
ಬೀಜಿಂಗ್: ಚೀನಾದಲ್ಲಿ ಅದ್ಧೂರಿಯಾಗಿ ನಡೆದ ಎರಡನೇ ಮಹಾಯುದ್ಧದ ವಿಕ್ಟರಿ ಪರೇಡ್ ನಲ್ಲಿ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಪಾಲ್ಗೊಂಡಿದ್ದು ಈ ಕಾರ್ಯಕ್ರಮದ ಬಳಿಕ ಉತ್ತರ ಕೊರಿಯಾ ಸಿಬ್ಬಂದಿ ಸರ್ವಾಧಿಕಾರಿ ಮುಟ್ಟಿದ್ದ ಎಲ್ಲ ವಸ್ತುಗಳನ್ನೂ ಸ್ವಚ್ಛಗೊಳಿಸಿದ ವಿಲಕ್ಷಣ ಘಟನೆ ವರದಿಯಾಗಿದೆ.
ಹೌದು.. ಎರಡನೇ ಮಹಾಯುದ್ಧದ ವಿಕ್ಟರಿ ಪರೇಡ್ ಕಾರ್ಯಕ್ರಮದಲ್ಲಿ ಚೀನಾ ಅಧ್ಯಕ್ಷ ಕ್ಷಿ ಜಿನ್‌ಪಿಂಗ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಾಗೂ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಶಕ್ತಿ ಪ್ರದರ್ಶನ ನಡೆಸಿದ್ದರು. ಈ ವೇಳೆ ಪುಟಿನ್ ಮತ್ತು ಕಿಮ್ ನಡುವೆ ಮಾತುಕತೆ ನಡೆಯಿತು. ಆದರೆ ಈ ಕಾರ್ಯಕ್ರಮದ ಬಳಿಕ ಬೀಜಿಂಗ್‌ನಲ್ಲಿ ದೊಡ್ಡ ಹೈಡ್ರಾಮಾ ನಡೆದಿದ್ದು, ಪುಟಿನ್ ಭೇಟಿ ಬಳಿಕ ಕಿಮ್ ಜಾಂಗ್ ಉನ್ ಬೆವರನ್ನು ಬಿಡದೇ ಸಾಕ್ಷಿಯನ್ನು ಸಿಬ್ಬಂದಿ ಅಳಿಸಿಹಾಕಿದ್ದಾರೆ. ಇದರ ವಿಡಿಯೋ ಈಗ ಭಾರೀ ವೈರಲ್ ಆಗಿದೆ.
ಬೀಜಿಂಗ್‌ನಲ್ಲಿ ಪುಟಿನ್ ಜೊತೆಗಿನ ದ್ವಿಪಕ್ಷೀಯ ಸಭೆಯ ಬಳಿಕ ಕಿಮ್ ಜಾಂಗ್-ಉನ್ ಅವರ ಭದ್ರತಾ ತಂಡ ಇಡೀ ಪ್ರದೇಶವನ್ನು ಸ್ವಚ್ಛಗೊಳಿಸಿದ್ದು, ಕಿಮ್ ಕುಡಿದ ಟೀ ಕಪ್, ಕುಳಿತ ಕುರ್ಚಿ, ಸ್ಪರ್ಶಿಸಿದ ಎಲ್ಲಾ ವಸ್ತುಗಳನ್ನು ಸ್ವಚ್ಛಗೊಳಿಸಿದೆ. ಸಭೆ ಬಳಿಕ ಕಿಮ್ ಜಾಂಗ್ ಉನ್ ಅವರು ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾದ ನಂತರ, ಅವರು ಮುಟ್ಟಿದ ಪ್ರತಿಯೊಂದು ವಸ್ತುವನ್ನು ಉತ್ತರ ಕೊರಿಯಾದ ಸಿಬ್ಬಂದಿ ತರಾತುರಿಯಲ್ಲಿ ಸ್ವಚ್ಛಗೊಳಿಸಿ, ಸ್ಯಾನಿಟೈಸ್ ಮಾಡಿರುವುದು ಗಮನ ಸೆಳೆದಿದೆ.
ವಿಡಿಯೋ ವೈರಲ್
ಟೆಲಿಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾದ ವಿಡಿಯೋದಲ್ಲಿ ಸಭೆ ಮುಗಿದ ತಕ್ಷಣ ಕಿಮ್ ಅವರ ಇಬ್ಬರು ಸಹಾಯಕರು ತರಾತುರಿಯಲ್ಲಿ ಆ ಸ್ಥಳವನ್ನು ಸ್ವಚ್ಛಗೊಳಿಸಿದ್ದು ಕಂಡುಬಂತು. ಓರ್ವ ಸಿಬ್ಬಂದಿ ಕಿಮ್ ಕುಳಿತಿದ್ದ ಕುರ್ಚಿಯ ಹಿಂಭಾಗವನ್ನು ಎಚ್ಚರಿಕೆಯಿಂದ ಪಾಲಿಶ್ ಮಾಡಿದರೆ, ಇನ್ನೊಬ್ಬರು ಅವರು ಕುಡಿದ ನೀರಿನ ಗ್ಲಾಸ್ ಅನ್ನು ಒಬ್ಬ ಪೊಲೀಸ್ ತನಿಖಾಧಿಕಾರಿಯಂತೆ ಟ್ರೇನಲ್ಲಿ ಹೊತ್ತೊಯ್ದರು.
