
ವಾಷಿಂಗ್ಟನ್: ಕಾಶ್ಮೀರದ ಪಹಲ್ಗಾಮ್ (Pahalgam Terror attack) ನಲ್ಲಿ ನಡೆದ ಉಗ್ರದಾಳಿಗೆ ಪ್ರತಿಯಾಗಿ ಭಾರತ ನಡೆಸಿದ್ದ ಆಪರೇಷನ್ ಸಿಂಧೂರ್ ಸೇನಾ ಕಾರ್ಯಾಚರಣೆ ವೇಳೆ ಪಾಕಿಸ್ತಾನಕ್ಕೆ ನೆರವು ನೀಡಿದ್ದ ಅಜರ್ಬೈಜಾನ್ ದೇಶಕ್ಕೆ ಭಾರತ ಮರ್ಮಾಘಾತ ನೀಡಿದೆ.
ಹೌದು.. ಇಷ್ಟು ದಿನ ಶಾಂಘೈ ಸಹಕಾರ ಸಂಸ್ಥೆಯಲ್ಲಿ (SCO) ಪೂರ್ಣ ಸದಸ್ಯತ್ವದ ಕನಸು ಕಾಣುತ್ತಿದ್ದ ಅಜರ್ಬೈಜಾನ್ ಗೆ ಕೊನೆಯ ಕ್ಷಣದಲ್ಲಿ ಭಾರತ ಶಾಕ್ ನೀಡಿದ್ದು, SCOಯ ಪೂರ್ಣ ಸದಸ್ಯತ್ವಕ್ಕಾಗಿ ಅಜರ್ಬೈಜಾನ್ ಸಲ್ಲಿಸಿದ್ದ ಅರ್ಜಿಯನ್ನು "ಮತ್ತೊಮ್ಮೆ" ಭಾರತ ನಿರ್ಬಂಧಿಸಿದೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಸ್ವತಃ ಅಜರ್ಬೈಜಾನ್ ಕಿಡಿಕಾರಿದ್ದು, 'ಪಾಕಿಸ್ತಾನದೊಂದಿಗೆ ತನಗಿರುವ ನಿಕಟ ಸಂಬಂಧದಿಂದಾಗಿ ಭಾರತವು ಜಾಗತಿಕ ವೇದಿಕೆಗಳಲ್ಲಿ ಅಜರ್ಬೈಜಾನ್ ವಿರುದ್ಧ "ಸೇಡು ತೀರಿಸಿಕೊಳ್ಳಲು" ಪ್ರಯತ್ನಿಸುತ್ತಿದೆ' ಎಂದು ಅಜೆರ್ಬೈಜಾನ್ ಆರೋಪಿಸಿದೆ.
ಮಾಧ್ಯಮಗಳಲ್ಲಿ ಟೀಕೆ
ಶಾಂಘೈ ಸಹಕಾರ ಸಂಸ್ಥೆಯಲ್ಲಿ (SCO) ಪೂರ್ಣ ಸದಸ್ಯತ್ವಕ್ಕಾಗಿ ಬಾಕು ಮಾಡಿದ ಪ್ರಯತ್ನವನ್ನು ಭಾರತ ನಿರ್ಬಂಧಿಸಿದೆ. ಅಜೆರ್ಬೈಜಾನ್‌ನ ಮಹತ್ವಾಕಾಂಕ್ಷೆಯನ್ನು ತಡೆಯುವ ಮೂಲಕ ಭಾರತವು "ಬಹುಪಕ್ಷೀಯ ರಾಜತಾಂತ್ರಿಕತೆ"ಯ ತತ್ವಗಳನ್ನು ಉಲ್ಲಂಘಿಸಿದೆ ಎಂದು ಅಜೆರ್ಬೈಜಾನ್ ಮಾಧ್ಯಮಗಳು ಆರೋಪಿಸಿದೆ.
ಅಜೆರ್ಬೈಜಾನಿ ಟಿವಿ ಪ್ರಸಾರಕರಾದ ಅನೆವ್‌ಝಡ್, ಭಾರತವು SCOಯ ಪೂರ್ಣ ಸದಸ್ಯತ್ವಕ್ಕಾಗಿ ಅಜರ್ಬೈಜಾನ್ ಸಲ್ಲಿಸಿದ ಅರ್ಜಿಯನ್ನು "ಮತ್ತೊಮ್ಮೆ" ನಿರ್ಬಂಧಿಸಿದೆ ಎಂದು ವರದಿ ಮಾಡಿದೆ.
"ಶಾಂಘೈ ಸಹಕಾರ ಸಂಸ್ಥೆಯಲ್ಲಿ ಪೂರ್ಣ ಸದಸ್ಯತ್ವಕ್ಕಾಗಿ ಅಜೆರ್ಬೈಜಾನ್‌ನ ಅರ್ಜಿಯನ್ನು ಭಾರತ ಮತ್ತೊಮ್ಮೆ ನಿರ್ಬಂಧಿಸಿದೆ. ಆದರೆ ಅರ್ಮೇನಿಯಾದೊಂದಿಗಿನ ರಾಜತಾಂತ್ರಿಕ ಸಂಬಂಧಗಳನ್ನು ಪರಿಗಣಿಸುವ ಪಾಕಿಸ್ತಾನದ ಇತ್ತೀಚಿನ ನಿರ್ಧಾರವನ್ನು ಅಜೆರ್ಬೈಜಾನ್‌ನ ಶಾಂತಿ ಕಾರ್ಯಸೂಚಿಯ ಭಾಗವಾಗಿ ಬಾಕು ಜೊತೆ ಸಂಯೋಜಿಸಲಾಗಿದೆ" ಎಂದು ಅನೆವ್‌ಝಡ್ ವರದಿ ಮಾಡಿದೆ.
