
ನವದೆಹಲಿ: ಇರಾನ್ ಜೊತೆಗಿನ ಸಂಘರ್ಷ ತೀವ್ರವಾಗಿರುವಂತೆಯೇ ಇತ್ತ ಇಸ್ರೇಲ್ ಭಾರತದ ಬಳಿ ಇತಿಹಾದಲ್ಲೇ ಮೊದಲ ಬಾರಿಗೆ ಕ್ಷಮೆ ಕೋರಿದೆ.
ಇಸ್ರೇಲ್-ಇರಾನ್ ನಡುವಿನ ಸಂಘರ್ಷ ತೀವ್ರವಾಗಿದ್ದು, ಇಸ್ರೇಲ್ ಸೇನಾಪಡೆಗಳು ಈಗಾಗಲೇ ಇರಾನ್ ಸೇನಾ ಜನರಲ್ ಗಳನ್ನು ಅವರ ಅಪಾರ್ಟ್ ಮೆಂಟ್ ನೊಳಗೇ ನುಗ್ಗಿ ಹೊಡೆದ ಇಸ್ರೇಲ್ ಸೇನಾಪಡೆ ಇದೀಗ ಭಾರತದ ಬಳಿ ಕ್ಷಮೆ ಕೇಳಿದೆ.
ಹೌದು.. ಅಚ್ಚರಿಯಾದ್ರೂ ಇದು ಸತ್ಯ.. ಇದೇ ಮೊದಲ ಬಾರಿಗೆ ಇಸ್ರೇಲಿ ಸೇನಾ ಪಡೆಗಳು ಭಾರತದ ಕ್ಷಮೆ ಕೇಳಿವೆ. ತಾವು ಮಾಡಿದ ಟ್ವೀಟ್ ಎಡವಟ್ಟಿನ ಕಾರಣ ಇಸ್ರೇಲ್ ಇದೀಗ ಭಾರತದ ಬಳಿ ಕ್ಷಮೆ ಕೇಳುವಂತಾಗಿದೆ.
ಇಷ್ಟಕ್ಕೂ ಆಗಿದ್ದೇನು?
ಇಸ್ರೇಲ್ ರಕ್ಷಣಾ ಪಡೆಗಳು ಭಾರತದ ಅಂತಾರಾಷ್ಟ್ರೀಯ ಗಡಿಗಳ ತಪ್ಪಾದ ನಕ್ಷೆಯನ್ನು ಟ್ವೀಟ್ ಮಾಡಿದ್ದು, ಭಾರತದ ಜಮ್ಮು ಮತ್ತು ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಸೇರಿಸಿರುವ ತಪ್ಪಾದ ನಕ್ಷೆಯನ್ನು ಎಕ್ಸ್ ನಲ್ಲಿ ಪೋಸ್ಟ್ ಮಾಡಿತ್ತು.
ಈ ಪೋಸ್ಟ್ ಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಲೇ ಎಚ್ಚೆತ್ತ ಇಸ್ರೇಲ್ ಸೇನಾಪಡೆ ಈ ಕುರಿತು ಸ್ಪಷ್ಟನೆ ನೀಡಿ ಭಾರತದ ಬಳಿ ಕ್ಷಮೆ ಕೋರಿದೆ. ಐಡಿಎಫ್ ನಕ್ಷೆಯು "ಗಡಿಗಳನ್ನು ನಿಖರವಾಗಿ ಚಿತ್ರಿಸಲು ವಿಫಲವಾಗಿದೆ" ಎಂದು ಒಪ್ಪಿಕೊಂಡಿದ್ದು, ಆದರೆ ಅದು "ಪ್ರದೇಶದ ಚಿತ್ರಣ" ಮಾತ್ರ ಎಂದು ಹೇಳಿಕೊಂಡಿದೆ.
ವಿವಾದಾತ್ಮಕ ಪೋಸ್ಟ್
ಪ್ರಸ್ತುತ ಇರಾನ್ ಜೊತೆ ಸಂಘರ್ಷಕ್ಕಿಳಿದಿರುವ ಇಸ್ರೇಲ್ ಸೇನಾ ಪಡೆ ತನ್ನ ಸೇನಾ ಸಾಮರ್ಥ್ಯ ಹಾಗೂ ತನ್ನ ವಾಯುಗುರಿಗಳ ಸಾಮರ್ಥ್ಯವನ್ನು ಪ್ರದರ್ಶಿಸುವ ಒಂದು ಗ್ರಾಫಿಕ್ ಚಿತ್ರವನ್ನು ಅಪ್ಲೋಡ್ ಮಾಡಿತ್ತು. ಆ ಚಿತ್ರದಲ್ಲಿ ಇಸ್ರೇಲ್ ತನ್ನ 2 ಸಾವಿರ ಕಿ ಮೀ ವ್ಯಾಪ್ತಿಯೊಳಗೆ ಬರುವ ತನ್ನ ಶತ್ರು ರಾಷ್ಟ್ರಗಳ ಮೇಲೆ ಸೇನಾ ದಾಳಿ ಮಾಡುವ ಸಾಮರ್ಥ್ಯ ತನಗಿದೆ ಎಂಬುದನ್ನು ಬಿಂಬಿಸಲು ಆ ಪೋಸ್ಟ್ ಮಾಡಿತ್ತು.
