ನವದೆಹಲಿ: ಲೆಬನಾನ್ ನಲ್ಲಿ ನಡೆದ ಪೇಜರ್ ಸ್ಫೋಟ ಪ್ರಕರಣ ಮತ್ತೊಂದು ತಿರುವು ಪಡೆದಿದ್ದು, ಕೇವಲ ಪೇಜರ್ ಗಳಷ್ಟೇ ಅಲ್ಲ.. ಬಂಡುಕೋರರು ಬಳಸುತ್ತಿದ್ದ ವಾಕಿ-ಟಾಕಿಗಳೂ ಕೂಡ ಸ್ಫೋಟಗೊಂಡಿವೆ ಎಂದು ತಿಳಿದುಬಂದಿದೆ.
ಪರಿಣಾಮ ಈ ಸ್ಫೋಟ ಪ್ರಕರಣದಲ್ಲಿ ಸಾವಿಗೀಡಾದವರ ಸಂಖ್ಯೆ 32ಕ್ಕೆ ಮತ್ತು ಗಾಯಾಳುಗಳ ಸಂಖ್ಯೆ 3,250ಕ್ಕೆ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.
ಇರಾನ್ ಬೆಂಬಲಿತ ಹಿಜ್ಬುಲ್ಲಾ ಬಂಡುಕೋರರು ಬಳಸುತ್ತಿದ್ದ ವಾಕಿ-ಟಾಕಿಗಳು ಬುಧವಾರ ಅದರ ಭದ್ರಕೋಟೆ ಬೈರುತ್ ನಲ್ಲಿ ಸ್ಫೋಟಗೊಂಡವು. ಈ ಪ್ರಕರಣದಲ್ಲಿ ಕನಿಷ್ಠ 20 ಜನರು ಸಾವನ್ನಪ್ಪಿ ಮತ್ತು 450 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಅದರ ನಂತರದ ದಿನ ಹಿಜ್ಬುಲ್ಲಾ ಆಯೋಜಿಸಿದ್ದ ಸಾಮೂಹಿಕ ಅಂತ್ಯಕ್ರಿಯೆ ಜಾಗದ ಬಳಿ ಬುಧವಾರ ಕನಿಷ್ಠ ಒಂದು ಸ್ಫೋಟ ಸಂಭವಿಸಿದೆ ಎಂದು ವರದಿಯಾಗಿದೆ.
ಹೆಜ್ಬೊಲ್ಲಾಹ್ ಬಳಸಿದ ಸಾವಿರಾರು ಪೇಜರ್‌ಗಳು ಲೆಬನಾನ್‌ನಾದ್ಯಂತ ಸ್ಫೋಟಗೊಂಡ ಒಂದು ದಿನದ ನಂತರ ವಾಕಿಟಾಕಿಗಳು ಸ್ಫೋಟಗೊಂಡಿವೆ. ಈ ಸ್ಫೋಟದಲ್ಲಿ ಇಬ್ಬರು ಮಕ್ಕಳು ಸೇರಿದಂತೆ 12 ಜನರು ಸಾವನ್ನಪ್ಪಿ ಸುಮಾರು 2,800 ಜನರು ಗಾಯಗೊಂಡಿದ್ದಾರೆ.
ಈ ಸ್ಫೋಟದ ಬಗ್ಗೆ ಇಸ್ರೇಲ್ ಇದುವರೆಗೆ ಅಧಿಕೃತವಾಗಿ ಏನನ್ನೂ ಹೇಳಿಲ್ಲವಾದರೂ ಸ್ಫೋಟಕ್ಕೆ ಹೆಜ್ಬುಲ್ಲಾ ಸಂಘಟನೆ ಇಸ್ರೇಲ್ ಅನ್ನೇ ಹೊಣೆಗಾರನನ್ನಾಗಿ ಮಾಡಿದೆ. ಅಲ್ಲದೆ "ಈ ಕ್ರಿಮಿನಲ್ ಆಕ್ರಮಣಕ್ಕೆ ಇಸ್ರೇಲ್ ಸಂಪೂರ್ಣ ಹೊಣೆಯಾಗಿದ್ದು, ಪ್ರತೀಕಾರ ತೀರಿಸಿಕೊಳ್ಳುವುದಾಗಿ ಶಪಥಗೈದಿದೆ.
Advertisement