ಮಾನವೀಯ ಆಧಾರದ ಮೇಲೆ ಇಬ್ಬರು ಅಮೆರಿಕಾ ಪ್ರಜೆಗಳ ಬಿಡುಗಡೆ ಮಾಡಿದ ಹಮಾಸ್, ಅಧ್ಯಕ್ಷ ಬೈಡನ್ ಸ್ವಾಗತ

ಹಮಾಸ್ ಉಗ್ರರು ಅಪಹರಿಸಿರುವ 200 ಒತ್ತೆಯಾಳುಗಳು ಪೈಕಿ 20 ಮಕ್ಕಳು ಸೇರಿ ಬಹುತೇಕರು ಜೀವಂತವಾಗಿದ್ದಾರೆಂದು ಇಸ್ರೇಲ್ ಹೇಳಿಕೆ ನೀಡಿದ ಬೆನ್ನಲ್ಲೇ ಗಾಜಾದಲ್ಲಿ ಬಂಧಿಸಲಾಗಿದ್ದ ಇಬ್ಬರು ಅಮೆರಿಕಾದ ಪ್ರಜೆಗಳನ್ನು ಹಮಾಸ್ ಬಿಡುಗಡೆ ಮಾಡಿದೆ.
ಗಾಜಾ ನಗರದ ಮೇಲೆ ಇಸ್ರೇಲಿ ವೈಮಾನಿಕ ದಾಳಿಯ ನಂತರ ಗ್ರೀಕ್ ಆರ್ಥೊಡಾಕ್ಸ್ ಚರ್ಚ್ ಧ್ವಂಸಗೊಂಡಿರುವುದು.
ಗಾಜಾ ನಗರದ ಮೇಲೆ ಇಸ್ರೇಲಿ ವೈಮಾನಿಕ ದಾಳಿಯ ನಂತರ ಗ್ರೀಕ್ ಆರ್ಥೊಡಾಕ್ಸ್ ಚರ್ಚ್ ಧ್ವಂಸಗೊಂಡಿರುವುದು.

ಜೆರುಸಲೇಂ: ಹಮಾಸ್ ಉಗ್ರರು ಅಪಹರಿಸಿರುವ 200 ಒತ್ತೆಯಾಳುಗಳು ಪೈಕಿ 20 ಮಕ್ಕಳು ಸೇರಿ ಬಹುತೇಕರು ಜೀವಂತವಾಗಿದ್ದಾರೆಂದು ಇಸ್ರೇಲ್ ಹೇಳಿಕೆ ನೀಡಿದ ಬೆನ್ನಲ್ಲೇ ಗಾಜಾದಲ್ಲಿ ಬಂಧಿಸಲಾಗಿದ್ದ ಇಬ್ಬರು ಅಮೆರಿಕಾದ ಪ್ರಜೆಗಳನ್ನು ಹಮಾಸ್ ಬಿಡುಗಡೆ ಮಾಡಿದೆ.
    
ಹಮಾಸ್ ಉಗ್ರರ ವಶದಲ್ಲಿದ್ದ ಅಮೆರಿಕ ಮೂಲದ ಜುಡಿತ್ ತೈ ರಾನನ್ ಮತ್ತು ಅವರ ಮಗಳು ನಟಾಲಿ ಶೋಷನಾ ರಾನನ್ ತಡರಾತ್ರಿ ಇಸ್ರೇಲ್‍ಗೆ ಮರಳಿದ್ದಾರೆ.

ಶುಕ್ರವಾರ ತಡರಾತ್ರಿ ಟೆಲಿಗ್ರಾಮ್‌ನಲ್ಲಿ ಪೋಸ್ಟ್ ಮಾಡಿ ಹೇಳಿಕೆ ನೀಡಿರುವ ಹಮಾಸ್ ಸಶಸ್ತ್ರ ವಿಭಾಗದ ವಕ್ತಾರ ಅಬು ಉಬೈದಾ, ಮಾನವೀಯ ಆಧಾರದ ಮೇಲೆ ಅಮೆರಿಕಾದ ಪ್ರಜೆಗಳಾಗಿರುವ ಜ್ಯುಡಿತ್ ತಾಯ್ ರಾನನ್ ಮತ್ತು ಆಕೆಯ ಹದಿಹರೆಯದ ಮಗಳು ನತಾಲಿ ಶೋಷನಾ ರಾನನ್ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಬಿಡುಗಡೆಗೊಂಡ ಅಮೆರಿಕದ ತಾಯಿ ಮತ್ತು ಮಗಳು ಕೂಡ ಇಸ್ರೇಲ್ ಪೌರತ್ವವನ್ನು ಹೊಂದಿದ್ದು, ಈ ಇಬ್ಬರೂ ಪ್ರಸ್ತುತ ಇಸ್ರೇಲ್‌ನಲ್ಲಿ ಇಸ್ರೇಲಿ ಅಧಿಕಾರಿಗಳೊಂದಿಗೆ ಸುರಕ್ಷಿತವಾಗಿದ್ದಾರೆ. ಕತಾರ್ ಸರ್ಕಾರದೊಂದಿಗಿನ ಒಪ್ಪಂದದ ಅಡಿಯಲ್ಲಿ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಈ ಬಿಡುಗಡೆಯನ್ನು ದೃಢಪಡಿಸಿರುವ ಅಮೆರಿಕದ ಅಧ್ಯಕ್ಷ ಜೋ ಬೈಡನ್, ಉಭಯ ದೇಶಗಳ ಪುನಶ್ಚೇತನ ಮತ್ತು ಶಮನ ಪ್ರಕ್ರಿಯೆಯನ್ನು ಸರ್ಕಾರ ಸಂಪೂರ್ಣವಾಗಿ ಬೆಂಬಲಿಸಲಿದೆ ಎಂದು ಘೋಷಿಸಿದ್ದಾರೆ.

ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ಹೋರಾಟಗಾರರು ನಡೆಸಿದ ದಾಳಿಯ ವೇಳೆ ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದ ಇಬ್ಬರು ಅಮೆರಿಕನ್ನರನ್ನು ಬಿಡುಗಡೆ ಮಾಡಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ನಮ್ಮ ಸಹ ಪ್ರಜೆಗಳು ಕಳೆದ 14 ದಿನಗಳಿಂದ ಈ ಭಯಾನಕ ಘಟನಾವಳಿಗಳಿಗೆ ಸಾಕ್ಷಿಯಾಗಿದ್ದಾರೆ. ಇವರು ಶೀಘ್ರವೇ ಭಯಭೀತರಾಗಿರುವ ತಮ್ಮ ಕುಟುಂಬಗಳ ಜತೆ ಮತ್ತೆ ಸೇರುವುದರಿಂದ ಅತೀವ ಸಂತಸವಾಗಿದೆ ಎಂದು ಹೇಳಿದ್ದಾರೆ.

ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಅವರು ಹೇಳಿಕೆ ನೀಡಿ, ಈ ಬಿಡುಗಡೆಯನ್ನು ನಾವು ಸ್ವಾಗತಿಸುತ್ತೇವೆ ಎಂದು ಹೇಳಿದ್ದಾರೆ.

ಉಳಿದ ಒತ್ತೆಯಾಳುಗಳು ತಮ್ಮ ಮನೆಗಳಿಗೆ ಮರಳುವುದನ್ನು ಖಚಿತಪಡಿಸಿಕೊಳ್ಳಲು ಇಡೀ ಯುಎಸ್ ಸರ್ಕಾರವು ಪ್ರತಿದಿನ.. ಪ್ರತಿ ನಿಮಿಷವೂ.. ಕೆಲಸ ಮಾಡುತ್ತದೆ. ಒತ್ತೆಯಾಳುಗಳ ಬಿಡುಗಡೆಯನ್ನು ಖಾತ್ರಿಪಡಿಸಿದ್ದಕ್ಕಾಗಿ ಕತಾರ್ ಸರ್ಕಾರಕ್ಕೆ ನಮ್ಮ ಧನ್ಯವಾದಗಳು ತಿಳಿಸಿದ್ದಾರೆ.

ಈ ಯುದ್ಧದಲ್ಲಿ 10 ಅಮೆರಿಕನ್ ನಾಗರಿಕರು ಇನ್ನೂ ಕಾಣೆಯಾಗಿದ್ದಾರೆ. ಅವರಲ್ಲಿ ಕೆಲವರನ್ನು ಹಮಾಸ್ ಒತ್ತೆಯಾಳಾಗಿ ಇರಿಸಿರಬಹುದು ಎಂದು ನಮಗೆ ತಿಳಿದಿದೆ. ಹಮಾಸ್ ಇನ್ನೂ 200 ಕ್ಕೂ ಹೆಚ್ಚು ಜನರನ್ನು ಒತ್ತೆಯಾಳಾಗಿ ಇರಿಸಿದೆ. ಇವರಲ್ಲಿ ಅನೇಕ ದೇಶಗಳ ಪುರುಷರು, ಮಹಿಳೆಯರು, ಯುವಕರು, ಬಾಲಕಿಯರು, ವೃದ್ಧರು ಸೇರಿದ್ದಾರೆ ಎಂದಿದ್ದಾರೆ.

ಗಾಝಾ ಆಡಳಿತಗಾರರು ಸೆರೆ ಇರಿಸಿಕೊಂಡಿರುವ 200 ಒತ್ತೆಯಾಳುಗಳ ಪೈಕಿ ಬಿಡುಗಡೆಯಾದವರಲ್ಲಿ ರಾನನ್ ಮೊದಲಿಗರು. ನಾಗರಿಕ ಒತ್ತೆಯಾಳುಗಳ ಬಿಡುಗಡೆಗಾಗಿ ಹಮಾಸ್, ಕತಾರ್ ಹಾಗೂ ಈಜಿಪ್ಟ್ ಜತೆಗೆ ಕಾರ್ಯ ನಿರ್ವಹಿಸಲಿದ್ದು, ಇದರಿಂದ ಮತ್ತಷ್ಟು ಮಂದಿಯ ಬಿಡುಗಡೆಯ ಸುಳಿವು ದೊರಕಿದೆ.

ನಿನ್ನೆಯಷ್ಟೇ ಹೇಳಿಕೆ ನೀಡಿದ್ದ ಇಸ್ರೇಲ್ ಪಡೆ, ಅಕ್ಟೋಬರ್ 7 ರಂದು ಇಸ್ರೇಲ್-ಗಾಜಾ ಗಡಿಯ ಸಮೀಪವಿರುವ ನಹಾಲ್ ಓಜ್ ಕಿಬ್ಬುಟ್ಜ್‍ನಿಂದ ಹಮಾಸ್ ಉಗ್ರರು 200 ಮಂದಿಯನ್ನು ಅಪಹರಿಸಿದ್ದು, ಈ ಪೈರಿ ಹಲವು ಜೀವಂತವಾಗಿದ್ದು, ಒತ್ತೆಯಾಳಾಗಿರುವ 200 ಮಂದಿಯ ಪೈಕಿ 20 ಕ್ಕೂ ಹೆಚ್ಚು ಅಪ್ರಾಪ್ತರಾಗಿದ್ದಾರೆಂದು ಹೇಳಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com