ಚೀನಾದ ಗೂಢಚಾರಿಕೆ ಬಲೂನ್‌ ಹೊಡೆದುರುಳಿಸಿದ ಅಮೆರಿಕಾ: ಚೀನಾ ಕೆಂಡಾಮಂಡಲ; ತಕ್ಕ ಪ್ರತಿಕ್ರಿಯೆ ನೀಡುವುದಾಗಿ ಬೆದರಿಕೆ!

ಚೀನಾ ಗುಪ್ತಚರ ಬಲೂನ್'ನ್ನು ಅಮೆರಿಕಾ ಹೊಡೆದುರುಳಿಸಿದ್ದು, ಇದಕ್ಕೆ ತೀವ್ರವಾಗಿ ಕೆಂಡಾಮಂಡಲಗೊಂಡಿರುವ ಚೀನಾ ತಕ್ಕ ಪ್ರತಿಕ್ರಿಯೆ ನೀಡುವುದಾಗಿ ಬೆದರಿಕೆ ಹಾಕಿದೆ.
ಗೂಢಚಾರಿಕೆ ಬಲೂನ್‌
ಗೂಢಚಾರಿಕೆ ಬಲೂನ್‌

ವಾಷಿಂಗ್ಟನ್: ಚೀನಾ ಗುಪ್ತಚರ ಬಲೂನ್'ನ್ನು ಅಮೆರಿಕಾ ಹೊಡೆದುರುಳಿಸಿದ್ದು, ಇದಕ್ಕೆ ತೀವ್ರವಾಗಿ ಕೆಂಡಾಮಂಡಲಗೊಂಡಿರುವ ಚೀನಾ ತಕ್ಕ ಪ್ರತಿಕ್ರಿಯೆ ನೀಡುವುದಾಗಿ ಬೆದರಿಕೆ ಹಾಕಿದೆ.

ಅಮೆರಿಕದ ಭದ್ರತಾ ಸೂಕ್ಷ್ಮ ಪ್ರದೇಶದಲ್ಲಿ ಅನುಮಾನಾಸ್ಪದವಾಗಿ ಹಾರಾಡುತ್ತಿದ್ದ ಚೀನಾದ ಸ್ಪೈ ಬಲೂನ್‌ ಬಗ್ಗೆ ಗಂಭೀರವಾಗಿ ಮಿಲಿಟರಿ ಅಧಿಕಾರಿಗಳ ಜೊತೆ ಚರ್ಚಿಸಿದ ಜೋ ಬೈಡೆನ್‌, ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದರು.

ಅಧ್ಯಕ್ಷ ಜೋ ಬಿಡೆನ್ ಅವರ ಸೂಚನೆ ಮೇರೆಗೆ, ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಮತ್ತು ಉನ್ನತ ಮಿಲಿಟರಿ ಅಧಿಕಾರಿಗಳು ಬಲೂನ್‌ ಹೊಡದುರುಳಿಸಲು ಯೋಜನೆ ಹಾಕಿಕೊಂಡಿದ್ದರು. ಆದರೆ, ಹೊಡೆದುರುಳಿಸುವುದರಿಂದ ಕೆಳಗಿರುವ ಹಲವಾರು ಜನರಿಗೆ ಅಪಾಯವಿದೆ ಎಂದು ಹಿರಿಯ ರಕ್ಷಣಾ ಅಧಿಕಾರಿಯೊಬ್ಬರು ಹೇಳಿದ್ದರು.

ಅದರಂತೆ ಮುಂಜಾಗ್ರತಾ ಕ್ರಮವನ್ನು ಅನುಸರಿಸಿ ಅಮೆರಿಕಾದ ಫೈಟರ್‌ ಜೆಟ್‌ ಚೀನಾದ ಗುಪ್ತಚರ ಬಲೂನ್‌ನನ್ನು ಹೊಡದುರುಳಿಸಿದೆ. ಕೆರೊಲಿನಾ ಕರಾವಳಿಯಲ್ಲಿ ಪತ್ತೆಯಾದ ಸ್ಫೈ ಬಲೂನನ್ನು ಅಮೆರಿಕಾ ಹೊಡದುರುಳಿಸಿದೆ.

