
ಜೆರುಸಲೇಂ: ಇಸ್ರೇಲ್ ಮೇಲಿನ ಮಾರಣಹೋಮದ ರೂವಾರಿ ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಹತ್ಯೆಯಾಗಿದ್ದು, ಈತನ ಕೊನೆ ಕ್ಷಣದ ವಿಡಿಯೋವನ್ನು ಇಸ್ರೇಲ್ ಬಿಡುಗಡೆ ಮಾಡಿದೆ.
ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್'ನನ್ನು ಹತ್ಯೆ ಮಾಡಿರುವುದಾಗಿ ಇಸ್ರೇಲ್ ವಿದೇಶಾಂಗ ಸಚಿವ ಇಸ್ರೇಲ್ ಕಾಟ್ಜ್ ಹೇಳಿದ್ದರು.
ಇದೀಗ ಆತನ ಕೊನೆ ಕ್ಷಣದ ಡ್ರೋಣ್ ವಿಡಿಯೋಗಳನ್ನು ಇಸ್ರೇಲ್ ಬಿಡುಗಡೆ ಮಾಡಿದ್ದು, ಈ ಮೂಲಕ ಹತ್ಯೆ ಮಾಡಿರುವುದನ್ನು ಖಚಿತಪಡಿಸಿದೆ.
ಇಸ್ರೇಲ್ ಬಿಡುಗಡೆ ಮಾಡಿದ ಡ್ರೋನ್ ದೃಶ್ಯಾವಳಿಯಲ್ಲಿ ಯಹ್ಯಾ ಸಿನ್ವರ್‌ನ ಕೊನೆಯ ಕ್ಷಣಗಳು ಕಂಡು ಬಂದಿದೆ. ಸಿನ್ವರ್ ತನ್ನ ಅಂತ್ಯದ ಕ್ಷಣಗಳಲ್ಲಿ ಗಾಯಗೊಂಡಿದ್ದರೂ, ಡ್ರೋನ್ ಕಡೆಗೆ ವಸ್ತು (ಮರದ ಕೋಲು) ವೊಂದನ್ನು ಎಸೆಯುತ್ತಿರುವುದು ಕಂಡು ಬಂದಿದೆ.
ಈತನ್ಮಧ್ಯೆ ಸಿನ್ವರ್ ಹತ್ಯೆಯ ಬಳಿಕ ಹಮಾಸ್‌ಗೆ ಭಾರಿ ಪೆಟ್ಟು ಬಿದ್ದಂತಾಗಿದೆ. ಸಿನ್ವರ್ ಹತ್ಯೆಯಿಂದ ಯುದ್ಧ ಅಂತ್ಯ ಗೊಂಡಿಲ್ಲ. ಸಿನ್ವರ್ ಹತ್ಯೆ ಹಮಾಸ್ ಪಿಡುಗು ನಿರ್ಮೂಲನೆಗೊಳಿಸುವ ಯತ್ನ ದಲ್ಲಿ ದೊಡ್ಡ ಮೈಲುಗಲ್ಲು ಇದಾಗಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.
ಗಾಜಾದಲ್ಲಿ ಗುರುವಾರ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ಒಟ್ಟು ಮೂವರು ಬಂಡುಕೋರರು ಮೃತಪಟ್ಟಿದ್ದು, ಮೂವರಲ್ಲಿ ಸಿನ್ವರ್ ಕೂಡ ಒಬ್ಬನಾಗಿದ್ದ ಎಂದು ಇಸ್ರೇಲ್ ತಿಳಿಸಿತ್ತು. ಆದರೆ ಸಿನ್ವರ್ ಮೃತಪಟ್ಟಿರುವುದನ್ನು ಹಮಾಸ್ ಸಂಘಟನೆ ಇನ್ನೂ ದೃಢಪಡಿಸಿಲ್ಲ.
2023ರ ಅಕ್ಟೋಬರ್ 7ರಂದು ಇಸ್ರೇಲ್ ನೆಲಕ್ಕೆ ನುಗ್ಗಿ ಹಮಾಸ್ ನಡೆಸಿದ್ದ ಮಾರಣಹೋಮದ ಮಾಸ್ಟರ್ ಮೈಂಡ್ ಯಾಹ್ಯಾ ಸಿನ್ವಾರ್ ಎಂದು ಇಸ್ರೇಲ್ ಆರೋಪಿಸಿತ್ತು.
Advertisement