

ಕಠ್ಮಂಡು: ನೇಪಾಳದ ರಾಜಧಾನಿ ಕಠ್ಮಂಡುವಿನತ್ತ ತೆರಳುತ್ತಿದ್ದ ಪ್ರಯಾಣಿಕರಿಂದ ತುಂಬಿದ್ದ ಬಸ್ ಇಂದು ಸೋಮವಾರ ಮುಂಜಾನೆ ಪರ್ವತ ಮಾರ್ಗದಿಂದ ಕೆಳಗೆ ಉರುಳಿ ಬಿದ್ದ ಪರಿಣಾಮ 17 ಮಂದಿ ಮೃತಪಟ್ಟಿದ್ದು, 24 ಮಂದಿ ಗಾಯಗೊಂಡಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಪ್ರವಾಸಿ ನಗರವಾದ ಪೋಖರಾದಿಂದ ಕಠ್ಮಂಡುವಿಗೆ ತೆರಳುತ್ತಿದ್ದ ಈ ಬಸ್ ಮಧ್ಯರಾತ್ರಿಯ ನಂತರ ಪೃಥ್ವಿ ಹೆದ್ದಾರಿಯಿಂದ ನಿಯಂತ್ರಣ ತಪ್ಪಿ ಕಣಿವೆಗೆ ಉರುಳಿತು. ಬಸ್ ಪರ್ವತ ಇಳಿಜಾರಿನಿಂದ ಕೆಳಗೆ ಬಿದ್ದು, ಕಠ್ಮಂಡುವಿನಿಂದ ಸುಮಾರು 80 ಕಿಲೋಮೀಟರ್ ಪಶ್ಚಿಮದಲ್ಲಿರುವ ಬೆನಿಘಾಟ್ ಸಮೀಪ ತ್ರಿಶೂಲಿ ನದಿಯ ತೀರದಲ್ಲಿ ನಿಂತಿತು.
ಅಪಘಾತದ ನಂತರ ತಕ್ಷಣವೇ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಗಾಯಾಳುಗಳನ್ನು ಅವಶೇಷಗಳಡಿಯಿಂದ ಹೊರತೆಗೆದು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ಸಾಗಿಸಿದರು. ಅಪಘಾತದ ಕಾರಣವನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ನೇಪಾಳದಲ್ಲಿ ರಸ್ತೆ ಮತ್ತು ವಾಹನಗಳ ಸಮರ್ಪಕ ನಿರ್ವಹಣೆ ಕೊರತೆ, ಹಾಗೂ ಪರ್ವತ ಪ್ರದೇಶಗಳಲ್ಲಿ ಇರುವುದು ಕಿರಿದಾದ ರಸ್ತೆ ವ್ಯವಸ್ಥೆ ಕಾರಣವಾಗಿ ಬಸ್ ಅಪಘಾತಗಳು ಸಾಮಾನ್ಯವಾಗಿವೆ.
ಈ ಬಸ್ ವೇಗವಾಗಿ ಹರಿಯುವ ಪರ್ವತ ನದಿಯ ತೀರದಲ್ಲಿ ಬಿದ್ದಿದೆ. 2024ರಲ್ಲಿ 65 ಮಂದಿ ಪ್ರಯಾಣಿಕರಿದ್ದ ಎರಡು ಬಸ್‌ಗಳು ಇದೇ ನದಿಗೆ ಬಿದ್ದಿದ್ದವು. ಪ್ರಯಾಣಿಕರಲ್ಲಿ ಹೆಚ್ಚಿನವರು ಮೃತಪಟ್ಟಿದ್ದು ಮೃತದೇಹಗಳು ಇನ್ನೂ ಪತ್ತೆಯಾಗಿಲ್ಲ.
Advertisement