ಆಪರೇಷನ್ ಸಿಂಧೂರ ವೇಳೆ ಪಾಕಿಸ್ತಾನಕ್ಕೆ ಅಜರ್ಬೈಜಾನ್ ಬೆಂಬಲ
ಇನ್ನು ಭಾರತದ ಈ ನಡೆಗೆ ಆಪರೇಷನ್ ಸಿಂಧೂರ್ ಸಮಯದಲ್ಲಿ ಪಾಕಿಸ್ತಾನಕ್ಕೆ ಬಾಕು ನೀಡಿದ ಬೆಂಬಲವೇ ಕಾರಣ ಎಂದು ಬಾಕು ಮಾಧ್ಯಮಗಳು ವರದಿ ಮಾಡಿವೆ. ಇದಕ್ಕೆ ಇಂಬು ನೀಡುಂತೆ ಈ ವರ್ಷದ ಆರಂಭದಲ್ಲಿ ಚೀನಾದ ಟಿಯಾಂಜಿನ್ ನಗರದಲ್ಲಿ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರೊಂದಿಗಿನ ಸಭೆಯಲ್ಲಿ ಅಜೆರ್ಬೈಜಾನ್ ಅಧ್ಯಕ್ಷ ಇಲ್ಹಾಮ್ ಅಲಿಯೆವ್, ಮಿಲಿಟರಿ ಸಂಘರ್ಷದ ಸಮಯದಲ್ಲಿ ಭಾರತದ ವಿರುದ್ಧ ಪಾಕಿಸ್ತಾನದ ವಿಜಯಕ್ಕಾಗಿ ಇಸ್ಲಾಮಾಬಾದ್ ಅನ್ನು ಅಭಿನಂದಿಸಿದ್ದರು. ಈ ಕುರಿತು ಫೋಟೋಗಳು ವೈರಲ್ ಆಗಿದ್ದವು.
ಭಾರತ ತಂತ್ರಕ್ಕೆ ಜಗ್ಗಲ್ಲ.. ಪಾಕಿಸ್ತಾನಕ್ಕೇ ನಮ್ಮ ಬೆಂಬಲ ಎಂದ ಬಾಕು
ಇದೇ ವೇಳೆ ಜಾಗತಿಕ ವೇದಿಕೆಗಳಲ್ಲಿ ಭಾರತದ ಕ್ರಮಗಳ ಹೊರತಾಗಿಯೂ, ಅಜರ್ಬೈಜಾನ್ ಪಾಕಿಸ್ತಾನ ದೊಂದಿಗಿನ "ಸಹೋದರತ್ವ"ಕ್ಕೆ ಆದ್ಯತೆ ನೀಡುತ್ತದೆ ಎಂದು ಟರ್ಕಿಶ್ ದಿನಪತ್ರಿಕೆ ಡೈಲಿ ಸಬಾ ವರದಿ ಮಾಡಿದೆ.
ಪಾಕಿಸ್ತಾನದೊಂದಿಗಿನ ಅಜೆರ್ಬೈಜಾನ್‌ನ ಸಂಬಂಧವು ನಿಕಟ ರಾಜಕೀಯ, ಸಾಂಸ್ಕೃತಿಕ ಮತ್ತು ಕಾರ್ಯತಂತ್ರದ ಸಂಬಂಧಗಳಲ್ಲಿ ಬೇರೂರಿದೆ ಎಂದು ಅಜರ್ಬೈಜಾನ್ ಅಧ್ಯಕ್ಷ ಇಲ್ಹಾಮ್ ಅಲಿಯೆವ್ (Ilham Aliyev) ಹೇಳಿದ್ದಾರೆ. ಅಜೆರ್ಬೈಜಾನಿ-ಪಾಕಿಸ್ತಾನ ಅಂತರ ಸರ್ಕಾರಿ ಆಯೋಗದೊಳಗೆ ವ್ಯಾಪಾರ ಮತ್ತು ಆರ್ಥಿಕ ಸಹಕಾರವನ್ನು ವಿಸ್ತರಿಸುವ ಬಗ್ಗೆಯೂ ಅವರು ಪಾಕ್ ಪ್ರಧಾನಿ ಶಹಬಾಜ್ ಷರೀಫ್ ಅವರೊಂದಿಗೆ ಚರ್ಚಿಸಿದ್ದಾರೆ ಎಂದು ವರದಿ ತಿಳಿಸಿದೆ.
ಅಂದಹಾಗೆ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಯೋತ್ಪಾದಕ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡು ಭಾರತದ ಮಿಲಿಟರಿ ಪ್ರತಿಕ್ರಿಯೆಯಾದ ಆಪರೇಷನ್ ಸಿಂದೂರ್ ಸಮಯದಲ್ಲಿ ಅಜೆರ್ಬೈಜಾನ್ ಪಾಕಿಸ್ತಾನಕ್ಕೆ ಬಹಿರಂಗವಾಗಿ ಬೆಂಬಲ ನೀಡಿತ್ತು.
Advertisement