

ವಿಶ್ವದ ಅತ್ಯಂತ ಪ್ರಮುಖ ಕಡಲ ಮಾರ್ಗವಾದ ಹeರ್ಮುಜ್ ಜಲಸಂಧಿಯ (Strait of Hormuz) ಮುಕ್ತ ಸಂಚಾರದ ವಿಚಾರವಾಗಿ ಅಮೆರಿಕ (US) ಮತ್ತು ಇರಾನ್ ನಡುವಿನ ರಾಜತಾಂತ್ರಿಕ ಹಾಗೂ ಮಿಲಿಟರಿ ಸಂಘರ್ಷ ತಾರಕಕ್ಕೇರಿದೆ.
"ಜಲಸಂಧಿಯ ಮೂಲಕ ಸಾಗುವ ಹಡಗುಗಳಿಗೆ ಯಾವುದೇ ದೇಶದ ಅನುಮತಿ ಅಥವಾ ಶುಲ್ಕದ ಅಗತ್ಯವಿಲ್ಲ" ಎಂದು ಅಮೆರಿಕ ಸ್ಪಷ್ಟಪಡಿಸಿದ್ದರೆ, ಇದಕ್ಕೆ ಇರಾನ್ ತೀವ್ರ ಆಕ್ಷೇಪ ವ್ಯಕ್ತಪಡಿಸಿ ತಿರುಗೇಟು ನೀಡಿದೆ.
ಅಮೆರಿಕದ ಅಧಿಕಾರಿಯೊಬ್ಬರು ಅಲ್ ಜಜೀರಾಗೆ ನೀಡಿದ ಮಾಹಿತಿಯ ಪ್ರಕಾರ, ಹeರ್ಮುಜ್ ಜಲಸಂಧಿಯಲ್ಲಿ ತಾತ್ಕಾಲಿಕವಾಗಿ ರೂಪಿಸಲಾಗುವ ಯಾವುದೇ ಸಾಗಣೆ ಮಾರ್ಗಗಳಿಗೆ ಅನುಮತಿ, ಎನ್‌ಒಸಿ ಅಥವಾ ಶುಲ್ಕದ ಅಗತ್ಯವಿರುವುದಿಲ್ಲ. ಈ ಜಲಸಂಧಿಯ ಮೇಲಿನ ಸಂಪೂರ್ಣ ನಿಯಂತ್ರಣ ಯಾವುದೇ ಒಂದು ದೇಶಕ್ಕಿಲ್ಲ. ಹೀಗಾಗಿ ಯಾವ ಹಡಗು ಸಂಚರಿಸಬೇಕು ಅಥವಾ ಸಂಚರಿಸಬಾರದು ಎಂದು ನಿರ್ಧರಿಸುವ ಅಧಿಕಾರವೂ ಯಾರಿಗೂ ಇಲ್ಲ ಎಂದು ಅವರು ಹೇಳಿದ್ದಾರೆ.
ಈ ಹೇಳಿಕೆ ಹೊರಬಿದ್ದ ಬೆನ್ನಲ್ಲೇ ಇರಾನ್ ಸರ್ಕಾರ ಅಮೆರಿಕ ಹೇಳಿಕೆಯನ್ನು ತಳ್ಳಿಹಾಕಿದೆ. ಇರಾನ್‌ನ ಪರಮೋಚ್ಚ ನಾಯಕನ ಹಿರಿಯ ಸೇನಾ ಸಲಹೆಗಾರ ಮೊಹ್ಸೆನ್ ರೆಜಾಯಿ ಮಾತನಾಡಿ, ಟೆಹ್ರಾನ್ ಅನುಮೋದಿಸದ ಯಾವುದೇ ಸಾಗಣೆ ಮಾರ್ಗವನ್ನು ಇರಾನ್ ಒಪ್ಪುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇರಾನ್‌ನ ಸರ್ಕಾರಿ ಮಾಧ್ಯಮ ಪ್ರೆಸ್ ಟಿವಿ ವರದಿ ಪ್ರಕಾರ, ಅಮೆರಿಕ ಈ ಹಿಂದೆ ಮಾಡಿಕೊಂಡಿದ್ದ ಒಪ್ಪಂದವನ್ನು ಉಲ್ಲಂಘಿಸಿ, ಇರಾನ್ ಮೇಲೆ ದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ ಇರಾನ್ ಸೇನಾ ಕ್ರಮ ಕೈಗೊಂಡಿದ್ದು, ಅನಧಿಕೃತ ಮಾರ್ಗ ಬಳಸುವ ಅಮೆರಿಕದ ಯುದ್ಧನೌಕೆಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಟ್ರಂಪ್, ಹಾರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ಪುನಃ ತೆರೆಯುವ ಕುರಿತು ಮಾತುಕತೆ ನಡೆಯುತ್ತಿದೆ ಎಂದು ಹೇಳಿದ್ದರು.
