
ವಾಷಿಂಗ್ಟನ್: 26/11ರ ಮುಂಬೈ ಭಯೋತ್ಪಾದಕ ದಾಳಿಯು ಇಡೀ ಜಗತ್ತನ್ನು ಬೆಚ್ಚಿಬೀಳಿಸಿತ್ತು. ದಾಳಿಗೆ ಕಾರಣಕರ್ತರಾದ ಆರೋಪಿಗಳನ್ನು ನ್ಯಾಯಾಲಯಕ್ಕೆ ಕರೆತಂದು ವಿಚಾರಣೆ ನಡೆಸಿ ಶಿಕ್ಷೆ ನೀಡುವ ಭಾರತದ ಪ್ರಯತ್ನಗಳನ್ನು ಅಮೆರಿಕ ದೀರ್ಘಕಾಲದಿಂದ ಬೆಂಬಲಿಸಿರುವ ಕ್ರಮವಾಗಿ ಪಾಕಿಸ್ತಾನಿ-ಕೆನಡಾದ ತಹಾವೂರ್ ಹುಸೇನ್ ರಾಣಾನನ್ನು ನಿನ್ನೆ ದೆಹಲಿಗೆ ಕರೆತಂದಿರುವುದು ಸಾರುತ್ತದೆ.
ಭಯಾನಕ 2008ರ ಮುಂಬೈ ಭಯೋತ್ಪಾದಕ ದಾಳಿಯನ್ನು ಯೋಜಿಸುವಲ್ಲಿ ರಾಣಾ ಪ್ರಮುಖ ಪಾತ್ರ ವಹಿಸಿದ್ದ ಎಂಬ ಬಲವಾದ ಶಂಕೆಯ ಆಧಾರದ ಮೇಲೆ ಭಾರತಕ್ಕೆ ಗಡಿಪಾರು ಮಾಡಲಾಗಿದ್ದು, ನ್ಯಾಯಾಲಯದಲ್ಲಿ ತನಿಖೆ ಎದುರಿಸಲು ಅಮೆರಿಕ ಭಾರತಕ್ಕೆ ಹಸ್ತಾಂತರಿಸಿದೆ ಎಂದು ಅಮೆರಿಕ ವಿದೇಶಾಂಗ ಇಲಾಖೆಯ ವಕ್ತಾರ ಟ್ಯಾಮಿ ಬ್ರೂಸ್ ಹೇಳಿದ್ದಾರೆ.
ಈ ದಾಳಿಗಳಿಗೆ ಕಾರಣರಾದವರಿಗೆ ಶಿಕ್ಷೆ ನೀಡುವುದನ್ನು ಖಚಿತಪಡಿಸಿಕೊಳ್ಳಲು ಭಾರತದ ಪ್ರಯತ್ನಗಳನ್ನು ಅಮೆರಿಕ ದೀರ್ಘಕಾಲದಿಂದ ಬೆಂಬಲಿಸಿದೆ ಮತ್ತು ಅಧ್ಯಕ್ಷ ಟ್ರಂಪ್ ಹೇಳಿದಂತೆ, ಜಾಗತಿಕ ಭಯೋತ್ಪಾದನೆಯ ಪಿಡುಗನ್ನು ಎದುರಿಸಲು ಅಮೆರಿಕ ಮತ್ತು ಭಾರತ ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತವೆ ಎಂದು ತಿಳಿಸಿದ್ದಾರೆ.
2008ರಲ್ಲಿ ನಡೆದ ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಆರು ಅಮೆರಿಕನ್ನರು ಸೇರಿದಂತೆ 166 ಜನರ ದುರಂತ ಸಾವಿಗೆ ಕಾರಣವಾದ ದಾಳಿ ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿತ್ತು ಎಂದು ಬ್ರೂಸ್ ಹೇಳಿದ್ದಾರೆ.
ಇದಕ್ಕೂ ಮೊದಲು, ಯುಎಸ್ ನ್ಯಾಯ ಇಲಾಖೆಯ ವಕ್ತಾರರು ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ರಾಣಾ ಹಸ್ತಾಂತರವು ಘೋರ ದಾಳಿಗೆ ಬಲಿಯಾದವರ ಕುಟುಂಬಸ್ಥರಿಗೆ ನ್ಯಾಯ ಒದಗಿಸುವಲ್ಲಿ ನಿರ್ಣಾಯಕ ಹೆಜ್ಜೆಯಾಗಿದೆ. ಪಾಕಿಸ್ತಾನಿ ಕೆನಡಾದ ತಹವ್ವೂರ್ ರಾಣಾನನ್ನು ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯಕ್ಕೆ NIA ಹಾಜರುಪಡಿಸಿತು.
Advertisement