ಖಲಿಸ್ತಾನಿ ಉಗ್ರ ನಿಜ್ಜರ್‌ ಹತ್ಯೆ: ಭಾರತದ ವಿರುದ್ಧ ಆರೋಪ ಪುನರುಚ್ಛರಿಸಿ, ಸಾಕ್ಷ್ಯ ನೀಡದ ಕೆನಡಾ ಪ್ರಧಾನಿ ಟ್ರುಡೋ

ಕೆನಡಾದಲ್ಲಿ ಖಲಿಸ್ತಾನಿಗಳ ಪರ ನಿಲುವು ಹೊಂದಿರುವ ಪಕ್ಷದ ಬೆಂಬಲದಿಂದ ಅಧಿಕಾರದಲ್ಲಿರುವ ಕೆನಡಾ ಪ್ರಧಾನಮಂತ್ರಿ ಜಸ್ಟಿನ್‌ ಟ್ರುಡೋ ಅವರು, ಖಲಿಸ್ತಾನಿಗಳ ಮನವೊಲಿಸಲು ಭಾರತದ ವಿರುದ್ಧ ಹಲವು ಆರೋಪಗಳನ್ನು ಮಾಡುತ್ತಿದ್ದಾರೆ.
ಕೆನಡಾ ಪ್ರಧಾನಮಂತ್ರಿ ಜಸ್ಟಿನ್‌ ಟ್ರುಡೋ
ಕೆನಡಾ ಪ್ರಧಾನಮಂತ್ರಿ ಜಸ್ಟಿನ್‌ ಟ್ರುಡೋ

ಒಟ್ಟಾವ: ಕೆನಡಾದಲ್ಲಿ ಖಲಿಸ್ತಾನಿಗಳ ಪರ ನಿಲುವು ಹೊಂದಿರುವ ಪಕ್ಷದ ಬೆಂಬಲದಿಂದ ಅಧಿಕಾರದಲ್ಲಿರುವ ಕೆನಡಾ ಪ್ರಧಾನಮಂತ್ರಿ ಜಸ್ಟಿನ್‌ ಟ್ರುಡೋ ಅವರು, ಖಲಿಸ್ತಾನಿಗಳ ಮನವೊಲಿಸಲು ಭಾರತದ ವಿರುದ್ಧ ಹಲವು ಆರೋಪಗಳನ್ನು ಮಾಡುತ್ತಿದ್ದಾರೆ.

ಕಳೆದ ಜೂನ್‌ 18ರಂದು ಕೆನಡಾದಲ್ಲಿ ಹತ್ಯೆಗೀಡಾದ ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಯ ಹಿಂದೆ ಭಾರತದ ಕೈವಾಡ ಇದೆ, ಭಾರತದ ಏಜೆಂಟರೇ ಹತ್ಯೆ ಮಾಡಿದ್ದಾರೆ ಎಂದು ಟ್ರುಡೋ ಆರೋಪ ಮಾಡಿದ್ದರು. ಇದೀಗ ಮತ್ತೊಮ್ಮೆ ತಮ್ಮ ಆರೋಪವನ್ನು ಪುನರುಚ್ಛರಿಸಿದ್ದು, ಇದಕ್ಕೆ ಸಾಕ್ಷ್ಯ ನೀಡಲು ವಿಫಲರಾಗಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಡೋ ಅವರಿಗೆ ಪತ್ರಕರ್ತರು ಸಾಕ್ಷ್ಯ ಕೇಳಿದ್ದಾರೆ. ಈ ವೇಳೆ ಟ್ರುಡೋ ಅವರು ಸಾಕ್ಷ್ಯ ನೀಡಿಲ್ಲ. ಹಾಗೆಂದು ಇದೆ ಎಂದು ಕೂಡ ದೃಢ ವಿಶ್ವಾಸ ವ್ಯಕ್ತಪಡಿಸಿಲ್ಲ.ಭಾರತದ ವಿರುದ್ಧ ಆರೋಪ ಮಾಡಲು ಬಲವಾದ ಹಾಗೂ ವಿಶ್ವಾಸಾರ್ಹ ಕಾರಣಗಳಿವೆ ಎಂದಷ್ಟೇ ಹೇಳಿದ್ದಾರೆ.

ಕೆಲ ದಿನಗಳ ಹಿಂದೆಯೇ ನಾನು ಭಾರತದ ವಿರುದ್ಧ ಆರೋಪ ಮಾಡಿದ್ದೇನೆ. ಇದಕ್ಕೆ ಬಲವಾದ ಕಾರಣಗಳೂ ಇವೆ. ಕೆನಡಾದಲ್ಲಿ ಕೆನಡಾ ನಾಗರಿಕನ ಹತ್ಯೆಯ ಹಿಂದೆ ಭಾರತದ ಕೈವಾಡವಿದೆ. ಕೆನಡಾ ನಾಗರಿಕರನ್ನು ರಕ್ಷಿಸುವುದು ನನ್ನ ಜವಾಬ್ದಾರಿಯಾಗಿದೆ. ಇದರ ದಿಸೆಯಲ್ಲಿ ನಾನು ನನ್ನ ಪ್ರಯತ್ನ, ಹೋರಾಟ ಮುಂದುವರಿಸುತ್ತೇನೆ. ಕೆನಡಾ ಹಾಗೂ ಅಂತಾರಾಷ್ಟ್ರೀಯ ನಿಯಮಗಳನ್ನು ಪಾಲಿಸುತ್ತಲೇ ನಾನು ಇದನ್ನು ಮಾಡುತ್ತೇನೆ” ಎಂದು ತಿಳಿಸಿದ್ದಾರೆ.

ಈ ನಡುವೆ ಕೆನಡಾದಲ್ಲಿ ಭಾರತದ ರಾಯಭಾರಿಯನ್ನು ಉಚ್ಚಾಟನೆಗೊಳಿಸಿದ ಬಳಿಕ ಭಾರತ ಕೂಡ ಕೆನಡಾಗೆ ಹಲವು ಕ್ರಮಗಳ ಮೂಲಕ ತಿರುಗೇಟು ನೀಡಿದೆ.

ಭಾರತದಲ್ಲಿರುವ ಕೆನಡಾ ರಾಯಭಾರಿಯನ್ನು ಉಚ್ಚಾಟನೆ ಮಾಡುವ ಜೊತೆಗೆ ಕೆನಡಾ ನಾಗರಿಕರಿಗೆ ವೀಸಾ ನೀಡುವನ್ನೂ ಭಾರತ ಸ್ಥಗಿತಗೊಳಿಸಿದೆ.

ಈ ನಡುವೆ ಹರ್ದೀಪ್ ಸಿಂಗ್‌ ನಿಜ್ಜರ್‌ ಹತ್ಯೆಯ ವಿಚಾರಕ್ಕೆ ಸಂಬಂಧಿಸಿದಂತೆ ಅಮೆರಿಕ ಮಧ್ಯಪ್ರವೇಶಿಸಿದ್ದು, ತನಿಖೆಗೆ ಭಾರತ ಸಹಕರಿಸಲಿ ಎಂದು ಹೇಳಿದೆ. ಮತ್ತೊಂದೆಡೆ, ಕೆನಡಾ ಆರೋಪ ಮಾಡುವ ಬದಲು ಸಾಕ್ಷ್ಯ ಒದಗಿಸಲಿ ಎಂದು ಭಾರತ ಪ್ರತ್ಯುತ್ತರ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com