ನಿಜ್ಜರ್ ಹತ್ಯೆ ಬಳಿಕ ಹಳಸಿದ ಸಂಬಂಧ: ಭಾರತದಿಂದ 41 ರಾಜತಾಂತ್ರಿಕರನ್ನು ಹಿಂತೆಗೆದುಕೊಂಡ ಕೆನಡಾ!

ಸಿಖ್‌ ಪ್ರತ್ಯೇಕತಾವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಬಳಿಕ ಭಾರತ ಮತ್ತು ಕೆನಡಾ ನಡುವಿನ ರಾಜತಾಂತ್ರಿಕ ಸಂಬಂಧ ಹಳಸಿದ್ದು, ಭಾರತದ ಸೂಚನೆ ಬೆನ್ನಲ್ಲೇ 41 ರಾಜತಾಂತ್ರಿಕರನ್ನು ಹಿಂಪಡೆದಿರುವುದಾಗಿ ಕೆನಡಾ ಗುರುವಾರ ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಒಟ್ಟಾವಾ: ಸಿಖ್‌ ಪ್ರತ್ಯೇಕತಾವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಬಳಿಕ ಭಾರತ ಮತ್ತು ಕೆನಡಾ ನಡುವಿನ ರಾಜತಾಂತ್ರಿಕ ಸಂಬಂಧ ಹಳಸಿದ್ದು, ಭಾರತದ ಸೂಚನೆ ಬೆನ್ನಲ್ಲೇ 41 ರಾಜತಾಂತ್ರಿಕರನ್ನು ಹಿಂಪಡೆದಿರುವುದಾಗಿ ಕೆನಡಾ ಗುರುವಾರ ಹೇಳಿದೆ.

ಅಕ್ಟೋಬರ್‌ 10ರೊಳಗೆ ಭಾರತದಲ್ಲಿರುವ ಹೆಚ್ಚುವರಿ ರಾಜತಾಂತ್ರಿಕ ಅಧಿಕಾರಿಗಳನ್ನು ವಾಪಸ್‌ ಕರೆಸಿಕೊಳ್ಳಬೇಕು ಎಂದು ಭಾರತ ಈ ಹಿಂದೆ ಕೆನಡಾಗೆ ಸೂಚನೆ ನೀಡಿತ್ತು.

ಈ ಹಿನ್ನೆಲೆಯಲ್ಲಿ ಹೇಳಿಕೆ ನೀಡಿರುವ ಕೆನಡಾದ ವಿದೇಶಾಂಗ ಸಚಿವೆ ಮೆಲಾನಿ ಜೋಲೀ ಅವರು, ಭಾರತದ ಕ್ರಮಗಳಿಂದಾಗಿ ನಮ್ಮ ರಾಜತಾಂತ್ರಿಕರ ಸುರಕ್ಷತೆಯನ್ನು ಪರಿಗಣಿಸಿ, ನಾವು ಅವರನ್ನು ಭಾರತದಿಂದ ಹಿಂದಕ್ಕೆ ಕರೆಸಿದ್ದೇವೆ. ಭಾರತದಿಂದ ಅವರ ಸುರಕ್ಷಿತ ನಿರ್ಗಮನವನ್ನು ನಾವು ಸುಗಮಗೊಳಿಸಿದ್ದೇವೆ. ಇದರರ್ಥ ನಮ್ಮ ರಾಜತಾಂತ್ರಿಕರು ಮತ್ತು ಅವರ ಕುಟುಂಬಗಳು ಈಗ ಭಾರತ ತೊರೆದಿದ್ದಾರೆ ಎಂದು ಹೇಳಿದ್ದಾರೆ.

ರಾಜತಾಂತ್ರಿಕರಿಗೆ ಶುಕ್ರವಾರದೊಳಗೆ ದೇಶ ತೊರೆಯುವಂತೆ ಭಾರತ ಆದೇಶ ನೀಡಿದೆ. ಹಾಗೆ ಮಾಡದಿದ್ದಲ್ಲಿ ಅವರ ರಾಜತಾಂತ್ರಿಕ ಹುದ್ದೆಯನ್ನು ರದ್ದುಗೊಳಿಸಲಾಗುವುದು. ಭಾರತದ ಈ ಹೆಜ್ಜೆ ಸೂಕ್ತವಲ್ಲ. ಇದು ರಾಜತಾಂತ್ರಿಕ ಸಂಬಂಧಗಳ ವಿಯೆನ್ನಾ ಒಪ್ಪಂದದ ಸ್ಪಷ್ಟ ಉಲ್ಲಂಘನೆಯಾಗಿದೆ. ಹಾಗೆ ಬೆದರಿಕೆ ಹಾಕುವುದು ಅನುಚಿತ ಮತ್ತು ಒತ್ತಡವಾಗಿದೆ ಎಂದು ತಿಳಿಸಿದ್ದಾರೆ.

ಸೆಪ್ಟೆಂಬರ್ 18 ರಂದು ಹೌಸ್ ಆಫ್ ಕಾಮನ್ಸ್‌ನಲ್ಲಿ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಹೇಳಿಕೆ ನೀಡಿದ ಬಳಿಕ ಭಾರತ ಹಾಗೂ ಕೆಡನಾ ನಡುವಿನ ಸಂಬಂಧ ಹದಗೆಟ್ಟಿದೆ.

ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆನ್ಸಿಗಳ ಕೈವಾಡದ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ಕೆನಡಾದ ಪ್ರಧಾನಿ ತಮ್ಮ ದೇಶದ ಸಂಸತ್ತಿನಲ್ಲಿ ಹೇಳಿದ್ದರು. ಇದಾದ ನಂತರ ಕೆನಡಾ ಭಾರತೀಯ ರಾಜತಾಂತ್ರಿಕರನ್ನು ಹೊರಹಾಕಿತು.

ಭಾರತವು ಮೊದಲು ಕೆನಡಾ ಸರ್ಕಾರದ ಆರೋಪಗಳನ್ನು ಅಸಂಬದ್ಧವೆಂದು ತಿರಸ್ಕರಿಸಿತ್ತು. ನಂತರ ಕೆನಡಾದ ರಾಜತಾಂತ್ರಿಕರಿಗೆ ದೇಶವನ್ನು ತೊರೆಯುವಂತೆ ಆದೇಶಿಸಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com