ಮಾ ಹೊರ ಬಿದ್ದಿದ್ದರು.