ಜಾಗತಿಕ ಅಭಿಯಾನದಲ್ಲಿ ಭಾರತ ಮಹತ್ವದ ಯಶಸ್ಸು, ಪಾಕ್ ಪರ ನೀಡಿದ್ದ ಸಂತಾಪ ಹೇಳಿಕೆ ಹಿಂಪಡೆದ ಕೊಲಂಬಿಯಾ; Video

ಬೊಗೋಟಾ ಭೇಟಿಯ ಸಂದರ್ಭದಲ್ಲಿ ಅಮೆರಿಕಾಕ್ಕೆ ಸರ್ವಪಕ್ಷ ನಿಯೋಗದ ನೇತೃತ್ವ ವಹಿಸಿರುವ ಕಾಂಗ್ರೆಸ್ ಸಂಸದ ಶಶಿ ತರೂರ್, ಗುರುವಾರ ಪತ್ರಿಕಾಗೋಷ್ಠಿಯಲ್ಲಿ ದಕ್ಷಿಣ ಅಮೆರಿಕಾದ ದೇಶದ ನಿಲುವಿನ ಬಗ್ಗೆ ನಿರಾಶೆ ವ್ಯಕ್ತಪಡಿಸಿದ್ದರು.
ಕೊಲಂಬಿಯಾದಲ್ಲಿ ಶಶಿ ತರೂರ್.
ಕೊಲಂಬಿಯಾದಲ್ಲಿ ಶಶಿ ತರೂರ್.
Updated on

ಬೊಗೋಟಾ (ಕೊಲಂಬಿಯಾ): ಉಗ್ರ ಪೋಷಕ ರಾಷ್ಟ್ರ ಪಾಕಿಸ್ತಾನದ ಮುಖವಾಡ ಬಯಲು ಮಾಡಲು ಮತ್ತು ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆಯನ್ನು ವ್ಯಕ್ತಪಡಿಸಲು ಜಾಗತಿಕವಾಗಿ ಶ್ರಮಿಸುತ್ತಿರುವ ಭಾರತಕ್ಕೆ ಗಮನಾರ್ಹ ಯಶಸ್ಸು ಸಿಕ್ಕಿದೆ.

ಈ ಹಿಂದೆ ಜೀವಹಾನಿಯ ಬಗ್ಗೆ ಪಾಕಿಸ್ತಾನಕ್ಕೆ ಸಹಾನುಭೂತಿ ವ್ಯಕ್ತಪಡಿಸಿದ್ದ ಕೊಲಂಬಿಯಾ ಈಗ ತನ್ನ ಹೇಳಿಕೆಯನ್ನು ಹಿಂತೆಗೆದುಕೊಂಡಿದೆ.

ಅಮೆರಿಕಾಕ್ಕೆ ಸರ್ವಪಕ್ಷ ನಿಯೋಗದ ನೇತೃತ್ವ ವಹಿಸಿರುವ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು, ಗುರುವಾರ ಬೊಗೋಟಾಗೆ ಭೇಟಿ ನೀಡಿದ್ದು, ಈ ವೇಳೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ದಕ್ಷಿಣ ಅಮೆರಿಕಾದ ದೇಶದ ನಿಲುವಿನ ಬಗ್ಗೆ ನಿರಾಶೆ ವ್ಯಕ್ತಪಡಿಸಿದ್ದರು.

ಭಯೋತ್ಪಾದಕರನ್ನು ಕಳುಹಿಸುವವರು ಮತ್ತು ತಮ್ಮನ್ನು ತಾವು ರಕ್ಷಿಸಿಕೊಳ್ಳುವವರ ನಡುವೆ ಸಮಾನತೆಯಾಗಲು ಸಾಧ್ಯವಿಲ್ಲ ಎಂದಿರುವ ತರೂರ್, ಭಾರತೀಯ ದಾಳಿಯ ಅನಂತರ ಪಾಕಿಸ್ತಾನದಲ್ಲಿ ಆದ ಜೀವಹಾನಿಗೆ ಸಂತಾಪ ಸೂಚಿಸಿರುವ ಕೊಲಂಬಿಯಾ ಸರ್ಕಾರದ ಪ್ರತಿಕ್ರಿಯೆಯಿಂದ ನಾವು ಸ್ವಲ್ಪ ನಿರಾಶೆಗೊಂಡಿದ್ದೇವೆ. ಇದರ ಬದಲು ಭಯೋತ್ಪಾದನೆಗೆ ಬಲಿಯಾದವರ ಬಗ್ಗೆ ಸಹಾನುಭೂತಿ ತೋರಿಸಬೇಕಿತ್ತು ಎಂದು ಹೇಳಿದ್ದರು.

