ವಾಷಿಂಗ್ಟನ್: ಲೆಬೆನಾನ್ ನಲ್ಲಿ ನಡೆದ ಪೇಜರ್ ಮತ್ತು ವಾಕಿಟಾಕಿ ಸ್ಫೋಟದ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳ ನಡುವೆಯೇ ಘಟನೆ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿರುವ ವಿಶ್ವಸಂಸ್ಥೆ, ''ಮಧ್ಯಪ್ರಾಚ್ಯದಲ್ಲಿ ತೀವ್ರ ಸಂಘರ್ಷ ಏರ್ಪಡುವ ಸಾಧ್ಯತೆ ಇದೆ'' ಎಂದು ಹೇಳಿದೆ.
ಲೆಬನಾನ್ ನಲ್ಲಿ ನಡೆದ ಪೇಜರ್ ಸ್ಫೋಟ ಪ್ರಕರಣ ಮತ್ತು ಆ ಬಳಿಕ ನಡೆದ ವಾಕಿಟಾಕಿ ಸ್ಫೋಟ ಪ್ರಕರಣದಲ್ಲಿ ಸಾವಿಗೀಡಾದವರ ಸಂಖ್ಯೆ 32ಕ್ಕೆ ಮತ್ತು ಗಾಯಾಳುಗಳ ಸಂಖ್ಯೆ 3,250ಕ್ಕೆ ಏರಿಕೆಯಾಗಿದೆ. ಈ ಸ್ಫೋಟಗಳ ಹಿಂದೆ ಇಸ್ರೇಲ್ ನ ಗುಪ್ತಚರ ಸಂಸ್ಥೆ ಮೊಸಾದ್ ಕೈವಾಡವಿದೆ ಎಂದು ಲೆಬೆನಾನ್ ಆರೋಪಿಸಿದೆ.
ಹೀಗಿರುವಾಗಲೇ ಇರಾನ್ ಬೆಂಬಲಿತ ಬಂಡುಕೋರ ಸಂಘಟನೆ ಹಿಜ್ಬುಲ್ಲಾ ಬುಧವಾರ ಇಸ್ರೇಲ್ ಮೇಲೆ ಮುಗಿಬಿದ್ದಿದ್ದು, ಇಸ್ರೇಲಿ ರಾಕೆಟ್ ಲಾಂಚರ್ ಗಳ ಮೇಲೆ ರಾಕೆಟ್‌ಗಳ ಮೂಲಕ ದಾಳಿ ಮಾಡಿದೆ. ಈ ಎಲ್ಲ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ವೀಕ್ಷಿಸುತ್ತಿರುವ ವಿಶ್ವಸಂಸ್ಥೆ ''ತೀವ್ರ ಸಂಘರ್ಷ ಅಪಾಯ''ದ ಕುರಿತು ಎಚ್ಚರಿಕೆ ನೀಡಿದೆ.
ಈ ಕುರಿತು ಮಾತನಾಡಿರುವ ವಿಶ್ವಸಂಸ್ಥೆ ಮುಖ್ಯಸ್ಥ ಆಂಟೋನಿಯೊ ಗುಟೆರೆಸ್, 'ಹೆಜ್ಬೊಲ್ಲಾ ಗುರಿಯಾಗಿಸಿಕೊಂಡು ನಡೆದ ಪೇಜರ್ ಸ್ಫೋಟ ಲೆಬನಾನ್‌ನಲ್ಲಿ ನಾಟಕೀಯ ಸಂಘರ್ಷ ಉಲ್ಬಣಗೊಳ್ಳುವ ಗಂಭೀರ ಅಪಾಯವನ್ನು ಸೂಚಿಸುತ್ತವೆ ಮತ್ತು ಆ ಉಲ್ಬಣವನ್ನು ತಪ್ಪಿಸಲು ಎಲ್ಲವನ್ನೂ ಮಾಡಬೇಕು ಎಂದು ಹೇಳಿದ್ದಾರೆ.
ಇದೇ ರೀತಿಯ ಪ್ರತಿಕ್ರಿಯೆ ನೀಡಿರುವ ಅಮೆರಿಕ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಜಾನ್ ಕಿರ್ಬಿ, 'ನಾವು ಇನ್ನು ಯಾವುದೇ ರೀತಿಯ ಸಂಘರ್ಷ ಉಲ್ಬಣವನ್ನು ನೋಡಲು ಬಯಸುವುದಿಲ್ಲ. ಈ ಬಿಕ್ಕಟ್ಟಿನಲ್ಲಿ ನಾವು ಎಲ್ಲಿದ್ದೇವೆ ಎಂಬುದನ್ನು ಪರಿಹರಿಸುವ ಮಾರ್ಗವು ಹೆಚ್ಚುವರಿ ಮಿಲಿಟರಿ ಕಾರ್ಯಾಚರಣೆಗಳ ಮೂಲಕ ಎಂದು ನಾವು ನಂಬುವುದಿಲ್ಲ. ಮಿಲಿಟರಿ ಕಾರ್ಯಾಚರಣೆಗಳು ಸಮಸ್ಯೆಗೆ ಉತ್ತರವಾಗುವುದಿಲ್ಲ ಎಂದು ಹೇಳಿದ್ದಾರೆ.
ಅಂದಹಾಗೆ ಲೆಬನಾನ್‌ನಲ್ಲಿ ನಡೆದ ಪೇಜರ್ ಸ್ಫೋಟಗಳ ಕುರಿತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಶುಕ್ರವಾರ ಸಭೆ ಸೇರಲಿದೆ.
Advertisement