ವಿಶ್ವದ ಮೊದಲ ಪ್ರಕರಣ: ಮಹಿಳೆ ಮೆದುಳಿನಲ್ಲಿ ಜೀವಂತ ಹುಳು ಹೊರತೆಗೆದ ವೈದ್ಯರು!

ಖಿನ್ನತೆಗೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯೊಬ್ಬರ ಮೆದುಳಿನಲ್ಲಿ ಜೀವಂತ ಹುಳು ಹೊರತೆಗೆದಿರುವ ಘಟನೆ ಆಸ್ಟ್ರೇಲಿಯಾದಲ್ಲಿ ವರದಿಯಾಗಿದೆ.
ಮಹಿಳೆಯ ಮೆದುಳಿನಲ್ಲಿ ಪತ್ತೆಯಾದ ಹುಳು
ಮಹಿಳೆಯ ಮೆದುಳಿನಲ್ಲಿ ಪತ್ತೆಯಾದ ಹುಳು

ಸಿಡ್ನಿ: ಖಿನ್ನತೆಗೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯೊಬ್ಬರ ಮೆದುಳಿನಲ್ಲಿ ಜೀವಂತ ಹುಳು ಹೊರತೆಗೆದಿರುವ ಘಟನೆ ಆಸ್ಟ್ರೇಲಿಯಾದಲ್ಲಿ ವರದಿಯಾಗಿದೆ.

ಆಸ್ಟ್ರೇಲಿಯಾದ ನ್ಯೂ ಸೌತ್‌ ವೇಲ್ಸ್‌ನ 64 ವರ್ಷದ ಮಹಿಳೆಯ ಮೆದುಳಿನಲ್ಲಿ 8 ಸೆಂಮೀ ಉದ್ದದ ಜಂತು ಹುಳುವೊಂದು ಪತ್ತೆಯಾಗಿದ್ದು, ಸಜೀವವಾಗಿರುವ ಈ ಹುಳ ಮೆದುಳಿನಲ್ಲಿ ಪತ್ತೆಯಾಗಿರುವುದು ಜಗತ್ತಿನಲ್ಲಿಯೇ ಮೊದಲ ಪ್ರಕರಣ ಎಂದು ವೈದ್ಯರು ಹೇಳಿದ್ದಾರೆ.

ಈ ಮಹಿಳೆಯಲ್ಲಿ ಖಿನ್ನತೆ ಮತ್ತು ಸ್ಮರಣ ಶಕ್ತಿ ಸಮಸ್ಯೆ ಕಂಡುಬಂದಿದ್ದರಿಂದ ಪರೀಕ್ಷೆ ನಡೆಸುವಾಗ ಹುಳು ಪತ್ತೆಯಾಗಿದೆ. ಬಳಿಕ ಆಕೆಗೆ ಶಸ್ತ್ರ ಚಿಕಿತ್ಸೆ ನಡೆಸಿ ವೈದ್ಯರು ಜೀವಂತ ಹುಳುವನ್ನು ಹೊರತೆಗೆದಿದ್ದಾರೆ.

ವೈದ್ಯಕೀಯ ಲೋಕದ ಅಚ್ಚರಿ ಪ್ರಕರಣ
ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್‌ ನಿವಾಸಿಯಾಗಿರುವ 64 ವರ್ಷದ ಮಹಿಳೆಯನ್ನು ಹೊಟ್ಟೆನೋವು, ಅತಿಸಾರ, ಜ್ವರ ಹಾಗೂ ರಾತ್ರಿ ವಿಪರೀತ ಬೆವರುವಿಕೆ ಸಮಸ್ಯೆ ಕಂಡುಬಂದಿದ್ದರಿಂದ 2021ರ ಜನವರಿಯಲ್ಲಿ ಮೊದಲ ಬಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 2022ರ ವೇಳೆಗೆ ಮೂರು ತಿಂಗಳ ಅವಧಿಯಲ್ಲಿ ಆಕೆಯ ರೋಗ ಲಕ್ಷಣಗಳು ಮತ್ತಷ್ಟು ಹದಗೆಟ್ಟಿತ್ತು.

ಆಕೆಯಲ್ಲಿ ವಿಪರೀತ ಮರೆವು ಹಾಗೂ ಖಿನ್ನತೆ ಕಾಣಿಸಿಕೊಂಡಿತ್ತು. ಹೀಗಾಗಿ ವೈದ್ಯರು ಮಹಿಳೆಯ ತಲೆಯ MRI ಸ್ಕ್ಯಾನ್ ಗೆ ಮುಂದಾಗಿದ್ದರು. ಮೆದುಳಿನ ಸ್ಕ್ಯಾನಿಂಗ್ ವೇಳೆ ಅಚ್ಚರಿ ಕಾದಿತ್ತು. ಎಂಆರ್ಐ ಸ್ಕ್ಯಾನ್ ನಡೆಸಿದಾಗ ಮೆದುಳಿನಲ್ಲಿ ಅಸಹಜತೆ ಪತ್ತೆಯಾಗಿತ್ತು. ಸುಮಾರು 8 ಸೆಂ.ಮೀ ಉದ್ದದ ಹುಳು ಕಂಡುಬಂದಿತ್ತು. 

