
ವಾಷಿಂಗ್ಟನ್: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ವರ್ತನೆ ನಿರಾಶೆ ತಂದಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಂಗಳವಾರ ಹೇಳಿದ್ದಾರೆ.
ರೇಡಿಯೋ ಸಂದರ್ಶನವೊಂದರಲ್ಲಿ ಮಾತನಾಡಿರುವ ಟ್ರಂಪ್ ಅವರು, ಅಲಾಸ್ಕಾದಲ್ಲಿ ನಡೆದ ಶೃಂಗಸಭೆಯ ನಂತರ ಉಕ್ರೇನ್ ಜೊತೆಗಿನ ಶಾಂತಿ ಒಪ್ಪಂದ ಕುರಿತು ಪುಟಿನ್ ನಿರ್ಧಾರ ಕೈಗೊಳ್ಳದಿರುವುದು ನಿರಾಶೆ ತರಿಸಿದೆ ಎಂದು ಹೇಳಿದ್ದಾರೆ.
ಉಕ್ರೇನ್ ಕುರಿತ ನಿರ್ಧಾರ ಕೈಗೊಳ್ಳದೆ ಪುಟಿನ್ ದ್ರೋಹ ಮಾಡಿದ್ದಾರಾ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ನಮ್ಮ ಹಾಗೂ ರಷ್ಯಾ ನಡುವೆ ಉತ್ತಮ ಸಂಬಂಧವಿತ್ತು. ಆದರೆ, ಇದೀಗ ನಿರಾಶೆಗೊಂಡಿದ್ದೇನೆಂದು ತಿಳಿಸಿದ್ದಾರೆ.
ಶಾಂತಿ ಒಪ್ಪಂದಕ್ಕಾಗಿ 2 ವಾರಗಳ ಗಡುವು ನಿಗದಿಪಡಿಸಿದ್ದರೂ ರಷ್ಯಾ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಇದರಿಂದ ನಿರಾಶೆಗೊಂಡಿದ್ದೇನೆಂದು ಹೇಳಿದ್ದಾರೆ. ಆದರೆ, ರಷ್ಯಾ ಯಾವ ರೀತಿಯ ಪರಿಣಾಮ ಎದುರಿಸಲಿದೆ ಎಂಬುದರ ಕುರಿತು ಟ್ರಂಪ್ ಸ್ಪಷ್ಟಪಡಿಸಿಲ್ಲ.
ಇದೇ ವೇಳೆ ರಷ್ಯಾ ಹಾಗೂ ಚೀನಾ ನಡುವಿನ ಸಂಬಂಧದ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿರುವ ಅವರು, ನಮ್ಮಲ್ಲಿ ವಿಶ್ವದಲ್ಲೇ ಅತ್ಯಂತ ಬಲಿಷ್ಠ ಸೇನೆ ಇದೆ. ನಮ್ಮ ಮೇಲೆ ದಾಳಿ ಮಾಡಲು ಸಾಧ್ಯವಿಲ್ಲ. ಆ ರೀತಿ ಮಾಡಿದರೂ ಅದೊಂದು ಕೆಟ್ಟ ನಿರ್ಧಾರವಾಗಲಿ ಎಂದು ತಿಳಿಸಿದ್ದಾರೆ.
Advertisement