
ಬೀಜಿಂಗ್: ಈ ವಾರ ತೈವಾನ್‌ಗೆ ಭೇಟಿ ನೀಡಿದ ಅಮೆರಿಕ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ವಿರುದ್ಧ ಚೀನಾ ವಿದೇಶಾಂಗ ಸಚಿವಾಲಯ ಶುಕ್ರವಾರ ನಿರ್ಬಂಧಗಳನ್ನು ಘೋಷಿಸಿದೆ.
ಪೆಲೋಸಿ ಅವರು ಚೀನಾದ ಆಂತರಿಕ ವ್ಯವಹಾರಗಳಲ್ಲಿ ಗಂಭೀರವಾಗಿ ಮಧ್ಯಪ್ರವೇಶಿಸುತ್ತಿದ್ದಾರೆ ಮತ್ತು ಚೀನಾದ ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆಯನ್ನು ಗಂಭೀರವಾಗಿ ಹಾಳು ಮಾಡುತ್ತಿದ್ದಾರೆ. ಹೀಗಾಗಿ ಪೆಲೋಸಿ ಮತ್ತು ಅವರ ಕುಟುಂಬದ ಮೇಲೆ ನಿರ್ಬಂಧಗಳನ್ನು ವಿಧಿಸುತ್ತಿರುವುದಾಗಿ ಎಂದು ಚೀನಾ ವಿದೇಶಾಂಗ ಸಚಿವಾಲಯ ಹೇಳಿದೆ. ಆದರೆ ಈ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಿಲ್ಲ. ಆದರೆ ಇಂತಹ ನಿರ್ಬಂಧಗಳು ಸಾಮಾನ್ಯವಾಗಿ ಸಾಂಕೇತಿಕ ಸ್ವರೂಪದಲ್ಲಿರುತ್ತವೆ.
ನ್ಯಾನ್ಸಿ ಪೆಲೋಸಿ ತೈವಾನ್ ಭೇಟಿಯಿಂದ ಆಕ್ರೋಶಗೊಂಡಿರುವ ಚೀನಾ ಕಳೆದ ಎರಡು ದಿನಗಳಿಂದ ತೈವಾನ್ ಸುತ್ತಮುತ್ತಲಿನ ಪ್ರದೇಶದಲ್ಲಿ ದೊಡ್ಡ ಸೇನಾ ತಾಲೀಮು ನಡೆಸುತ್ತಿದ್ದು, ಅದರಲ್ಲಿ 100 ಕ್ಕೂ ಹೆಚ್ಚು ಯುದ್ಧವಿಮಾನಗಳು ಮತ್ತು 10 ಯುದ್ಧನೌಕೆಗಳು ಭಾಗವಹಿಸಿವೆ ಎಂದು ಬೀಜಿಂಗ್ ಶುಕ್ರವಾರ ಪ್ರಕಟಿಸಿದೆ.
ಇನ್ನು ತೈವಾನ್ ಜಲಸಂಧಿಯಲ್ಲಿ ಚೀನೀ ಮಿಲಿಟರಿ ಕಾರ್ಯಾಚರಣೆಯನ್ನು ತೀವ್ರವಾಗಿ ಖಂಡಿಸಿದ ಅಮೆರಿಕ, ಇದು ತೈವಾನ್ ಜಲಸಂಧಿಯಾದ್ಯಂತ ಮತ್ತು ಆ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳುವ ದೀರ್ಘಾವಧಿಯ ಉದ್ದೇಶಕ್ಕೆ ವಿರುದ್ಧವಾದ ಕ್ರಮ ಎಂದು ಹೇಳಿದೆ. ಅಲ್ಲದೆ ನಾವೂ ಎಲ್ಲದ್ದಕ್ಕೂ ಸಿದ್ಧರಾಗಿದ್ದೇವೆ ಎಂದು ಎಚ್ಚರಿಕೆ ನೀಡಿದೆ.
Advertisement