
ಇಸ್ಲಾಮಾಬಾದ್: ಕಾಶ್ಮೀರ ನಮ್ಮ "ರಕ್ತನಾಳ". ನಮ್ಮ ಅಸ್ತಿತ್ವಕ್ಕೆ ಧಕ್ಕೆ ಉಂಟಾಗುತ್ತಿದೆ ಎಂದು ನಾವು ಭಾವಿಸಿದರೆ, ನಮ್ಮೊಂದಿಗೆ ಅರ್ಧದಷ್ಟು ಪ್ರಪಂಚವನ್ನು ಸಹ ಪತನಗೊಳಿಸುತ್ತೇವೆಂದು ಪಾಕಿಸ್ತಾನ ಮತ್ತೊಮ್ಮೆ ಭಾರತಕ್ಕೆ ಅಣುಬಾಂಬ್ ದಾಳಿ ಬೆದರಿಕೆ ಹಾಕಿದೆ.
ಭಾರತದೊಂದಿಗಿನ ಸಂಘರ್ಷದ ಬಳಿಕ ಪಾಕಿಸ್ತಾನ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಎರಡನೇ ಬಾರಿಗೆ ಅಮೆರಿಕಾಕ್ಕೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಫ್ಲೋರಿಡಾದ ಟ್ಯಾಂಪಾದಲ್ಲಿ ಪಾಕಿಸ್ತಾನಿ ವಲಸೆಗಾರರನ್ನು ಉದ್ದೇಶಿಸಿ ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಮಾತನಾಡಿದ್ದು, ಈ ವೇಳೆ ಭಾರತಕ್ಕೆ ಗೊಡ್ಡು ಬೆದರಿಕೆ ಹಾಕಿದ್ದಾರೆ.
ಟ್ಯಾಂಪಾದಲ್ಲಿ ಪಾಕಿಸ್ತಾನದ ಗೌರವ ಕಾನ್ಸುಲ್ ಆಗಿ ಸೇವೆ ಸಲ್ಲಿಸುತ್ತಿರುವ ಉದ್ಯಮಿ ಅದ್ನಾನ್ ಅಸಾದ್ ಅವರಿಗೆ ಆಯೋಜಿಸಿದ್ದ ಬ್ಲ್ಯಾಕ್-ಟೈ ಭೋಜನಕೂಟದ ಸಂದರ್ಭದಲ್ಲಿ ಮುನೀರ್, ಪರಮಾಣು ಬೆದರಿಕೆಗಳನ್ನು ಹಾಕಿದ್ದಾರೆ. ಭಾರತ-ಪಾಕ್ ಸೇರಿದಂತೆ ಸಂಘರ್ಷಕ್ಕೆ ಒಳಗಾಗಿರುವ ಜಗತ್ತಿನ ಹಲವು ದೇಶಗಳ ನಡುವೆ ಶಾಂತಿ ಸ್ಥಾಪನೆ ಮಾಡುತ್ತೇನೆ ಎಂದು ಡೊನಾಲ್ಡ್ ಟ್ರಂಪ್ ಹೇಳುತ್ತಿರುವ ಬೆನ್ನಲ್ಲೇ ಮುನೀರ್ ಅಮೆರಿಕದ ನೆಲದಲ್ಲಿ ನಿಂತು ಭಾರತಕ್ಕೆ ಬೆದರಿಕೆ ಹಾಕಿರುವುದು ಗಮನಾರ್ಹ ಸಂಗತಿಯಾಗಿದೆ.
ನಮ್ಮದು ಪರಮಾಣು ಶಸ್ತ್ರಸಜ್ಜಿತ ದೇಶ. ನಮ್ಮ ಅಸ್ತಿತ್ವಕ್ಕೆ ಧಕ್ಕೆ ಉಂಟಾಗುತ್ತಿದೆ ಎಂದು ನಾವು ಭಾವಿಸಿದರೆ, ಅರ್ಧದಷ್ಟು ಪ್ರಪಂಚವನ್ನು ನಮ್ಮೊಂದಿಗೆ ತೆಗೆದುಕೊಳ್ಳುತ್ತೇವೆಂದು ಇಡೀ ವಿಶ್ವಕ್ಕೂ ಅಣುಬಾಂಬ್ ಪಾಕ್ ಸೇನಾ ಮುಖ್ಯಸ್ಥ ಬೆದರಿಕೆ ಹಾಕಿದ್ದಾರೆ.