ಕಾಶ್ಮೀರದ ಪಹಲ್ಗಾಮ್ ನ ಬೈಸರನ್ ಕಣಿವೆಯಲ್ಲಿ ಏಪ್ರಿಲ್ 22ರಂದು ನಡೆದ ಭಯೋತ್ಪಾದಕ ದಾಳಿಯಲ್ಲಿ 6 ನಾಗರಿಕರನ್ನು ಹತ್ಯೆಯ ಹಿಂದೆ ಪಾಕಿಸ್ತಾನ ಪೋಷಿಸುತ್ತಿರುವ ಭಯೋತ್ಪಾದಕರ ಕೈವಾಡವಿದೆ ಎಂಬುದಕ್ಕೆ ದೃಢವಾದ ಪುರಾವೆಗಳಿವೆ. ನಾವು ನಮ್ಮ ಆತ್ಮರಕ್ಷಣೆಯ ಹಕ್ಕನ್ನು ಮಾತ್ರ ಚಲಾಯಿಸುತ್ತಿದ್ದೇವೆ. ಇಲ್ಲಿ ಯಾವುದೇ ತಪ್ಪು ತಿಳುವಳಿಕೆ ಇದ್ದರೆ ಈ ಮೂಲದಲ್ಲಿ ಅಂತಹ ಯಾವುದೇ ತಪ್ಪು ತಿಳುವಳಿಕೆಯನ್ನು ಹೋಗಲಾಡಿಸಲು ನಾವು ಇಲ್ಲಿದ್ದೇವೆ.

ಈ ಕುರಿತು ಕೊಲಂಬಿಯಾದೊಂದಿಗೆ ವಿವರವಾಗಿ ಮಾತನಾಡಲು ನಮಗೆ ತುಂಬಾ ಸಂತೋಷವಾಗಿದೆ. ಕೊಲಂಬಿಯಾ ಅನೇಕ ಭಯೋತ್ಪಾದಕ ದಾಳಿಗಳನ್ನು ಸಹಿಸಿಕೊಂಡಿರುವಂತೆಯೇ ಭಾರತದಲ್ಲೂ ಸಹ ನಾವು ಸಹಿಸಿಕೊಂಡಿದ್ದೇವೆ. ಸುಮಾರು ನಾಲ್ಕು ದಶಕಗಳಿಂದ ಬಹಳ ದೊಡ್ಡ ಸಂಖ್ಯೆಯ ದಾಳಿಗಳನ್ನು ನಾವು ಸಹಿಸಿಕೊಂಡಿದ್ದೇವೆ ಎಂದು ತಿಳಿಸಿದ್ದರು.

