
ಮಾಸ್ಕೋ: ಭಾರತೀಯ ಕಂಪನಿಗಳಿಗೆ ಎಲ್ಲೆಲ್ಲಿ 'ಉತ್ತಮ ಒಪ್ಪಂದ' ನಡೆಯುತ್ತದೆಯೋ ಅಲ್ಲೆಲ್ಲ ತೈಲ ಖರೀದಿಯನ್ನು ಮುಂದುವರಿಸುತ್ತವೆ ಎಂದು ಹೇಳುವ ಮೂಲಕ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ರಷ್ಯಾದಲ್ಲಿನ ಭಾರತದ ರಾಯಭಾರಿ ಟಾಂಗ್ ನೀಡಿದ್ದಾರೆ.
ಭಾನುವಾರ ಪ್ರಕಟವಾದ ರಷ್ಯಾದ ಸರ್ಕಾರಿ ಸ್ವಾಮ್ಯದ TASS ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ರಷ್ಯಾದಲ್ಲಿನ ಭಾರತದ ರಾಯಭಾರಿ ವಿನಯ್ ಕುಮಾರ್ ಅವರು, ದೇಶದ 1.4 ಶತಕೋಟಿ ಜನರ ಇಂಧನ ಸುರಕ್ಷತೆಯನ್ನು ಖಚಿತಪಡಿಸುವುದು ಭಾರತದ ಆದ್ಯತೆಯಾಗಿದೆ ಎಂದು ಹೇಳಿದ್ದಾರೆ.
ಭಾರತವು ರಿಯಾಯಿತಿ ದರದಲ್ಲಿ ರಷ್ಯಾದ ಕಚ್ಚಾ ತೈಲವನ್ನು ಖರೀದಿಸಿದ್ದು, ಇದಕ್ಕೆ ಅಮೆರಿಕಾ ಟೀಕೆ ವ್ಯಕ್ತಪಡಿಸುತ್ತಿದೆ. ಇದರ ಬೆನ್ನಲ್ಲೇ ಈ ಟೀಕೆಯನ್ನು ಭಾರತ ಬಲವಾಗಿ ತಿರಸ್ಕರಿಸಿದೆ.
ವ್ಯಾಪಾರವು ‘ವಾಣಿಜ್ಯ ಆಧಾರದ ಮೇಲೆ’ ನಡೆಯುತ್ತದೆ ಎಂದು ಒತ್ತಿ ಹೇಳಿದ ವಿನಯ್ ಕುಮಾರ್ ಅವರು, ಭಾರತೀಯ ಕಂಪನಿಗಳು ಉತ್ತಮ ಒಪ್ಪಂದವನ್ನು ಪಡೆಯುವಲ್ಲೆಲ್ಲಾ ಖರೀದಿಯನ್ನು ಮುಂದುವರಿಸುತ್ತವೆ. ಆದ್ದರಿಂದ ಪ್ರಸ್ತುತ ಪರಿಸ್ಥಿತಿ ಹೀಗಿದೆ ಎಂದು ಹೇಳಿದ್ದಾರೆ.
ಆ ಮೂಲಕ ಭಾರತ ತನ್ನ 'ರಾಷ್ಟ್ರೀಯ ಹಿತಾಸಕ್ತಿ'ಯನ್ನು ರಕ್ಷಿಸುವ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ಮುಂದುವರಿಸುತ್ತದೆ ಎಂದು ಪ್ರತಿಪಾದಿಸಿದ್ದಾರೆ.
ಭಾರತದ 1.4 ಶತಕೋಟಿ ಜನರ ಇಂಧನ ಸುರಕ್ಷತೆ ನಮ್ಮ ಉದ್ದೇಶ ಎಂದು ನಾವು ಸ್ಪಷ್ಟವಾಗಿ ಹೇಳಿದ್ದೇವೆ. ಹಲವಾರು ಇತರ ದೇಶಗಳಂತೆ ರಷ್ಯಾದೊಂದಿಗಿನ ಭಾರತದ ಸಹಕಾರವು ತೈಲ ಮಾರುಕಟ್ಟೆಯಲ್ಲಿ, ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಸ್ಥಿರತೆಯನ್ನು ತರಲು ಸಹಾಯ ಮಾಡಿದೆ.
ವಾಷಿಂಗ್ಟನ್‌ನ ನಿರ್ಧಾರವನ್ನು ‘ಅನ್ಯಾಯ, ಅಸಮಂಜಸ ಮತ್ತು ನ್ಯಾಯಸಮ್ಮತವಲ್ಲ’ ಎಂದು ಕರೆದ ವಿನಯ್ ಕುಮಾರ್, ಭಾರತ ಸರ್ಕಾರ ‘ದೇಶದ ರಾಷ್ಟ್ರೀಯ ಹಿತಾಸಕ್ತಿಯನ್ನು ರಕ್ಷಿಸುವ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ಮುಂದುವರಿಸುತ್ತದೆ’ ಎಂದು ಹೇಳಿದರು.