ಇದೇ ವೇಳೆ ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸಿದ್ದಕ್ಕಾಗಿ ಭಾರತವನ್ನು ಗುರಿಯಾಗಿಸಿಕೊಂಡು ಮಾತನಾಡಿದ ಮುನೀರ್, ನದಿ ನೀರನ್ನು ತಡೆಹಿಡಿಯುವ ನಿರ್ಧಾರವು 250 ಮಿಲಿಯನ್ ಜನರನ್ನು ಹಸಿವಿನಿಂದ ಬಳಲಿಸಬಹುದು. ಭಾರತ ಅಣೆಕಟ್ಟು ನಿರ್ಮಿಸುವವರೆಗೆ ಕಾಯಿರಿ, ನಂತರ 10 ಕ್ಷಿಪಣಿಗಳಿಂದ ಅದನ್ನು ನಾಶಪಡಿಸುತ್ತೇವೆ. ಸಿಂಧೂ ನದಿ ಭಾರತೀಯರ ಕುಟುಂಬದ ಆಸ್ತಿಯಲ್ಲ. ಅಲ್ಹಮ್ದುಲಿಲ್ಲಾಹ್ ಎಂದು ಉಲ್ಲೇಖಿಸಿದ್ದು ನಮ್ಮಲ್ಲಿ ಕ್ಷಿಪಣಿಗಳ ಕೊರತೆಯಿಲ್ಲ ಎಂದು ಬೆದರಿಕೆ ಹಾಕಿದ್ದಾರೆ.
ಭಾರತ ಫೆರಾರಿಯಂತಹ ಹೆದ್ದಾರಿಯಲ್ಲಿ ಬರುವ ಮರ್ಸಿಡಿಸ್, ಪಾಕಿಸ್ತಾನ ಜಲ್ಲಿಕಲ್ಲುಗಳಿಂದ ತುಂಬಿದ ಡಂಪ್ ಟ್ರಕ್. ಟ್ರಕ್, ಕಾರಿಗೆ ಡಿಕ್ಕಿ ಹೊಡೆದರೆ ಯಾರು ಸೋಲುತ್ತಾರೆ ಎಂಬ ಉದಾಹರಣೆ ನೀಡಿ ಅಟ್ಟಹಾಸದ ಮಾತುಗಳನ್ನಾಡಿದ್ದಾರೆ.
ಮುನೀರ್ ಮಾತನಾಡಿದ ಕಾರ್ಯಕ್ರಮಕ್ಕೆ ಹಾಜರಾಗುವ ಅತಿಥಿಗಳು ಸೆಲ್ ಫೋನ್ ಅಥವಾ ಇತರ ಡಿಜಿಟಲ್ ಸಾಧನಗಳನ್ನು ಕೊಂಡೊಯ್ಯುವುದನ್ನು ನಿಷೇಧಿಸಲಾಗಿತ್ತು. ಹೀಗಾಗಿ ಭಾಷಣದ ಅಧಿಕೃತ ಪ್ರತಿಲಿಪಿಯನ್ನು ಬಿಡುಗಡೆಯಾಗಿಲ್ಲ. ಆಧರೆ, ಕಾರ್ಯಕ್ರಮದಲ್ಲಿ ಹಾಜರಿದ್ದವರು ನೀಡಿದ ಹೇಳಿಕೆಗಳ ಆಧಾರದ ಮೇಲೆ ದಿ ಪ್ರಿಂಟ್ ಈ ಕುರಿತು ವರದಿ ಮಾಡಿದೆ.
Advertisement