ಭಾರತದ ನಿಯೋಗದೊಂದಿಗೆ ಮಾತುಕತೆ ನಡೆಸಿದ ಬಳಿಕ ಕೊಲಂಬಿಯಾದ ವಿದೇಶಾಂಗ ವ್ಯವಹಾರಗಳ ಉಪ ಸಚಿವೆ ರೋಸಾ ಯೋಲಾಂಡಾ ವಿಲ್ಲಾವಿಸೆನ್ಸಿಯೊ ಅವರು, ಪಾಕಿಸ್ತಾನ ಕುರಿತು ನೀಡಿದ್ದ ಸಂತಾಪದ ಹೇಳಿಕೆಯನ್ನು ವಾಪಸ್ ತೆಗೆದುಕೊಂಡಿದ್ದಾರೆ. ನಮಗೆ ಸಿಕ್ಕ ಮಾಹಿತಿ ಮತ್ತು ನೈಜ ಪರಿಸ್ಥಿತಿ, ಸಂಘರ್ಷ ಮತ್ತು ಕಾಶ್ಮೀರದಲ್ಲಿ ಏನಾಯಿತು ಎಂಬುದರ ಕುರಿತು ನಮಗಿರುವ ಮಾಹಿತಿಯ ಬಗ್ಗೆ ನಮಗೆ ತುಂಬಾ ವಿಶ್ವಾಸವಿದೆ, ನಾವು ಈ ಮಾತುಕತೆಯನ್ನು ಮುಂದುವರಿಸಬಹುದು ಎಂದು ಹೇಳಿದ್ದಾರೆಂದು ಶಶಿ ತರೂರ್ ಅವರು ಹೇಳಿದ್ದಾರೆ.

ಕೊಲಂಬಿಯಾದಲ್ಲಿ ಶಶಿ ತರೂರ್.
Little disappointed: ಆಪರೇಷನ್ ಸಿಂಧೂರ್‌ ಬಗ್ಗೆ ಕೊಲಂಬಿಯಾ ನಿಲುವಿಗೆ ತರೂರ್ ಬೇಸರ!

ಭಾರತದ ದೃಷ್ಟಿಕೋನ ಮತ್ತು ನಿಲುವನ್ನು ವಿವರಿಸಿದ ನಂತರ, ಕೊಲಂಬಿಯಾ ತನ್ನ ಹೇಳಿಕೆಯನ್ನು ಹಿಂತೆಗೆದುಕೊಂಡಿದೆ. ನಮ್ಮ ನಿಲುವನ್ನು ಅವರು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದಾರೆ, ಇದು ನಾವು ನಿಜವಾಗಿಯೂ ಗೌರವಿಸುವ ವಿಷಯ. ತಮ್ಮ ಹೇಳಿಕೆಯನ್ನು ಹಿಂತೆಗೆದುಕೊಂಡ ಅವರು, ನಮ್ಮ ನಿಲುವನ್ನು ಈಗ ಸರಿಯಾಗಿ ಅರ್ಥಮಾಡಿಕೊಂಡಿದ್ದೇವೆ ಮತ್ತು ಬಲವಾಗಿ ಬೆಂಬಲಿಸುತ್ತೇವೆಂದು ಭರವಸೆ ನೀಡಿದರು ಎಂದು ತರೂರ್ ಟ್ವೀಟ್ ಮಾಡಿದ್ದಾರೆ.

ತರೂರ್ ಅಮೆರಿಕಾಕ್ಕೆ ಬಹುಪಕ್ಷೀಯ ನಿಯೋಗವನ್ನು ಮುನ್ನಡೆಸುತ್ತಿದ್ದಾರೆ. ಪನಾಮ ಮತ್ತು ಗಯಾನಾಗೆ ಭೇಟಿ ನೀಡಿದ ನಂತರ, ಭಯೋತ್ಪಾದನೆಯ ವಿರುದ್ಧ ಭಾರತದ ಶೂನ್ಯ ಸಹಿಷ್ಣುತೆಯನ್ನು ತಿಳಿಸಲು ಭಾರತದ ಜಾಗತಿಕ ಸಂಪರ್ಕದ ಪ್ರಯತ್ನದಲ್ಲಿ ತರೂರ್ ಮತ್ತು ಅವರ ನಿಯೋಗ ಗುರುವಾರ ಕೊಲಂಬಿಯಾಕ್ಕೆ ಭೇಟಿ ನೀಡಿಜೆ. ಕೊಲಂಬಿಯಾ ಭೇಟಿ ಬಳಿಕ ಶನಿವಾರ ಸರ್ವಪಕ್ಷ ನಿಯೋಗ ಬ್ರೆಜಿಲ್ ಮತ್ತು ಅಮೆರಿಕಾಕ್ಕೆ ತೆರಳಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com