
ವಾಷಿಂಗ್ಟನ್: ಭಾರತ ಹಾಗೂ ಅಮೆರಿಕಾ ನಡುವೆ ಹೆಚ್1ಬಿ ವೀಸಾ ಶುಲ್ಕ ಹೆಚ್ಚಳ ಹಾಗೂ ತೆರಿಗೆ ವಿವಾದ ಮುಂದುವರೆದಿದ್ದು, ಈ ನಡುವಲ್ಲೇ ಭಾರತದ ಸಂಬಂಧ ಅಮೆರಿಕಕ್ಕೆ ನಿರ್ಣಾಯಕವಾಗಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರು ಅಭಿಪ್ರಾಯಪಟ್ಟಿದ್ದಾರೆ.
ನ್ಯೂಯಾರ್ಕ್‌ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 80ನೇ ಉನ್ನತ ಮಟ್ಟದ ಅಧಿವೇಶನದ ಸಂದರ್ಭದಲ್ಲಿ ವಿದೇಶಾಂಗ ಸಚಿವ (ಇಎಎಂ) ಎಸ್ ಜೈಶಂಕರ್ ಅವರನ್ನು ಭೇಟಿಯಾದ ನಂತರ ರುಬಿಯೊ ಅವರು ಈ ಹೇಳಿಕೆಯನ್ನು ನೀಡಿದ್ದಾರೆ.
ಭಾರತದ ಸಂಬಂಧ ಅಮೆರಿಕಕ್ಕೆ ನಿರ್ಣಾಯಕವಾಗಿದೆ ಎಂದು ಹೇಳಿರುವ ಮಾರ್ಕೊ ರುಬಿಯೊ ಅವರು, ವ್ಯಾಪಾರ, ರಕ್ಷಣೆ, ಇಂಧನ, ಔಷಧಗಳು, ಪ್ರಮುಖ ಖನಿಜಗಳು ಮತ್ತು ದ್ವಿಪಕ್ಷೀಯ ಸಂಬಂಧ ಸೇರಿದಂತೆ ಹಲವು ವಿಷಯಗಳಲ್ಲಿ ಭಾರತ ಸರ್ಕಾರದ ನಿರಂತರ ಪಾಲ್ಗೊಳ್ಳುವಿಕೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕ್ವಾಡ್ ಮೂಲಕವೂ ಸೇರಿದಂತೆ ಇಂಡೋ-ಪೆಸಿಫಿಕ್ ಪ್ರದೇಶವನ್ನು ಉತ್ತೇಜಿಸಲು ಅಮೆರಿಕ ಮತ್ತು ಭಾರತ ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತವೆ ಎಂದು ರುಬಿಯೊ ಮತ್ತು ಜೈಶಂಕರ್ ಒಪ್ಪಿಕೊಂಡಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಜೈಶಂಕರ್, ‘ದ್ವಿಪಕ್ಷೀಯ ಮತ್ತು ಅಂತರರಾಷ್ಟ್ರೀಯ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದ್ದೇವೆ. ಆದ್ಯತೆಯ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಲು ನಿರಂತರ ಸಂಪರ್ಕದಲ್ಲಿರುತ್ತೇವೆ’ ಎಂದು ಬರೆದುಕೊಂಡಿದ್ದಾರೆ.
Advertisement