ಕುರ್ಚಿಯ ಎಲ್ಲ ಭಾಗಗಳು, ಕಿಮ್ ಜಾಂಗ್ ಉನ್ ಓಡಾಡಿದ ಹೊದಿಕೆ, ಪಕ್ಕದ ಟೇಬಲ್ ಅನ್ನು ಕೂಡ ಒರೆಸಿ ಸ್ವಚ್ಛಗೊಳಿಸಿದರು. ಈ ಮೂಲಕ ಉತ್ತರ ಕೊರಿಯಾದ ನಾಯಕನ ಉಪಸ್ಥಿತಿಯ ಯಾವುದೇ ಕುರುಹು ಇಲ್ಲದಂತೆ ಒರೆಸಲಾಯಿತು. ಈ ಕುರಿತ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ಕಾರಣ ನಿಗೂಢ!
ಉತ್ತರ ಕೊರಿಯಾದ ಭದ್ರತಾ ಸಿಬ್ಬಂದಿ ಯಾವ ಕಾರಣಕ್ಕೆ ಸರ್ವಾಧಿಕಾರಿ ಮುಟ್ಟಿದ ವಸ್ತುಗಳನ್ನು ಸಚ್ಛಗೊಳಿಸಿದರು ಎಂಬುದಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಆದರೆ ಗೂಢಚಾರಿಕೆ ಮತ್ತು ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ರ ಡಿಎನ್‌ಎ ಸಂಗ್ರಹಣೆಯನ್ನು ತಡೆಗಟ್ಟಲು ಮತ್ತು ಭದ್ರತೆಯನ್ನು ಖಚಿತಪಡಿಸಲು ಈ ರೀತಿ ಸ್ವಚ್ಛಗೊಳಿಸಿರಬಹುದು ಎನ್ನಲಾಗುತ್ತಿದೆ. ಈ ಮೂಲಕ ಮೂಲಕ ಗೂಢಾಚಾರಿ ಚಟುವಟಿಕೆಗಳನ್ನು ತಡೆಗಟ್ಟಲು ಸಾಧ್ಯವಾದ ಎಲ್ಲ ಕ್ರಮಗಳನ್ನು ತೆಗೆದುಕೊಂಡಿರುವ ಸಾಧ್ಯತೆಯಿದೆ. ಈ ಘಟನೆಯು ಅಂತರರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.
ಮಲ ಸಂಗ್ರಹಿಸಿದ್ದ ಪುಟಿನ್ ಭದ್ರತಾ ಸಿಬ್ಬಂದಿ
ಇನ್ನು ಜಾಗತಿಕ ವೇದಿಕೆಗಳಲ್ಲಿ ಗಣ್ಯರು ಪಾಲ್ಗೊಂಡಿದ್ದಾಗ ಅವರ ಭದ್ರತೆ ಕುರಿತು ಸಾಕಷ್ಟು ಜಾಗ್ರತೆ ವಹಿಸಲಾಗುತ್ತದೆ. ಕಿಮ್ ಜಾಂಗ್ ಉನ್ ರೀತಿಯಲ್ಲೇ ಈ ಹಿಂದೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅಮೆರಿಕದ ಅಲಸ್ಕಾಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರ ಮಲ ಸಂಗ್ರಹಣೆ ಮಾಡಲಾಗಿತ್ತು. ಈ ಸುದ್ದಿ ಜಗತ್ತಿನಾದ್ಯಂತ ಭಾರಿ ಸುದ್ದಿಗೆ ಗ್ರಾಸವಾಗಿತ್ತು.
ಪುಟಿನ್ ಅವರು ವಿದೇಶ ಪ್ರವಾಸ ಕೈಗೊಂಡಾಗ ವರ ಅಂಗರಕ್ಷಕರು ಅವರ ಮೂತ್ರ ಮತ್ತು ಮಲವನ್ನು ಮುಚ್ಚಿದ ಚೀಲಗಳಲ್ಲಿ ಸಂಗ್ರಹಿಸಿ, ನಂತರ ಅವುಗಳನ್ನು ವಿಶೇಷ ಸೂಟ್‌ಕೇಸ್‌ಗಳಲ್ಲಿ ಮಾಸ್ಕೋಗೆ ತೆಗೆದುಕೊಂಡು ಹೋಗುತ್ತಾರೆ ಎಂದು ವರದಿಗಳು ಪ್ರಸಾರವಾಗಿತ್ತು. ರಷ್ಯಾದ ಅಧ್ಯಕ್ಷರ ಆರೋಗ್ಯದ ಬಗ್ಗೆ ವಿರೋಧಿಗಳು ಮತ್ತು ಗುಪ್ತಚರ ಮಾಹಿತಿಯನ್ನು ಸಂಗ್ರಹಿಸುವುದನ್ನು ತಡೆಯಲು 2017 ರಿಂದ ಈ ಪದ್ದತಿಯನ್ನು ಜಾರಿಗೊಳಿಸಲಾಗಿದೆ ಎಂದು ಹೇಳಲಾಗಿದೆ.
Advertisement