
ನವದೆಹಲಿ: ಭಾರತದ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ(DRDO) ಸ್ಥಳೀಯವಾಗಿ ಅಭಿವೃದ್ಧಿಪಡಿಸಿರುವ ಕಾವೇರಿ ಜೆಟ್ ಇಂಜಿನ್ ಪರೀಕ್ಷೆಯನ್ನು ರಷ್ಯಾದಲ್ಲಿ ನಡೆಸುತ್ತಿದೆ. ಭಾರತದ ಧೀರ್ಘ ಶ್ರೇಣಿಯ ಮಾನವ ರಹಿತ ಯುದ್ಧ ವಿಮಾನಗಳಿಗೆ ಶಕ್ತಿ ತುಂಬಲು ಈ ಎಂಜಿನ್ ಬಳಸಲು ಯೋಜಿಸುತ್ತಿದೆ. ಇದು ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಲು ಸಹಾಯ ಮಾಡುತ್ತದೆ.
ಸದ್ಯ ರಷ್ಯಾದಲ್ಲಿ ಕಾವೇರಿಯ ಇಂಜಿನ್ ಪರೀಕ್ಷೆ ನಡೆಯುತ್ತಿದೆ. ಅಲ್ಲಿ ಸುಮಾರು 25 ಗಂಟೆಗಳ ಪರೀಕ್ಷೆ ಬಾಕಿಯಿದೆ. ಪರೀಕ್ಷೆಯ ವೇಳಾಪಟ್ಟಿಯನ್ನು ಅಲ್ಲಿನ ಅಧಿಕಾರಿಗಳು ನೀಡಬೇಕು ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿರುವುದಾಗಿ ಸುದ್ದಿಸಂಸ್ಥೆ ಎಎನ್ ಐ ವರದಿ ಮಾಡಿದೆ.
ಸ್ವದೇಶಿ ನಿರ್ಮಿತ ಮಾನವ ರಹಿತ ಯುದ್ಧ ವಿಮಾನ ಯೋಜನೆಗಳಿಗೆ ( UCAV)ಶಕ್ತಿ ನೀಡಲು ಕಾವೇರಿ ಜೆಟ್ ಇಂಜಿನ್ ಸಿದ್ಧವಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಟ್ರೆಂಡ್ ಆಯ್ತು #FundKaveri engine project:
ಈ ಯೋಜನೆಗಾಗಿ ಸರ್ಕಾರದಿಂದ ಅನುದಾನ ಕೇಳಿ ಸಾಮಾಜಿಕ ಮಾಧ್ಯಮಗಳಲ್ಲಿ #FundKaveri engine project ಟ್ರೆಂಡ್ ಆದ ನಂತರ ಕಾವೇರಿ ಇಂಜಿನ್ ಬಗ್ಗೆ ಜನರು ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ.
ಸ್ಥಳೀಯ ಲಘು ಯುದ್ಧ ವಿಮಾನ ತೇಜಸ್ ಗೆ ಶಕ್ತಿ ತುಂಬುವ ಉದ್ದೇಶದಿಂದ ಕಾವೇರಿ ಎಂಜಿನ್ ಅಭಿವೃದ್ಧಿಪಡಿಸಲು DRDO ಯೋಜಿಸಿತ್ತು. ಆದರೆ ಇದರ ವಿಳಂಬದಿಂದಾಗಿ ಯುದ್ಧ ವಿಮಾನಗಳಿಗೆ ಅಮೇರಿಕದ GE-404 ಇಂಜಿನ್ ಬಳಸಲಾಗುತಿತ್ತು.
83 LCA ಮಾರ್ಕ್ 1A ಯುದ್ಧ ವಿಮಾನಗಳಿಗೂ GE-404s ಇಂಜಿನ್ ಬಳಸಲು ಯೋಜಿಸಲಾಗಿತ್ತು. ಆದರೆ ಅಮೇರಿಕದ ಸಂಸ್ಥೆಯಿಂದ ಪೂರೈಕೆಯಲ್ಲಿನ ಸಮಸ್ಯೆಗಳಿಂದಾಗಿ ಈ ಯೋಜನೆಯೂ ವಿಳಂಬವಾಗಿದೆ.
ಹೀಗಾಗಿ ಕಾವೇರಿ ಜೆಟ್ ಇಂಜಿನ್ ಮೇಕ್ ಇನ್ ಇಂಡಿಯಾ, ಮೇಡ್ ಇನ್ ಇಂಡಿಯಾದ ಫೈಟರ್ ಜೆಟ್ ಇಂಜಿನ್ ಆಗಿದ್ದು, ಇದರ ಪರೀಕ್ಷೆ ಯಶಸ್ವಿಯಾದರೆ ಯುದ್ಧ ವಿಮಾನಗಳನ್ನು ನಿರ್ಮಿಸಲು ವಿದೇಶಿ ಇಂಜಿನ್‌ಗಳ ಮೇಲಿನ ಭಾರತದ ಅವಲಂಭನೆಯನ್ನು ತಗ್ಗಿಸಲಿದೆ. ಅದಲ್ಲದೇ ವಿಶ್ವದಲ್ಲೇ ಬಲಿಷ್ಠ ರಕ್ಷಣಾ ತಂತ್ರಜ್ಞಾನವನ್ನು ಹೊಂದಿದ ರಾಷ್ಟಗಳ ಪಟ್ಟಿಗೆ ಭಾರತ ಸೇರಲಿದೆ.
ಅದಕ್ಕಾಗಿ ರಕ್ಷಣಾ ತಜ್ಞರು ಕಾವೇರಿ ಇಂಜಿನ್ ಯೋಜನೆಗೆ ಹೆಚ್ಚಿನ ಅನುದಾನ ನೀಡಿ, ಅದಕ್ಕೆ ವೇಗ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.
Advertisement