ನಾವು ಸ್ಪರ್ಧೆ ಬಯಸುತ್ತೇವೆಯೇ ಹೊರತು ಸಂಘರ್ಷವಲ್ಲ, ಚೀನಾಗೆ ಇದನ್ನೇ ನಾವು ಸ್ಪಷ್ಟಪಡಿಸಿದ್ದೇವೆ: ಜೊ ಬೈಡನ್
ಚೀನಾ ನಮ್ಮ ಸಾರ್ವಭೌಮತೆಗೆ, ನಮ್ಮ ಸ್ವಾತಂತ್ರ್ಯಕ್ಕೆ ಧಕ್ಕೆಯನ್ನುಂಟುಮಾಡಿದರೆ ನಮ್ಮ ದೇಶವನ್ನು ನಾವು ರಕ್ಷಣೆ ಮಾಡಬೇಕಾಗುತ್ತದೆ. ಚೀನಾ ಜೊತೆ ಪೈಪೋಟಿ ನಡೆಸಿ ಗೆಲ್ಲಲು ನಾವೆಲ್ಲರೂ ಮೊದಲು ಒಗ್ಗಟ್ಟಾಗಬೇಕು ಎಂದು ಅಮೆರಿಕ ಅಧ್ಯಕ್ಷ ಜೊ ಬೈಡನ್ ಹೇಳಿದ್ದಾರೆ.
Published: 08th February 2023 09:45 AM | Last Updated: 08th February 2023 01:54 PM | A+A A-

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಮೆರಿಕ ಅಧ್ಯಕ್ಷ ಜೊ ಬೈಡನ್
ನ್ಯೂಯಾರ್ಕ್: ಚೀನಾ ನಮ್ಮ ಸಾರ್ವಭೌಮತೆಗೆ, ನಮ್ಮ ಸ್ವಾತಂತ್ರ್ಯಕ್ಕೆ ಧಕ್ಕೆಯನ್ನುಂಟುಮಾಡಿದರೆ ನಮ್ಮ ದೇಶವನ್ನು ನಾವು ರಕ್ಷಣೆ ಮಾಡಬೇಕಾಗುತ್ತದೆ. ಚೀನಾ ಜೊತೆ ಪೈಪೋಟಿ ನಡೆಸಿ ಗೆಲ್ಲಲು ನಾವೆಲ್ಲರೂ ಮೊದಲು ಒಗ್ಗಟ್ಟಾಗಬೇಕು. ಇಂದು ಜಗತ್ತಿನಾದ್ಯಂತ ನಾವು ಹಲವು ಗಂಭೀರ ಸವಾಲುಗಳನ್ನು ಎದುರಿಸುತ್ತಿದ್ದೇವೆ. ಕಳೆದೆರಡು ವರ್ಷಗಳಲ್ಲಿ ಪ್ರಜಾಪ್ರಭುತ್ವವಾದ ಹೆಚ್ಚು ಗಟ್ಟಿಯಾಗಿದ್ದು, ದುರ್ಬಲಗೊಂಡಿಲ್ಲ ಎಂದು ಅಮೆರಿಕ ಅಧ್ಯಕ್ಷ ಜೊ ಬೈಡನ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಅಮೆರಿಕ ಅಧ್ಯಕ್ಷನಾಗುವ ಮೊದಲು ಜಗತ್ತಿನಲ್ಲಿ ಚೀನಾ ಪ್ರಬಲ ಶಕ್ತಿಶಾಲಿ ರಾಷ್ಟ್ರವಾಗಿ ಬೆಳೆಯುತ್ತಿದೆ, ಅಮೆರಿಕದ ಬಲ ಕುಸಿಯುತ್ತಿದೆ ಎಂದು ಸುದ್ದಿಯಾಗಿತ್ತು. ಇನ್ನು ಹಾಗಾಗುವುದಿಲ್ಲ. ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರ ಹತ್ತಿರವೂ ನಾನು ಇದನ್ನೇ ಹೇಳಿದ್ದೇನೆ, ನಾವು ಚೀನಾ ಜೊತೆ ಸ್ಪರ್ಧಿಸಲು ನೋಡುತ್ತೇವೆ ಹೊರತು ಸಂಘರ್ಷವನ್ನು ಬಯಸುವುದಿಲ್ಲ ಎಂದು ದೇಶವಾಸಿಗಳನ್ನುದ್ದೇಶಿಸಿ ಮಾತನಾಡುತ್ತಾ ಹೇಳಿದರು.