ವರದಿಗಳ ಪ್ರಕಾರ, ಹೊಡೆದುರುಳಿಸಲಾದ ಬಲೂನು ಜನವರಿ 28ರಂದು ಅಮೆರಿಕದ ವಾಯುಪ್ರದೇಶವನ್ನು ಮೊದಲು ಪ್ರವೇಶಿಸಿತು. ಬಳಿಕ ಜನವರಿ 30ರಂದು ಕೆನಡಾ ಭಾಗಕ್ಕೆ ಹೋಗಿ ಮರುದಿನ ಮತ್ತೆ ಅಮೆರಿಕದ ಕಡೆ ಬಂದಿತ್ತು. ಆದರೆ, ಇದು ಸಾಗರ ಪ್ರದೇಶಕ್ಕೆ ಬರದೇ ಇದ್ದರಿಂದ ಶೂಟ್ ಮಾಡಲು ಕಷ್ಟವಾಗಿತ್ತು. ಕೊನೆಗೆ ನಿನ್ನೆ ಶನಿವಾರ ಈ ಬಲೂನನ್ನು ಕ್ಷಿಪಣಿ ಮೂಲಕ ಹೊಡೆದುರುಳಿಸಲಾಗಿದೆ ಎಂದು ತಿಳಿದುಬಂದಿದೆ.

ಚೀನಾದ ಈ ಬಲೂನು ತಮ್ಮ ದೇಶದ ಸಾರ್ವಭೌಮತೆಗೆ ಧಕ್ಕೆ ತರುವಂತಿತ್ತು ಎಂದು ಅಮೆರಿಕಾ ಹೇಳಿದ್ದು, ಬಲೂನು ಹೊಡೆಯುತ್ತಿರುವ ಬಗ್ಗೆ ಚೀನಾಗೆ ಮಾಹಿತಿಯನ್ನೂ ನೀಡಿತ್ತು ಎಂದು ಅಮೆರಿಕದ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ.

ಚೀನಾದ ವಿದೇಶಾಂಗ ಸಚಿವಾಲಯವು ಈ ಬಲೂನ್ ಚೀನಾಕ್ಕೆ ಸೇರಿದ್ದು ಎಂದು ಶುಕ್ರವಾರ ದೃಢಪಡಿಸಿತ್ತು. ಇದು ಹವಾಮಾನ ಸಂಶೋಧನೆ ನಡೆಸುತ್ತಿರುವ ನಾಗರಿಕ ವಾಯುನೌಕೆಯಾಗಿದ್ದು, ಆಕಸ್ಮಿಕವಾಗಿ ಹಾರಿ ಹೋಗಿದೆ ಎಂದು ಹೇಳಿತ್ತು.

ಅಮೆರಿಕಾ ಬಲೂನ್'ನ್ನು ಹೊರೆದುರುಳಿಸಿರುವುದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಚೀನಾ, ಅಮೆರಿಕದಿಂದ ಅಂತಾರಾಷ್ಟ್ರೀಯ ಪ್ರಮಾಣಿತ ನಡಾವಳಿ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಹೇಳಿದೆ.

ಅಮೆರಿಕ ಹೊಡೆದುರುಳಿಸುವ ಬಲೂನು ಯಾವುದೇ ಬೇಹುಗಾರಿಕೆ ಕಾರ್ಯಕ್ಕೆ ಬಳಕೆಯಾಗುತ್ತಿರಲಿಲ್ಲ. ನಾಗರಿಕ ಸೇವೆ ಉದ್ದೇಶದಿಂದ ಆ ಪ್ರದೇಶದ ಬಳಿ ಹೋಗಿತ್ತು. ಆದರೆ, ಆಕಸ್ಮಿಕವಾಗಿ ಅದು ಅಮೆರಿಕ ಪ್ರದೇಶಕ್ಕೆ ಹಾದು ಹೋಗಿದೆ. ಅಷ್ಟಕ್ಕೆ ಅಮೆರಿಕ ಅತಿರೇಕವಾಗಿ ವರ್ತಿಸಿದೆ. ಅಮೆರಿಕದ ಈ ಕ್ರಮಕ್ಕೆ ತಾನು ಅಷ್ಟೇ ತೀವ್ರವಾಗಿ ಸ್ಪಂದಿಸುವ ಅಧಿಕಾರ ತನಗಿದೆ ಎಂದು ಚೀನಾ ಬೆದಕರಿಕೆ ಹಾಕಿದೆ.

ಅಮೆರಿಕಾ-ಚೀನಾ ನಡುವೆ ಬಲೂನ್ ವಾರ್ ಶುರುವಾಗಿದ್ದು, ದೊಡ್ಡಣ್ಣನ ತಾಕತ್ತು ತಿಳಿಯಲು ಕಮ್ಯುನಿಸ್ಟ್ ಹಾರಿಸಿರೋ ಬಲೂನ್ ಇದಾಗಿದೆ ಎಂದು ಹೇಳಲಾಗುತ್ತಿದೆ.

ತೈವಾನ್ ವಿಚಾರವಾಗಿ ವಾಗ್ಯುದ್ಧದಲ್ಲಿ ನಿರತವಾಗಿದ್ದ ಎರಡೂ ರಾಷ್ಟ್ರಗಳು ರಣಾಂಗಣದಲ್ಲಿ ಮುಖಾಮುಖೀಯಾಗುವ ಎಲ್ಲಾ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com