ಈ ಪೋಸ್ಟ್ ನಲ್ಲಿ ಇಸ್ರೇಲ್ ವಾಯು ಅಸ್ತ್ರಗಳು ಈತ್ತ ಉಕ್ರೇನ್ ನಿಂದ ಅತ್ತ ಚೀನಾದವರೆಗಿನ ಎಲ್ಲ ದೇಶಗಳನ್ನು ವ್ಯಾಪಿಸುತ್ತದೆ ಎಂಬುದು ಇಸ್ರೇಲ್ ಸೇನಾ ಪಡೆಯ ಟ್ವೀಟ್ ನ ಉದ್ದೇಶವಾಗಿತ್ತು. ಆದರೆ ಇದೇ ಪೋಸ್ಟ್ ನಲ್ಲಿ ಭಾರತದ ಜಮ್ಮು ಮತ್ತು ಕಾಶ್ಮೀರವನ್ನು ಪಾಕಿಸ್ತಾನದ ನಕ್ಷೆಯೊಳಗೆ ಸೇರಿಸಿ ಟ್ವೀಟ್ ಮಾಡಿದೆ.
ವ್ಯಾಪಕ ವಿರೋಧ, ಸ್ಪಷ್ಟನೆ
ಇನ್ನು ಈ ವಿವಾದಾತ್ಮಕ ಟ್ವೀಟ್ ಗೆ ವಿರೋಧ ವ್ಯಕ್ತವಾಗುತ್ತಲೇ ಈ ಕುರಿತು ಇಸ್ರೇಲ್ ಸೇನಾಪಡೆಗಳು ಸ್ಪಷ್ಟನೆ ನೀಡಿವೆ. ಈ ಪೋಸ್ಟ್ ಆ ಪ್ರದೇಶದ ವಿವರಣೆ ಮಾತ್ರ ಆಗಿದ್ದು, ಈ ನಕ್ಷೆಯು ಗಡಿಗಳನ್ನು ನಿಖರವಾಗಿ ಚಿತ್ರಿಸುವಲ್ಲಿ ವಿಫಲವಾಗಿದೆ. ಈ ಚಿತ್ರದಿಂದ ಉಂಟಾದ ಯಾವುದೇ ಅಪರಾಧಕ್ಕಾಗಿ ನಾವು ಕ್ಷಮೆಯಾಚಿಸುತ್ತೇವೆ ಎಂದು IDF ಟ್ವೀಟ್ ಮಾಡಿದೆ.
ಇಸ್ರೇಲ್ ಗೆ ನೆಟ್ಟಿಗರ ತರಾಟೆ
ಇನ್ನು ಈ ಟ್ವೀಟ್ ಗೆ ಭಾರತದ ಟ್ವೀಟಿಗರು ತರಾಟೆಗೆ ತೆಗೆದುಕೊಂಡಿದ್ದು, ಇಸ್ರೇಲ್ ಭಾರತದ ಆಪ್ತ ರಾಷ್ಟ್ರವಾಗಿರಬಹುದು. ಆದರೆ ಇಂತಹ ದೋಷಪೂರಿತ ಟ್ವೀಟ್ ಗಳು ಸರಿಯಲ್ಲ. ಕನಿಷ್ಠ ತನ್ನ ಮಿತ್ರರಾಷ್ಟ್ರಗಳ ಗಡಿಗಳ ಕುರಿತು ಇಸ್ರೇಲ್ ಗೆ ನೆನಪಿರಬೇಕು. ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಇಂತಹ ಭಾವನಾತ್ಮ ವಿಚಾರಗಳ ಬಗ್ಗೆ ಇಸ್ರೇಲ್ ಎಚ್ಚರವಾಗಿರಬೇಕು ಎಂದು ಕಿಡಿಕಾರಿದ್ದಾರೆ.
ಅಂತೆಯೇ ಈ ಬಗ್ಗೆ ಕೇಂದ್ರ ಸರ್ಕಾರ ಕೂಡಲೇ ಗಮನ ಹರಿಸಿ ವಿವಾದಿತ ಪೋಸ್ಟ್ ತೆಗೆದು ಹಾಕುವಂತೆ ಕ್ರಮ ಕೈಗೊಳ್ಳಬೇಕು ಎಂದು ಹಲವರು ಒತ್ತಾಯಿಸಿದ್ದಾರೆ.
Advertisement