Monkeypox: ಮಂಕಿಪಾಕ್ಸ್ ಜಾಗತಿಕ ತುರ್ತುಪರಿಸ್ಥಿತಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಣೆ
ನವದೆಹಲಿ: ಭಾರತವೂ ಸೇರಿದಂತೆ ಜಗತ್ತಿನ ಅನೇಕ ದೇಶಗಳನ್ನು ಕಾಡುತ್ತಿರುವ ಮಂಕಿಪಾಕ್ಸ್ ಸಾಂಕ್ರಾಮಿಕವನ್ನು ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ತುರ್ತುಪರಿಸ್ಥಿತಿ ಎಂದು ಘೋಷಿಸಿದೆ.
ಅನೇಕ ದೇಶಗಳಲ್ಲಿ ಮಂಕಿಪಾಕ್ಸ್ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅದನ್ನು ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿ ಎಂದು ಘೋಷಣೆ ಮಾಡಲು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ಪರಿಣತರು ಶನಿವಾರ ನಿರ್ಧರಿಸಿದ್ದಾರೆ. ಈ ಮೂಲಕ ಮಂಕಿಪಾಕ್ಸ್ ಸೋಂಕನ್ನು ಅಪಾಯಕಾರಿ ಎಂಬ ಎಚ್ಚರಿಕೆ ಗಂಟೆಯನ್ನು ವಿಶ್ವ ಆರೋಗ್ಯ ಸಂಸ್ಥೆ ಮೊಳಗಿಸಿದೆ. 70ಕ್ಕೂ ಹೆಚ್ಚು ದೇಶಗಳಲ್ಲಿ ಮಂಕಿಪಾಕ್ಸ್ ಪಿಡುಗು ಹರಡಿಕೊಂಡಿದ್ದು, ಇದನ್ನು 'ಅಸಾಧಾರಣ' ಸನ್ನಿವೇಶ ಎಂದು ಡಬ್ಲ್ಯೂಎಚ್‌ಒ ಪರಿಗಣಿಸಿದೆ.
ಈ ಪಿಡುಗನ್ನು ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿ ಎಂದು ವಿಶ್ವ ಆರೋಗ್ಯ ಸಂಸ್ಥೆಯು ವರ್ಗೀಕರಿಸಬೇಕೇ ಎಂದು ಮಂಕಿಪಾಕ್ಸ್ ಪರಿಣತರು ಗುರುವಾರದಿಂದ ಚರ್ಚೆ ನಡೆಸುತ್ತಿದ್ದರು. ಪರಿಣತರ ಸಮಿತಿಯು ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ನಿರ್ದೇಶಕ ಟೆಡ್ರೋಸ್ ಅಧಾನೊಮ್ ಘೆಬ್ರೆಯೆಸಸ್ ಅವರಿಗೆ ಸಲಹೆ ರವಾನಿಸಿತ್ತು. ಅಂತಿಮ ನಿರ್ಧಾರ ತೆಗೆದುಕೊಳ್ಳುವುದು ಟೆಡ್ರೋಸ್ ಅವರ ಹೊಣೆಗಾರಿಕೆಯಾಗಿತ್ತು. ಇದೀಗ ಮಂಕಿಪಾಕ್ಸ್ ಸಾಂಕ್ರಾಮಿಕವನ್ನು ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ತುರ್ತುಪರಿಸ್ಥಿತಿ ಎಂದು ಘೋಷಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟೆಡ್ರೋಸ್ ಅವರು ಅಧಿಕೃತವಾಗಿ ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆ ಮಾಡಿದರು. 'ಹೊಸ ಮಾದರಿ ಪ್ರಸರಣಗಳ ಮೂಲಕ ಪಿಡುಗು ವಿಶ್ವದಾದ್ಯಂತ ವ್ಯಾಪಕವಾಗಿ ಹರಡುತ್ತಿರುವುದರಿಂದ, ನಾವು ಅದರ ಬಗ್ಗೆ ಬಹಳ ಅಲ್ಪ ಮಟ್ಟಿಗೆ ಅರ್ಥ ಮಾಡಿಕೊಂಡಿದ್ದೇವೆ ಮತ್ತು ಅದು ಅಂತಾರಾಷ್ಟ್ರೀಯ ಆರೋಗ್ಯ ನಿಯಂತ್ರಣಗಳ ಮಾನದಂಡಗಳಿಗೆ ಸೂಕ್ತವಾಗಿದೆ. ಈ ಎಲ್ಲ ಕಾರಣಗಳಿಂದ, ನಾನು ಜಾಗತಿಕ ಮಂಕಿಪಾಕ್ಸ್ ಸೋಂಕನ್ನು ಅಂತರಾಷ್ಟ್ರೀಯ ಕಳವಳದ ಸಾರ್ವಜನಿಕ ಆರೋಗ್ಯ ತುರ್ತುಪರಿಸ್ಥಿತಿ ಎಂದು ಘೋಷಿಸಲು ನಿರ್ಧರಿಸಿದ್ದೇನೆ" ಎಂದು ಅವರು ಹೇಳಿದರು.
