
ಸಿಡ್ನಿ: ಆಸ್ಟ್ರೇಲಿಯಾದಲ್ಲಿ ಇನ್ಫೋಸಿಸ್ ಟೆಕ್ಕಿಯೊಬ್ಬರು ರೈಲ್ವೆ ಹಳಿಯ ಮೇಲೆ ಬಿದ್ದ ತನ್ನ ಅವಳಿ ಹೆಣ್ಣುಮಕ್ಕಳನ್ನು ರಕ್ಷಿಸಲು ಪ್ರಯತ್ನಿಸುವಾಗ ದುರಂತ ಸಾವಿಗೀಡಾಗಿದ್ದಾರೆ.
ಮೂಲಗಳ ಪ್ರಕಾರ 40 ವರ್ಷದ ಆನಂದ್ ರನ್ವಾಲ್ ಅವರು ಸಿಡ್ನಿಯ ಕಾರ್ಲ್ಟನ್ ನಿಲ್ದಾಣದಲ್ಲಿ ಲಿಫ್ಟ್ ನಿಂದ ಇಳಿದು ಬರುವಾಗ ಈ ದುರ್ಘಟನೆ ನಡೆದಿದ್ದು, ಈ ವೇಳೆ ಆನಂದ್ ರನ್ವಾಲ್ ಅವರು ದುರಂತ ಸಾವಿಗೀಡಾಗಿದ್ದಾರೆ.
ಮೂಲಗಳ ಪ್ರಕಾರ ಆನಂದ್ ರನ್ವಾಲ್ ಇನ್ಫೋಸಿಸ್ ಐಟಿ ಉದ್ಯೋಗಿಯಾಗಿದ್ದು, ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಕೆಲಸ ಮಾಡುತ್ತಿದ್ದರು. ಆನಂದ್ ತಮ್ಮ ಪತ್ನಿ ಮತ್ತು ಅವಳಿ ಹೆಣ್ಣುಮಕ್ಕಳೊಂದಿಗೆ ಕಾರ್ಲ್ಟನ್ ನಿಲ್ದಾಣದಲ್ಲಿ ಲಿಫ್ಟ್ ನಿಂದ ಇಳಿದು ಬರುವಾಗ ಅವರ ಅವಳಿ ಹೆಣ್ಣು ಮಕ್ಕಳಿದ್ದ ಪ್ರ್ಯಾಮ್ ಆಕಸ್ಮಿಕವಾಗಿ ರೈಲ್ವೆ ಹಳಿಗೆ ಬಿದ್ದಿದೆ. ಆಗ ಆನಂದ್ ಹೆಣ್ಣುಮಕ್ಕಳನ್ನು ಉಳಿಸಲು ಪ್ಲಾಟ್ ಫಾರ್ಮ್‌ನಿಂದ ರೈಲ್ವೆ ಹಳಿಯ ಇಳಿದಿದ್ದಾರೆ. ಅದೇ ವೇಳೆ ರೈಲು ಬಂದಿದೆ.
ಕೂಡಲೇ ಆನಂದ್ ತಮ್ಮ ಒಂದು ಮಗುವನ್ನು ರಕ್ಷಿಸಲು ಯಶಸ್ವಿಯಾಗಿದ್ದು ಕ್ಷಣಮಾತ್ರದಲ್ಲಿ ರೈಲು ಆನಂದ್ ಮತ್ತು ಅವರ ಮತ್ತೋರ್ವ ಮಗುವಿನ ಮೇಲೆ ಹರಿದು ಹೋಗಿದೆ. ಆನಂದ್ ಅವರ ಪತ್ನಿ ಮತ್ತು ಮಗಳನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರಿಗೆ ಚಿಕಿತ್ಸೆ ನೀಡಿ ಡಿಸ್ಚಾರ್ಜ್ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಈ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದರಲ್ಲಿ ಕುಟುಂಬವು ಫುಟ್‌ಪಾತ್‌ನಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ತೋರಿಸುತ್ತದೆ. ಆನಂದ್ ದಂಪತಿ ಲಿಫ್ಟ್ ಮೂಲಕ ಪ್ಲಾಟ್‌ಫಾರ್ಮ್‌ಗೆ ಬಂದಿದ್ದರು. ಈ ವೇಳೆ ಮಕ್ಕಳಿದ್ದ ಪ್ರ್ಯಾಮ್ ಕೈಜಾರಿ ಹಳಿ ಮೇಲೆ ಉರುತ್ತಾ ಹೋಗಿದೆ. ಆಗ ಆನಂದ್ ಅವರ ಪತ್ನಿ ಕಿರುಚಿದಾಗ ಆನಂದ್ ರೈಲು ಹಳಿಗಳ ಮೇಲೆ ಮಕ್ಕಳನ್ನು ರಕ್ಷಿಸಲು ಹಾರಿದ್ದಾರೆ. ಆ ವೇಳೆ ಈ ದುರ್ಘಟನೆ ಸಂಭವಿಸಿದೆ.
ಆನಂದ್ ಮತ್ತು ಅವರ ಕುಟುಂಬವು 2023ರ ಕೊನೆಯಲ್ಲಿ ಸಿಡ್ನಿಗೆ ಸ್ಥಳಾಂತರಗೊಂಡಿತ್ತು. ಅವರು ಸಿಡ್ನಿಯ ಕೊಗರಾ ಉಪನಗರದಲ್ಲಿ ವಾಸಿಸುತ್ತಿದ್ದರು. ಇತ್ತೀಚೆಗೆ, ಆನಂದ್ ಅವರ ಪೋಷಕರು ಸಿಡ್ನಿಯಲ್ಲಿದ್ದ ಅವರ ಮನೆಗೆ ಭೇಟಿ ನೀಡಿದ್ದರು ಎನ್ನಲಾಗಿದೆ.
Advertisement