ರಷ್ಯಾ ಸೇರಿದಂತೆ ತನ್ನ ಇಂಧನ ಖರೀದಿಯು ರಾಷ್ಟ್ರೀಯ ಹಿತಾಸಕ್ತಿ ಮತ್ತು ಮಾರುಕಟ್ಟೆ ಚಲನಶೀಲತೆಯಿಂದ ನಡೆಸಲ್ಪಡುತ್ತದೆ. ಭಾರತ ಮತ್ತು ರಷ್ಯಾ ನಡುವಿನ ವ್ಯಾಪಾರವು ಪರಸ್ಪರ ಹಿತಾಸಕ್ತಿಗಳು ಮತ್ತು ಮಾರುಕಟ್ಟೆ ಅಂಶಗಳನ್ನು ಆಧರಿಸಿದೆ, ಭಾರತದ 1.4 ಶತಕೋಟಿ ಜನರ ಇಂಧನ ಸುರಕ್ಷತೆಯನ್ನು ಖಾತರಿಪಡಿಸುವ ಒಟ್ಟಾರೆ ಉದ್ದೇಶದಿಂದ’ ಇದನ್ನು ಮಾಡಲಾಗುತ್ತದೆ. ಅಮೆರಿಕ ಸೇರಿದಂತೆ ಯುರೋಪ್‌ನಲ್ಲಿ ಇತರ ದೇಶಗಳು ರಷ್ಯಾದೊಂದಿಗೆ ವ್ಯಾಪಾರ ಮಾಡುತ್ತಿವೆ ಎಂದು ತಿಳಿಸಿದರು.
ಡೊನಾಲ್ಡ್ ಟ್ರಂಪ್ ಆಡಳಿತವು ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಶೇ.50ಕ್ಕೆ ದ್ವಿಗುಣಗೊಳಿಸಿದ ಹಿನ್ನೆಲೆಯಲ್ಲಿ ಈ ಹೇಳಿಕೆಗಳು ಬಂದಿವೆ, ಇದರಲ್ಲಿ ಭಾರತವು ರಷ್ಯಾದ ಕಚ್ಚಾ ತೈಲವನ್ನು ಖರೀದಿಸುವುದಕ್ಕೆ ಶೇ. 25 ರಷ್ಟು ಹೆಚ್ಚುವರಿ ಸುಂಕವೂ ಸೇರಿದೆ.
ಭಾರತವು ರಷ್ಯಾದ ಕಚ್ಚಾ ತೈಲವನ್ನು ಖರೀದಿಸುವುದರಿಂದ ಉಕ್ರೇನ್‌ನಲ್ಲಿ ರಷ್ಯಾದ ಯುದ್ಧಕ್ಕೆ ಹಣಕಾಸು ಒದಗಿಸಲಾಗುತ್ತಿದೆ ಎಂದು ಅಮೆರಿಕ ಆರೋಪಿಸಿದೆ, ಆದರೆ, ಭಾರತ ಈ ಆರೋಪವನ್ನು ಬಲವಾಗಿ ತಿರಸ್ಕರಿಸಿದೆ.
ಕಚ್ಚಾ ತೈಲ ವಿಷಯದಲ್ಲಿ ಭಾರತದ ವಿರುದ್ಧ ಅಮೆರಿಕದ ಟೀಕೆಯ ಕುರಿತ ಪ್ರಶ್ನೆಗೆ ಶನಿವಾರ ಪ್ರತಿಕ್ರಿಯಿಸಿದ್ದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು, ‘ವ್ಯಾಪಾರ ಪರ ಅಮೆರಿಕದ ಆಡಳಿತಕ್ಕಾಗಿ ಕೆಲಸ ಮಾಡುವ ಜನರು ಇತರ ದೇಶಗಳು ವ್ಯಾಪಾರ ಮಾಡುತ್ತಿದ್ದಾರೆ ಎಂದು ಆರೋಪಿಸುವುದು ತಮಾಷೆಯಾಗಿದೆ ಎಂದು ಹೇಳಿದ್ದರು.
‘ಭಾರತದಿಂದ ತೈಲ ಅಥವಾ ಸಂಸ್ಕರಿಸಿದ ಉತ್ಪನ್ನಗಳನ್ನು ಖರೀದಿಸುವಲ್ಲಿ ನಿಮಗೆ ಸಮಸ್ಯೆ ಇದ್ದರೆ, ಅದನ್ನು ಖರೀದಿಸಬೇಡಿ. ಯಾರೂ ನಿಮ್ಮನ್ನು ಅದನ್ನು ಖರೀದಿಸಲು ಒತ್ತಾಯಿಸುವುದಿಲ್ಲ ಎಂದು ಅಮೆರಿಕಾ ವಿರುದ್ಧ ಕಿಡಿಕಾರಿದ್ದರು.
Advertisement