

ದುಬೈ: ಇರಾನ್‌ನ ತೈಲ ರಫ್ತಿನ ಮೇಲಿನ ಆರ್ಥಿಕ ಮತ್ತು ಮಿಲಿಟರಿ ಒತ್ತಡಗಳು ಕೊನೆಗೊಂಡರೆ ಮಾತ್ರ ಜಾಗತಿಕ ಇಂಧನ ಬೆಲೆಗಳು ಸ್ಥಿರಗೊಳ್ಳಬಹುದು ಎಂದು ಇರಾನ್‌ನ ಮೊದಲ ಉಪಾಧ್ಯಕ್ಷ ಮೊಹಮ್ಮದ್ ರೆಜಾ ಅರೆಫ್ ಹೇಳಿದ್ದಾರೆ.
'ನಮ್ಮ ತೈಲ ರಫ್ತನ್ನು ನಿರ್ಬಂಧಿಸುವುದಕ್ಕೆ ಪ್ರತಿಯಾಗಿ ಜಾಗತಿಕ ವ್ಯಾಪಾರಕ್ಕೆ ಸುರಕ್ಷಿತ ಮತ್ತು ಸುಭದ್ರ ಮಾರ್ಗವನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ ಎಂದು ನಿರೀಕ್ಷಿಸಬೇಡಿ. ಆಯ್ಕೆ ಸ್ಪಷ್ಟವಾಗಿದೆ: ಎಲ್ಲರಿಗೂ ಸುರಕ್ಷಿತ ತೈಲ ಮಾರುಕಟ್ಟೆ, ಅಥವಾ ಎಲ್ಲರಿಗೂ ಗಮನಾರ್ಹ ವೆಚ್ಚಗಳ ಅಪಾಯ' ಎಂದು ಅರೆಫ್ ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ಬರೆದಿದ್ದಾರೆ.
ಇರಾನ್ ಮತ್ತು ಅಮೆರಿಕ ನಡುವಿನ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಜಾಗತಿಕ ಇಂಧನ ಪೂರೈಕೆಗೆ ನಿರ್ಣಾಯಕವಾದ ಪರ್ಷಿಯನ್ ಕೊಲ್ಲಿ ಜಲಮಾರ್ಗವಾದ ಹಾರ್ಮುಜ್ ಜಲಸಂಧಿಯಲ್ಲಿ ತೈಲ ಟ್ಯಾಂಕರ್‌ಗಳು ತೆರಳದಂತೆ ನಿರ್ಬಂಧ ವಿಧಿಸಲಾಗಿರುವುದರಿಂದ ಭಾನುವಾರದ ಆರಂಭಿಕ ವಹಿವಾಟಿನಲ್ಲಿ ತೈಲ ಬೆಲೆಗಳು ಏರಿಕೆಯಾದವು.
ಚಿಕಾಗೋ ಮರ್ಕೆಂಟೈಲ್ ಎಕ್ಸ್‌ಚೇಂಜ್‌ನಲ್ಲಿ ವಹಿವಾಟು ಪುನರಾರಂಭವಾದ ನಂತರ ಅಮೆರಿಕದ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ ಶೇ 6.4ರಷ್ಟು ಏರಿಕೆಯಾಗಿ 87.88 ಡಾಲರ್‌ಗಳಿಗೆ ತಲುಪಿದೆ. ಬ್ರೆಂಟ್ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ ಶೇ 6.5ರಷ್ಟು ಏರಿಕೆಯಾಗಿ 96.25 ಡಾಲರ್‌ಗಳಿಗೆ ತಲುಪಿದೆ.
ಹಾರ್ಮುಜ್ ಜಲಸಂಧಿಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ಇರಾನ್, ಶುಕ್ರವಾರ ತನ್ನ ಕರಾವಳಿಯ ಆಚೆಗಿನ ಮಾರ್ಗವನ್ನು ವಾಣಿಜ್ಯ ಸಂಚಾರಕ್ಕೆ ಸಂಪೂರ್ಣವಾಗಿ ತೆರೆಯುವುದಾಗಿ ಹೇಳಿತ್ತು. ಈ ಸುದ್ದಿಯ ನಂತರ ಕಚ್ಚಾ ತೈಲ ಬೆಲೆಗಳು ಶೇ 9ಕ್ಕಿಂತ ಹೆಚ್ಚು ಕುಸಿದವು.
ಇರಾನ್‌ನ ಬಂದರುಗಳ ಮೇಲಿನ ಅಮೆರಿಕದ ನೌಕಾಪಡೆಯ ದಿಗ್ಬಂಧನ ಜಾರಿಯಲ್ಲಿರುತ್ತದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ ನಂತರ, ಟೆಹ್ರಾನ್ ಶನಿವಾರ ತನ್ನ ನಿರ್ಧಾರವನ್ನು ಹಿಂತೆಗೆದುಕೊಂಡಿತು.
ಇದೀಗ ಎಂಟನೇ ವಾರಕ್ಕೆ ಕಾಲಿಟ್ಟಿರುವ ಇರಾನ್ ಮೇಲಿನ ಅಮೆರಿಕ-ಇಸ್ರೇಲ್ ಯುದ್ಧವು ದಶಕಗಳಲ್ಲಿಯೇ ಅತ್ಯಂತ ಕೆಟ್ಟ ಜಾಗತಿಕ ಇಂಧನ ಬಿಕ್ಕಟ್ಟನ್ನು ಸೃಷ್ಟಿಸಿದೆ.
ಮಧ್ಯಪ್ರಾಚ್ಯದಿಂದ ಹೆಚ್ಚಿನ ತೈಲವನ್ನು ಆಮದು ಮಾಡಿಕೊಳ್ಳುವ ಏಷ್ಯಾ ಮತ್ತು ಯುರೋಪ್ ದೇಶಗಳು ಸ್ಥಗಿತಗೊಂಡ ಸರಬರಾಜು ಮತ್ತು ಉತ್ಪಾದನಾ ಕಡಿತದ ಹೆಚ್ಚಿನ ಪರಿಣಾಮವನ್ನು ಅನುಭವಿಸಿವೆ. ವೇಗವಾಗಿ ಏರುತ್ತಿರುವ ಪೆಟ್ರೋಲ್, ಡೀಸೆಲ್ ಮತ್ತು ಜೆಟ್ ಇಂಧನ ಬೆಲೆಗಳು ವಿಶ್ವದಾದ್ಯಂತ ವ್ಯವಹಾರಗಳು ಮತ್ತು ಗ್ರಾಹಕರ ಮೇಲೆ ಪರಿಣಾಮ ಬೀರುತ್ತಿವೆ.
Advertisement