ಮೊದಲ ಹಂತದಲ್ಲಿ ವಾಣಿಜ್ಯ ಹಡಗುಗಳ ಸಾಮಾನ್ಯ ಸಂಚಾರವನ್ನು ಪುನಃ ಆರಂಭಿಸುವುದು, ನಂತರದ ಹಂತದಲ್ಲಿ ಇರಾನ್‌ನ ಅಣು ಕಾರ್ಯಕ್ರಮದ ಕುರಿತು ಮಾತುಕತೆ ನಡೆಸುವುದು ಯೋಜನೆಯಾಗಿದೆ ಎಂದು ತಿಳಿಸಿದ್ದರು.
ಇದಲ್ಲದೆ, ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್, ಕತಾರ್ ಹಾಗೂ ಇರಾನ್‌ನ ಮನವಿಯ ಮೇರೆಗೆ ಇರಾನ್ ಮೇಲಿನ ಯೋಜಿತ ಸೇನಾ ದಾಳಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ರಾಜತಾಂತ್ರಿಕ ಪ್ರಯತ್ನಗಳಿಗೆ ಅವಕಾಶ ನೀಡಲಾಗಿದೆ ಎಂದು ಹೇಳಿದ್ದರು.
ಅಮೆರಿಕದೊಂದಿಗೆ ಮಾತುಕತೆ ಇಲ್ಲ: ಇರಾನ್ ಸ್ಪಷ್ಟನೆ
ಇದಕ್ಕೆ ಪ್ರತಿಕ್ರಿಯಿಸಿದ ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮಾಯಿಲ್ ಬಘಾಯಿ, ಅಮೆರಿಕದೊಂದಿಗೆ ನೇರವಾಗಲಿ ಅಥವಾ ಪರೋಕ್ಷವಾಗಲಿ ಯಾವುದೇ ಮಾತುಕತೆ ನಡೆಯುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮಧ್ಯಸ್ಥಿಕೆಯಲ್ಲಿ ಪ್ರಗತಿ: ಕತಾರ್
ಏತನ್ಮಧ್ಯೆ ಅಮೆರಿಕ ಮತ್ತು ಇರಾನ್ ಪರಸ್ಪರ ವಿರುದ್ಧ ಹೇಳಿಕೆ ನೀಡುತ್ತಿರುವ ನಡುವೆಯೇ, ಕತಾರ್ ಮಾತುಕತೆಯಲ್ಲಿ ಪ್ರಗತಿ ಸಾಧಿಸಲಾಗುತ್ತಿದೆ ಎಂದು ತಿಳಿಸಿದೆ.
ಕತಾರ್ ವಿದೇಶಾಂಗ ಸಚಿವಾಲಯದ ವಕ್ತಾರ ಮಾಜಿದ್ ಅಲ್ ಅನ್ಸಾರಿ ಮಾತನಾಡಿ, ವಿವಿಧ ಪಕ್ಷಗಳ ನಡುವೆ ಕರಡು ಒಪ್ಪಂದಗಳ ಕುರಿತು ಚರ್ಚೆಗಳು ಮುಂದುವರಿದಿದ್ದು, ರಾಜತಾಂತ್ರಿಕ ಪರಿಹಾರದತ್ತ ಪ್ರಯತ್ನಗಳು ಸಾಗುತ್ತಿವೆ ಎಂದು ಹೇಳಿದ್ದಾರೆ.
