ಅಮೆರಿಕ: ಚೈನೀಸ್ ನ್ಯೂಇಯರ್ ಪಾರ್ಟಿ ವೇಳೆ ಗುಂಡಿನ ದಾಳಿ; 10 ಮಂದಿ ಬಲಿಪಡೆದಿದ್ದ ಆರೋಪಿ ಆತ್ಮಹತ್ಯೆಗೆ ಶರಣು!
ಲಾಸ್ ಎಂಜಲೀಸ್: ಅಮೆರಿಕದಲ್ಲಿ ನಡೆಯುತ್ತಿದ್ದ ಚೈನೀಸ್ ನ್ಯೂ ಇಯರ್ ಪಾರ್ಟಿ ವೇಳೆ ಗುಂಡಿನ ದಾಳಿ ನಡೆಸಿ 10 ಮಂದಿಯ ಸಾವಿಗೆ ಕಾರಣವಾಗಿದ್ದ ಆರೋಪಿ ಆತ್ಮಹತ್ಯೆಗೆ ಶರಣಾಗಿದ್ದಾನೆಂದು ತಿಳಿದುಬಂದಿದೆ.
ಶನಿವಾರ ರಾತ್ರಿ ಕ್ಯಾಲಿಫೋರ್ನಿಯಾದ ಮಾಂಟೆರಿ ಪಾರ್ಕ್‌ನಲ್ಲಿ ಆರೋಪಿ ಗುಂಡಿನ ದಾಳಿ ನಡೆಸಿದ್ದ. ಚೀನೀ ಚಾಂದ್ರಮಾನ ಪದ್ಧತಿಯ ಪ್ರಕಾರ ಅರಂಭವಾಗುವ ಹೊಸವರ್ಷವನ್ನು ಸಂಭ್ರಮಿಸಲು ಪಾರ್ಕ್ ನಲ್ಲಿ ಸಾವಿರಾರು ಜನರು ಸೇರಿದ್ದರು. ಈ ವೇಳೆ ಸ್ಥಳಕ್ಕಾಗಮಿಸಿದ ಆರೋಪಿ ಏಕಾಏಕಿ ಗುಂಡಿನ ದಾಳಿ ನಡೆಸಿದ್ದ. ದಾಳಿಯಲ್ಲಿ 10 ಮಂದಿ ಸಾವನ್ನಪ್ಪಿದ್ದರು.
ಪೊಲೀಸರು ಕೂಡಲೇ ಘಟನಾ ಸ್ಥಳವನ್ನು ಸುತ್ತುವರಿದು ಹಂತಕನ ಹಿಡಿಯಲು ಮುಂದಾದರು. ಆದರೆ, ಆರೋಪಿ ವಾಹನವೊಂದರಲ್ಲಿ ಅವಿತು ಸ್ವತಃ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಮಾಂಟೆರಿ ಪಾರ್ಕ್‌ನ ಡ್ಯಾನ್ಸ್ ಕ್ಲಬ್‌ಗೆ ಅರೆ ಸ್ವಯಂಚಾಲಿತ ಗನ್ ಹಿಡಿದು ನುಗ್ಗಿದ ಹಂತಕ, ಮನಸೋಇಚ್ಚೆ ಗುಂಡಿನ ದಾಳಿ ನಡೆಸಿದ್ದ. ಘಟನೆಯಲ್ಲಿ 16 ಜನ ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಳುಗಳನ್ನು ಲಾಸ್ ಏಂಜಲೀಸ್‌ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಂಭ್ರಮಾಚರಣೆಯಲ್ಲಿ ಚೀನಾದವರೇ ಹೆಚ್ಚಾಗಿದ್ದರು. ಇವರ ಮೇಲೆ ಗುಂಡಿನ ದಾಳಿ ಮಾಡಿದ ವ್ಯಕ್ತಿ ಕೂಡ ಏಷಿಯನ್. ಆತ ಚೀನಾ ಮೂಲದ ವಲಸಿಗ. ಇತ್ತೀಚೆಗಷ್ಟೇ ಆತ ಕ್ಯಾಲಿಪೋರ್ನಿಯಾಕ್ಕೆ ಬಂದಿದ್ದ ಎಂದು ಪೊಲೀಸರು ಹೇಳಿದ್ದು, ಆತನ ಚಿತ್ರವನ್ನು ಬಿಡುಗಡೆ ಮಾಡಿದ್ದಾರೆ.
ಘಟನೆ ಬಗ್ಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಹಾಗೂ ಅವರ ಪತ್ನಿ ಜಿಲ್ ಬೈಡನ್ ಆಘಾತ ವ್ಯಕ್ತಪಡಿಸಿದ್ದು, ಘಟನೆಯಲ್ಲಿ ಗಾಯಗೊಂಡವರು ಬೇಗ ಚೇತರಿಸಿಕೊಳ್ಳುವಂತೆ ಪ್ರಾರ್ಥಿಸಿದ್ದಾರೆ. ಘಟನೆ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇನೆ ಎಂದು ಜೋ ಬೈಡನ್ ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