ಇನ್ನು ಮಂಕಿಪಾಕ್ಸ್ ಕೇಂದ್ರ ಮತ್ತು ಪಶ್ಚಿಮ ಆಫ್ರಿಕಾದ ಅನೇಕ ಭಾಗಗಳಲ್ಲಿ ಹಲವಾರು ದಶಕಗಳಿಂದ ಇದ್ದರೂ, ಮೇ ತಿಂಗಳವರೆಗೂ ಆಫ್ರಿಕಾ ಖಂಡದ ಆಚೆಗೆ ದೊಡ್ಡ ಪ್ರಮಾಣದಲ್ಲಿ ಹರಡಿರಲಿಲ್ಲ. ಆದರೆ ಮೇ ಬಳಿಕ ಯುರೋಪ್, ಉತ್ತರ ಅಮೆರಿಕ ಮತ್ತು ಇತರೆ ಭಾಗಗಳಲ್ಲಿ ಅನೇಕ ಪ್ರಕರಣಗಳು ವರದಿಯಾಗಿವೆ.
ವಿಶ್ವ ಆರೋಗ್ಯ ಸಂಸ್ಥೆಯು ಈ ಹಿಂದೆ ಕೋವಿಡ್ 19 ಸಾಂಕ್ರಾಮಿಕ, 2014ರ ಪಶ್ಚಿಮ ಆಫ್ರಿಕಾದ ಎಬೋಲಾ ವೈರಸ್ ಪಿಡುಗು, 2016ರ ಲ್ಯಾಟಿನ್ ಅಮೆರಿಕದ ಜಿಕಾ ವೈರಸ್ ಮತ್ತು ಪೋಲಿಯೋದಂತಹ ಸಾರ್ವಜನಿಕ ಆರೋಗ್ಯ ಬಿಕ್ಕಟ್ಟನ್ನು ತುರ್ತು ಪರಿಸ್ಥಿತಿ ಎಂದು ಘೋಷಣೆ ಮಾಡಿತ್ತು. ಕಳೆದ ತಿಂಗಳು ಹೇಳಿಕೆ ನೀಡಿದ್ದ ಡಬ್ಲ್ಯೂಎಚ್‌ಒ ತಜ್ಞರ ಸಮಿತಿ, ವಿಶ್ವ ವ್ಯಾಪಿ ದಾಖಲಾಗಿರುವ ಮಂಕಿಪಾಕ್ಸ್ ಪಿಡುಗು, ಅಂತಾರಾಷ್ಟ್ರೀಯ ತುರ್ತು ಪರಿಸ್ಥಿತಿ ಎಂದು ಘೋಷಿಸುವಷ್ಟು ಪ್ರಬಲವಾಗಿಲ್ಲ ಎಂದು ಹೇಳಿತ್ತು. ಆದರೆ ಈ ವಾರ ಮತ್ತೆ ಸಭೆ ಸೇರಿದ ಸಮಿತಿಯು ಪರಿಸ್ಥಿತಿಯ ಮರು ಮೌಲ್ಯಮಾಪನ ಮಾಡಿದೆ.
ಮೇ ಬಳಿಕ ಸುಮಾರು 74 ದೇಶಗಳಲ್ಲಿ ಮಂಕಿಪಾಕ್ಸ್ ವರದಿಯಾಗಿದ್ದು, 16,000ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಐದು ಸಾವುಗಳು ವರದಿಯಾಗಿವೆ. ಇವೆಲ್ಲವೂ ಆಫ್ರಿಕಾ ದೇಶಗಳಲ್ಲಿ ಮಾತ್ರ ದೃಢಪಟ್ಟಿವೆ. ಮುಖ್ಯವಾಗಿ ನೈಜೀರಿಯಾ ಮತ್ತು ಕಾಂಗೋದಲ್ಲಿ ಅಪಾಯಕಾರಿ ರೀತಿಯಲ್ಲಿ ಹರಡುತ್ತಿದೆ. ತುರ್ತು ಪರಿಸ್ಥಿತಿ ಘೋಷಣೆ ಮಾಡುವುದು ಬಹಳ ಅಗತ್ಯವಾಗಿದ್ದು, ಮಂಕಿಪಾಕ್ಸ್ ಅನ್ನು ನಿಯಂತ್ರಿಸಲು ಪರಿಣಾಮಕಾರಿ ಮಾಹಿತಿ ಹಾಗೂ ಸೇವೆಗಳನ್ನು ರೂಪಿಸಲು ಮತ್ತು ಪೂರೈಕೆ ಮಾಡಲು ಎಲ್ಲ ದೇಶಗಳೂ ಸಮೀಪದಿಂದ ಕೆಲಸ ಮಾಡಲು ಮುಖ್ಯವಾಗಿದೆ ಎಂದು ಡಬ್ಲ್ಯೂಎಚ್‌ಒ ತಿಳಿಸಿದೆ.