ಜೊತೆಗೆ, ಮಧ್ಯಸ್ಥಿಕೆ ವಹಿಸುತ್ತಿರುವ ಒಮಾನ್‌ನ ಪಾತ್ರಕ್ಕೆ ಕತಾರ್ ಸಂಪೂರ್ಣ ಬೆಂಬಲ ನೀಡುತ್ತಿದೆ ಎಂದೂ ತಿಳಿಸಿದ್ದಾರೆ.
ಹಾರ್ಮುಜ್ ತೆರೆಯಲು ಇರಾನ್ ಷರತ್ತು
ಇರಾನ್ ಮೂಲಗಳ ಪ್ರಕಾರ, ಕೇವಲ ಒಮಾನ್ ಮೂಲಕ ನಡೆಯುವ ಮಾತುಕತೆಯಿಂದ ಜಲಸಂಧಿ ಪುನಃ ತೆರೆಯುವುದಿಲ್ಲ ಎಂದು ತಿಳಿಸಿದೆ.
ಅಮೆರಿಕ ಇರಾನ್ ವಿರುದ್ಧದ ಸೇನಾ ಕ್ರಮಗಳನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಹಾಗೂ ಟೆಹ್ರಾನ್ ಮುಂದಿಟ್ಟಿರುವ ಷರತ್ತುಗಳನ್ನು ಒಪ್ಪಿಕೊಂಡ ನಂತರವೇ ಹಾರ್ಮುಜ್ ಜಲಸಂಧಿಯ ಸ್ಥಿತಿ ಹಿಂದಿನಂತಾಗಲಿದೆ ಎಂದು ಇರಾನ್ ಮಾತುಕತೆ ತಂಡದ ಮೂಲಗಳು ತಿಳಿಸಿವೆ.
ಇದರ ನಡುವೆಯೇ, ಇರಾನ್ ವಿರುದ್ಧದ ಸಂಘರ್ಷದಲ್ಲಿ ಅಮೆರಿಕ ತನ್ನ ಥಾಡ್ (THAAD) ಮತ್ತು ಪೇಟ್ರಿಯಟ್ (Patriot) ಕ್ಷಿಪಣಿ ತಡೆ ವ್ಯವಸ್ಥೆಯ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಬಳಸಿರುವುದಾಗಿ ವರದಿಯಾಗಿದೆ.
ಕೆಲವು ವಾಯು ರಕ್ಷಣಾ ವ್ಯವಸ್ಥೆಗಳ ಸಂಗ್ರಹ ಕಡಿಮೆಯಾಗಿದೆ ಎಂದು ಅಮೆರಿಕದ ಸೇನಾ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿರುವುದಾಗಿ ವರದಿಗಳು ತಿಳಿಸಿವೆ. ಆದರೆ, ಶ್ವೇತಭವನ ಈ ವರದಿಯನ್ನು ತಳ್ಳಿಹಾಕಿದ್ದು, ಅಧ್ಯಕ್ಷ ಟ್ರಂಪ್ ಅವರ ಎಲ್ಲಾ ಕಾರ್ಯತಂತ್ರದ ಗುರಿಗಳನ್ನು ಸಾಧಿಸಲು ಸಾಕಷ್ಟು ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳ ಸಂಗ್ರಹ ಅಮೆರಿಕದ ಬಳಿ ಇದೆ ಎಂದು ಸ್ಪಷ್ಟಪಡಿಸಿದೆ.
ಇರಾನ್ ಮತ್ತು ಒಮಾನ್ ನಡುವಿರುವ ಹಾರ್ಮುಜ್ ಜಲಸಂಧಿ ವಿಶ್ವದ ತೈಲ ಮತ್ತು ಅನಿಲ ಸಾಗಣೆಯ ಅತ್ಯಂತ ಪ್ರಮುಖ ಸಮುದ್ರ ಮಾರ್ಗವಾಗಿದೆ. ಈ ಮಾರ್ಗದಲ್ಲಿ ಯಾವುದೇ ಅಡ್ಡಿ ಉಂಟಾದರೆ ಜಾಗತಿಕ ತೈಲ ಹಾಗೂ ಅನಿಲ ಮಾರುಕಟ್ಟೆಗಳ ಮೇಲೆ ಅದರ ನೇರ ಪರಿಣಾಮ ಬೀಳುವ ಸಾಧ್ಯತೆ ಇದೆ.