
ನವದೆಹಲಿ: ಉಕ್ರೇನ್ ಸಂಘರ್ಷವನ್ನು ಪರಿಹರಿಸಲು ಮಾತುಕತೆ ಮತ್ತು ರಾಜತಾಂತ್ರಿಕತೆಯು ಮುಂದಿನ ಮಾರ್ಗವಾಗಿದೆ, ಯುದ್ಧಭೂಮಿಯಲ್ಲಿ ಪರಿಹಾರವನ್ನು ಕಂಡುಹಿಡಿಯಲಾಗುವುದಿಲ್ಲ ಎಂಬ ಮಾತನ್ನು ಭಾರತ ಸಮರ್ಥಿಸಿಕೊಂಡೇ ಬಂದಿದೆ.
ಪೂರ್ವ ಯುರೋಪಿಯನ್ ದೇಶದ ಪರಿಸ್ಥಿತಿಯ ಬಗ್ಗೆ ಅಮೆರಿಕ ಕಳವಳ ವ್ಯಕ್ತಪಡಿಸಿದ ನಂತರ ಮಾಸ್ಕೋದಲ್ಲಿ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರ ಶೃಂಗಸಭೆ ಮಾತುಕತೆ ನಡೆದ ಹೊತ್ತಿನಲ್ಲಿ ಈ ಹೇಳಿಕೆ ಬಂದಿದೆ.
ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತ್ವ ಸೇರಿದಂತೆ ವಿಶ್ವಸಂಸ್ಥೆಯ ಸೂಚನೆಯನ್ನು ಗೌರವಿಸುವಂತೆ ಭಾರತ ಕರೆ ನೀಡಿದೆ. ಯುದ್ಧಭೂಮಿಯಲ್ಲಿ ಯಾವುದೇ ಪರಿಹಾರವಿಲ್ಲ, ಮಾತುಕತೆ ಮತ್ತು ರಾಜತಾಂತ್ರಿಕತೆಯು ಮುಂದಿನ ದಾರಿಯಾಗಿದೆ ಹೇಳಿದೆ.
ಮೋದಿ-ಪುಟಿನ್ ಮಾತುಕತೆಗೆ ಮುಂಚಿತವಾಗಿ, ಉಕ್ರೇನ್ ಸಂಘರ್ಷದ ಯಾವುದೇ ನಿರ್ಣಯವು ವಿಶ್ವಸಂಸ್ಥೆಯ ಸೂಚನೆ ಮತ್ತು ಉಕ್ರೇನ್‌ನ ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತೆಯನ್ನು ಗೌರವಿಸಬೇಕು ಎಂದು ರಷ್ಯಾಕ್ಕೆ ಸ್ಪಷ್ಟಪಡಿಸುವಂತೆ ಭಾರತಕ್ಕೆ ಅಮೆರಿಕ ಕರೆ ನೀಡಿತ್ತು.
ಭಾರತ ಕಾರ್ಯತಂತ್ರದ ಪಾಲುದಾರರಾಗಿದ್ದು, ಅವರೊಂದಿಗೆ ನಾವು ಪೂರ್ಣ ಮತ್ತು ಸ್ಪಷ್ಟವಾದ ಸಂವಾದದಲ್ಲಿ ತೊಡಗಿದ್ದೇವೆ. ಇದು ರಷ್ಯಾದೊಂದಿಗಿನ ಅವರ ಸಂಬಂಧದ ಬಗ್ಗೆ ನಮ್ಮ ಕಾಳಜಿಯನ್ನು ಒಳಗೊಂಡಿದೆ ಎಂದು ವಿದೇಶಾಂಗ ಇಲಾಖೆಯ ವಕ್ತಾರ ಮ್ಯಾಥ್ಯೂ ಮಿಲ್ಲರ್ ವಾಷಿಂಗ್ಟನ್‌ನಲ್ಲಿ ಪ್ರಧಾನಿ ಮೋದಿಯವರ ಮಾಸ್ಕೋ ಭೇಟಿಯ ಕುರಿತು ಕೇಳಿದಾಗ ಹೇಳಿದರು.
ಉಕ್ರೇನ್‌ನಲ್ಲಿನ ಸಂಘರ್ಷಕ್ಕೆ ಯಾವುದೇ ನಿರ್ಣಯವು ವಿಶ್ವಸಂಸ್ಥೆ ಸೂಚನೆಯನ್ನು ಗೌರವಿಸುವ ಅಗತ್ಯವಿದೆ ಎಂದು ಸ್ಪಷ್ಟಪಡಿಸಲು ನಾವು ಒತ್ತಾಯಿಸುತ್ತೇವೆ, ಅದು ಉಕ್ರೇನ್‌ನ ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತ್ವ ಗೌರವಿಸುತ್ತದೆ ಎಂದರು.
ಮಾಸ್ಕೋದೊಂದಿಗಿನ ದೆಹಲಿಯ ಸಂಬಂಧದ ಬಗ್ಗೆ ತನ್ನ ಕಳವಳವನ್ನು ಯುಎಸ್ ಭಾರತಕ್ಕೆ ಸ್ಪಷ್ಟಪಡಿಸಿದೆ ಎಂದು ಮಿಲ್ಲರ್ ಹೇಳಿದರು.
ಪ್ರಧಾನಿ ಮೋದಿ ನಿನ್ನೆ ಸೋಮವಾರ ರಷ್ಯಾಕ್ಕೆ ಎರಡು ದಿನಗಳ ಉನ್ನತ-ಮಟ್ಟದ ಪ್ರವಾಸ ಕೈಗೊಂಡಿದ್ದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ 22 ನೇ ಭಾರತ-ರಷ್ಯಾ ಶೃಂಗಸಭೆ ಮುಖ್ಯವಾಗಿದೆ. ಉಕ್ರೇನ್ ಮೇಲೆ ಮಾಸ್ಕೋ ದಾಳಿ ಆರಂಭವಾದ ನಂತರ ಮೋದಿಯವರ ಮೊದಲ ರಷ್ಯಾ ಪ್ರವಾಸ ಇದಾಗಿದೆ.
ಸೋಮವಾರ ರಾತ್ರಿ ಮಾಸ್ಕೋದ ಹೊರವಲಯದಲ್ಲಿರುವ ನೊವೊ-ಒಗರೆವೊದಲ್ಲಿನ ನಿವಾಸದಲ್ಲಿ ರಷ್ಯಾದ ಅಧ್ಯಕ್ಷರು ಭಾರತ ಪ್ರಧಾನಿಗೆ ಖಾಸಗಿ ಔತಣಕೂಟವನ್ನು ಏರ್ಪಡಿಸಿದ್ದರು.
Advertisement