ಈ ಬಗ್ಗೆ ವೈದ್ಯರು ಮತ್ತಷ್ಟು ತನಿಖೆ ನಡೆಸಿದಾಗ ಈ ಹುಳ ಓಪಿಡಾಸ್ಕರಿಸ್ ರೋಬರ್ಟ್ಸಿ ನೆಮಾಟೋಡ್ ಎಂಬ ತಳಿಯ ಮೂರನೇ ಹಂತದ ಲಾರ್ವಾ ಎಂದು ಪತ್ತೆ ಮಾಡಿದ್ದಾರೆ. ಈ ಹುಳುಗಳು ಸಾಮಾನ್ಯವಾಗಿ ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್‌ನಲ್ಲಿ ಹೆಚ್ಚಾಗಿ ಕಾಣಸಿಗುವ ಕಾರ್ಪೆಟ್ ಪೈಥಾನ್ ಎಂಬ ಹೆಬ್ಬಾವುಗಳ ಜಠರಗರುಳಿನ ವ್ಯವಸ್ಥೆಗಳಲ್ಲಿ ಕಂಡುಬರುತ್ತವೆ. ಓಪಿಡಾಸ್ಕರಿಸ್ ಲಾರ್ವಾಗಳು ಪ್ರಾಣಿಗಳ ದೇಹದೊಳಗೆ ಸುದೀರ್ಘ ಅವಧಿಯವರೆಗೂ ಉಳಿಯುವ ಸಾಮರ್ಥ್ಯ ಹೊಂದಿವೆ ಎಂದು ಅಧ್ಯಯನಗಳು ಹೇಳುತ್ತವೆ. 

ಸ್ಕಾನಿಂಗ್ ನಲ್ಲೇ ಹುಳು ಪತ್ತೆ
ಈ ಬಗ್ಗೆ ಕ್ಯಾನ್‌ಬೆರಾ ಆಸ್ಪತ್ರೆಯ ಸಾಂಕ್ರಾಮಿಕ ರೋಗಗಳ ವೈದ್ಯ ಡಾ. ಸಂಜಯ ಸೇನಾನಾಯಕ್ ಮಾಹಿತಿ ನೀಡಿದ್ದು, 'ನಾನು ಸ್ಕ್ಯಾನ್ನಿಂಗ್‌ನಲ್ಲಿ ಹುಳವನ್ನು ನೋಡುತ್ತೇನೆ ಎಂದು ಭಾವಿಸಿರಲಿಲ್ಲ. ಈ ರೀತಿಯ ಪ್ರಕರಣ ನನ್ನ ವೃತ್ತಿ ಜೀವನದಲ್ಲಿ ಮೊದಲ ಬಾರಿಗೆ ಕಂಡುಬಂದಿದೆ. ಈ ನಿರೀಕ್ಷೆಯೇ ನನಗೆ ಇರಲಿಲ್ಲ. ಕ್ಯಾನ್‌ಬೆರಾ ಒಂದು ಸಣ್ಣ ಸ್ಥಳವಾಗಿದೆ. ಆದ್ದರಿಂದ ನಾವು ಇನ್ನೂ ಜೀವಂತವಾಗಿರುವ ಹುಳು ಬಗ್ಗೆ ತಿಳಿಯಲು ಬಹಳ ಅನುಭವಿ ಸಿಎಸ್‌ಐಆರ್‌ಒ ವಿಜ್ಞಾನಿಗಳ ಪ್ರಯೋಗಾಲಯಕ್ಕೆ ಕಳುಹಿಸಿದ್ದೆವು. ಅವರು ಅದನ್ನು ನೋಡಿ, ಇದು ಓಫಿಡಾಸ್ಕರಿಸ್ ರಾಬರ್ಟ್ಸಿ ಎಂದು ಮಾಹಿತಿ ನೀಡಿದರು ಎಂದು ಹೇಳಿದರು.

ಹುಳು ಮಹಿಳೆಯ ಮೆದುಳು ಪ್ರವೇಶಿಸಿದ್ದು ಹೇಗೆ?
ಈ ವಿಶೇಷ ಪ್ರಕರಣದ ಬಗ್ಗೆ ಎಮರ್ಜಿಂಗ್ ಇನ್‌ಫೆಕ್ಷಿಯಸ್ ಡಿಸೀಸಸ್ ನಿಯತಕಾಲಿಕೆಯಲ್ಲಿ ವರದಿ ಪ್ರಕಟಿಸಲಾಗಿದ್ದು, ಈ ವರದಿಯನ್ನು CNN ಸಂಸ್ಥೆ ಬಿತ್ತರಿಸಿದೆ. ಮಹಿಳೆಯ ದೇಹದೊಳಗೆ ಈ ಪ್ಯಾರಾಸೈಟ್ ಪ್ರವೇಶಿಸಿದ್ದು ಹೇಗೆ? ಎಂಬ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಹೆಬ್ಬಾವಿನ ಮಲದಿಂದ ಕಲುಷಿತಗೊಂಡ ಸ್ಥಳೀಯ ಹುಲ್ಲಿನ ಸಂಪರ್ಕಕ್ಕೆ ಬಂದಿದ್ದರಿಂದ ಮತ್ತು ಅದರಲ್ಲಿನ ಮೊಟ್ಟೆಗಳನ್ನು ಸೇವಿಸಿದ್ದರಿಂದ ಅದು ಮಹಿಳಾ ರೋಗಿಯೊಳಗೆ ಪ್ರವೇಶಿಸಿರಬಹುದು. ಹುಲ್ಲಿನ ಸಂಪರ್ಕಕ್ಕೆ ಬರುವ ಮೂಲಕ ರೋಗಿಯು ಆಹಾರ ಅಥವಾ ಅಡಿಗೆ ಪಾತ್ರೆಗಳಿಂದಾಗಿ ಅಥವಾ ಆ ಸ್ಥಳದಲ್ಲಿ ಬೆಳೆದ ಹಸಿರು ತರಕಾರಿ ಸೇವಿಸುವಾಗ ಅದರೊಟ್ಟಿಗೆ ಅದನ್ನೂ ಸೇವಿಸಿರಬಹುದು ಎಂದು ಸಂಶೋಧಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com