ನಾವು ಅಮೇರಿಕಾವನ್ನು ಬಲಪಡಿಸಲು ಇನ್ನಷ್ಟು ಹೂಡಿಕೆ ಮಾಡುತ್ತಿದ್ದೇವೆ. ನಮ್ಮ ಮೈತ್ರಿ ರಾಷ್ಟ್ರಗಳಲ್ಲಿ ಕೂಡ ಹೂಡಿಕೆ ಮಾಡುತ್ತಿದ್ದೇವೆ. ನಮ್ಮ ಸುಧಾರಿತ ತಂತ್ರಜ್ಞಾನಗಳನ್ನು ರಕ್ಷಿಸಲು ನಮ್ಮ ಮಿತ್ರರಾಷ್ಟ್ರಗಳೊಂದಿಗೆ ಕೆಲಸ ಮಾಡುತ್ತಿದ್ದೇವೆ, ಹೀಗಿರುವಾಗ ಅವುಗಳನ್ನು ನಮ್ಮ ವಿರುದ್ಧ ಬಳಸಲಾಗುವುದಿಲ್ಲ. ಚೀನಾ ಅಥವಾ ಜಗತ್ತಿನ ಯಾವುದೇ ದೇಶಗಳೊಂದಿಗೆ ಸ್ಪರ್ಧಿಸಲು ದಶಕಗಳಲ್ಲಿ ನಾವು ಪ್ರಬಲ ಸ್ಥಾನದಲ್ಲಿದ್ದೇವೆ ಎಂದು ಕೂಡ ಸಾರಿದರು.
ಇದನ್ನೂ ಓದಿ: ಚೀನಾದ ಗೂಢಚಾರಿಕೆ ಬಲೂನ್ ಹೊಡೆದುರುಳಿಸಿದ ಅಮೆರಿಕಾ: ಚೀನಾ ಕೆಂಡಾಮಂಡಲ; ತಕ್ಕ ಪ್ರತಿಕ್ರಿಯೆ ನೀಡುವುದಾಗಿ ಬೆದರಿಕೆ!
ಹಿಂಸಾತ್ಮಕ ಅಪರಾಧ ಮತ್ತು ಭಯೋತ್ಪಾದನೆಯಂತಹ ಘಟನೆಗಳನ್ನು ತಗ್ಗಿಸಲು ನಮಗೆ ಹೆಚ್ಚಿನ ಸಂಪನ್ಮೂಲಗಳು ಬೇಕು, ಸಮುದಾಯದ ಮಧ್ಯಸ್ಥಿಕೆ ಕಾರ್ಯಕ್ರಮಗಳು ಹೆಚ್ಚೆಚ್ಚು ಆಗಬೇಕು. ಇದೆಲ್ಲವೂ ಮೊದಲ ಸ್ಥಾನದಲ್ಲಿ ಹಿಂಸೆಯನ್ನು ತಡೆಯಲು ಸಹಾಯ ಮಾಡುತ್ತದೆ. ಆಕ್ರಮಣ ಶಸ್ತ್ರಾಸ್ತ್ರಗಳಂತಹ ಕ್ರಮಗಳಿಗೆ ನಾವು ಮುಂದಾಗಬಾರದು. ಹಿಂದೆ ಮಾಡಿದ್ದೆವು, ಆದರೆ ಇನ್ನು ಮುಂದೆ ಅದನ್ನು ಮುಂದುವರಿಸಿಕೊಂಡು ಹೋಗಬಾರದು, 1994ರಲ್ಲಿಯೇ ನಾನು ಬಂದೂಕು, ಶಸ್ತ್ರಾಸ್ತ್ರ, ಹಿಂಸಾಚಾರಗಳ ವಿರುದ್ಧ ಹೋರಾಡಿದವನು ಎಂದರು.
ಕಳೆದ 10 ವರ್ಷಗಳಲ್ಲಿ ನಿಷೇಧವೆಂಬುದು ಕಾನೂನಾಗಿ ಜಾರಿಗೆ ಬಂದಿತು. ಸಾಮೂಹಿಕ ಗುಂಡಿನ ದಾಳಿ ಕಡಿಮೆಯಾಯಿತು. ರಿಪಬ್ಲಿಕನ್ನರ ಅವಧಿ ಮುಗಿದ ನಂತರ ಸಾಮೂಹಿಕ ಗುಂಡಿನ ದಾಳಿಗಳು ಮೂರು ಪಟ್ಟು ಹೆಚ್ಚಾದವು. ಇನ್ನು ಮುಂದೆ ಮತ್ತೆ ಆಕ್ರಮಣಕಾರಿ ಶಸ್ತ್ರಾಸ್ತ್ರಗಳನ್ನು ನಿಷೇಧಿಸಲು ನಾವೆಲ್ಲರೂ ಹೋರಾಡಬೇಕಿದೆ ಎಂದರು.