ಮಾಧ್ಯಮ ಸ್ವತ್ತುಗಳ ವಿಲೇವಾರಿಗೆ ಜಾಕ್ ಮಾ ಮೇಲೆ ಚೀನಾ ಸರ್ಕಾರ ಒತ್ತಡ!
ತನ್ನ ದೇಶದ ಬಿಲಿಯನೇರ್ ಜಾಕ್ ಮಾ ವಿರುದ್ಧದ ನಡೆಯನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಿರುವ ಚೀನಾ ಸರ್ಕಾರ ಜಾಕ್ ಮಾ ಅವರ ಮಾಧ್ಯಮ ಸ್ವತ್ತುಗಳನ್ನು ವಿಲೇವಾರಿ ಮಾಡುವಂತೆ ಒತ್ತಡ ಹೇರಲು ಪ್ರಾರಂಭಿಸಿದೆ.
Published: 16th March 2021 06:33 PM | Last Updated: 16th March 2021 06:33 PM | A+A A-

ಜಾಕ್ ಮಾ
ಬೀಜಿಂಗ್: ತನ್ನ ದೇಶದ ಬಿಲಿಯನೇರ್ ಜಾಕ್ ಮಾ ವಿರುದ್ಧದ ನಡೆಯನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಿರುವ ಚೀನಾ ಸರ್ಕಾರ ಜಾಕ್ ಮಾ ಅವರ ಮಾಧ್ಯಮ ಸ್ವತ್ತುಗಳನ್ನು ವಿಲೇವಾರಿ ಮಾಡುವಂತೆ ಒತ್ತಡ ಹೇರಲು ಪ್ರಾರಂಭಿಸಿದೆ.
ವಾಲ್ ಸ್ಟ್ರೀಟ್ ಜರ್ನಲ್ ವರದಿಯ ಪ್ರಕಾರ, ಅಲೀಬಾಬಾ ದೇಶದ ಜನತೆಯ ಅಭಿಪ್ರಾಯಗಳ ಮೇಲೆ ಪ್ರಭಾವ ಬೀರುತ್ತಿರುವುದರ ಬಗ್ಗೆ ಚೀನಾ ಸರ್ಕಾರ ಆತಂಕಗೊಂಡಿದ್ದು, ಮಾಧ್ಯಮ ಕ್ಷೇತ್ರದಿಂದ ಜಾಕ್ ಮಾ ಅವರ ಹೂಡಿಕೆಯನ್ನು ಇಲ್ಲವಾಗಿಸುವುದಕ್ಕೆ ಯತ್ನಿಸುತ್ತಿದೆ.
ಆಲಿಬಾಬಾ ಸಂಸ್ಥೆ ಹಾಂಕ್ ಕಾಂಗ್ ನಲ್ಲಿ 118 ವರ್ಷ ಹಿಂದೆ ಸ್ಥಾಪನೆಯಾಗಿದ್ದ ಆಂಗ್ಲ ಭಾಷೆಯ ಪತ್ರಿಕೆ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ನ್ನು ತನ್ನ ಸ್ವಾಮ್ಯಕ್ಕೆ ಪಡೆದು ಮಾಧ್ಯಮ ಜಗತ್ತಿಗೆ ಕಾಲಿಟ್ಟಿತ್ತು.
ಇದಷ್ಟೇ ಅಲ್ಲದೇ ಆಲಿಬಾಬಾ ಸಂಸ್ಥೆ, ಟೆಕ್ನಾಲಜಿ ಸುದ್ದಿ ಜಾಲತಾಣ 36Kr, ಸರ್ಕಾರಿ ಸ್ವಾಮ್ಯದ ಶಾಂಘೈ ಮಾಧ್ಯಮ ಸಮೂಹ, ಟ್ವಿಟರ್ ಮಾದರಿಯ ವೈಬೊ ಸಾಮಾಜಿಕ ಜಾಲತಾಣವೂ ಸೇರಿದಂತೆ ಹಲವು ಸಾಮಾಜಿಕ ಜಾಲತಾಣ, ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ ತನ್ನ ಪಾಲನ್ನು ಹೊಂದಿದೆ.
ಕಳೆದ ವರ್ಷ ಜಾಕ್ ಮಾ ಅವರು ಸಾರ್ವಕನಿಕವಾಗಿ ಚೀನಾದ ಆರ್ಥಿಕ ನಿಯಂತ್ರಕ ಸಂಸ್ಥೆ/ ಸರ್ಕಾರವನ್ನು ಟೀಕಿಸಿದ್ದರಿಂದ ಚೀನಾ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದ್ದರು. ಈಗ ಮಾಧ್ಯಮ ಸಂಸ್ಥೆಗಳಲ್ಲಿ ಆಲಿಬಾಬಾ ಹೊಂದಿರುವ ಸ್ವತ್ತುಗಳ ವಿಲೇವಾರಿಗೆ ಚೀನಾ ಸರ್ಕಾರ ಒತ್ತಡ ಹೇರುತ್ತಿದೆ ಎಂಬ ಮಾಹಿತಿ ಬಹಿರಂಗಗೊಂಡಿದೆ.