

ಟರ್ಕಿ, ಸೌದಿ ಅರೇಬಿಯಾ ಮತ್ತು ಪಾಕಿಸ್ತಾನ ನಡುವೆ ಹೊಸ ರಕ್ಷಣಾ ಒಪ್ಪಂದಕ್ಕೆ ಸಹಿ ಬೀಳುವ ಸಾಧ್ಯತೆಗಳ ವರದಿಗಳು ಹೊರಬಿದ್ದ ಬೆನ್ನಲ್ಲೇ ಜಾಗತಿಕ ರಾಜಕೀಯ ವಲಯದಲ್ಲಿ 'Islamic NATO' ಕುರಿತು ಊಹಾಪೋಹಗಳು ಮತ್ತೆ ತೀವ್ರಗೊಂಡಿವೆ.
ಮೂರು ಮುಸ್ಲಿಂ ರಾಷ್ಟ್ರಗಳು ಭದ್ರತೆ ಮತ್ತು ರಕ್ಷಣಾ ಸಹಕಾರವನ್ನು ಮತ್ತಷ್ಟು ಬಲಪಡಿಸುವತ್ತ ಹೆಜ್ಜೆ ಇಡುತ್ತಿರುವುದು ಮಧ್ಯಪ್ರಾಚ್ಯ ಮತ್ತು ದಕ್ಷಿಣ ಏಷ್ಯಾದ ಕಾರ್ಯತಂತ್ರದ ಸಮೀಕರಣದಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗಬಹುದೇ ಎಂಬ ಚರ್ಚೆ ಶುರುವಾಗಿದೆ. ಆದರೆ, ಈ ತ್ರಿಪಕ್ಷೀಯ ರಕ್ಷಣಾ ಒಪ್ಪಂದದ ಬಗ್ಗೆ ಯಾವುದೇ ರಾಷ್ಟ್ರವೂ ಇನ್ನೂ ಅಧಿಕೃತ ಘೋಷಣೆ ಮಾಡಿಲ್ಲ.
ರಾಯಿಟರ್ಸ್ ವರದಿಯ ಪ್ರಕಾರ, ಈ ಮೂರು ರಾಷ್ಟ್ರಗಳು ಶುಕ್ರವಾರ ಸೌದಿ ಅರೇಬಿಯಾದಲ್ಲಿ ರಕ್ಷಣಾ ಸಹಕಾರಕ್ಕೆ ಸಂಬಂಧಿಸಿದ ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆಯಿದೆ ಎಂದು ಪ್ರಾದೇಶಿಕ ಮೂಲಗಳನ್ನು ಉಲ್ಲೇಖಿಸಿ ತಿಳಿಸಲಾಗಿದೆ.
ಈ ಬೆಳವಣಿಗೆಗೆ ಮುನ್ನವೇ ಪಾಕಿಸ್ತಾನ ತನ್ನ ಈಗಿನ ಸೌದಿ ಅರೇಬಿಯಾದೊಂದಿಗಿನ ರಕ್ಷಣಾ ಸಹಕಾರವನ್ನು ಮತ್ತಷ್ಟು ವಿಸ್ತರಿಸಲು ಪ್ರಯತ್ನಿಸುತ್ತಿತ್ತು. ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್, ಇಸ್ಲಾಮಾಬಾದ್ ಮತ್ತು ರಿಯಾದ್ ನಡುವಿನ ಈಗಿನ ರಕ್ಷಣಾ ಹಾಗೂ ಆರ್ಥಿಕ ಸಹಕಾರದ ಚೌಕಟ್ಟಿಗೆ ಮುಂದಿನ ದಿನಗಳಲ್ಲಿ ಟರ್ಕಿ ಮತ್ತು ಕತಾರ್ ಕೂಡ ಸೇರ್ಪಡೆಯಾಗುವ ಸಾಧ್ಯತೆ ಇದೆ ಎಂದು ಈ ಹಿಂದೆ ಹೇಳಿದ್ದರು.
ಮೇ ತಿಂಗಳಲ್ಲಿ ಪಾಕಿಸ್ತಾನದ ಹಮ್ ನ್ಯೂಸ್ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ಆಸಿಫ್, ಈ ಸಂಬಂಧದ ಮಾತುಕತೆಗಳು ವಿವಿಧ ಹಂತಗಳಲ್ಲಿ ನಡೆಯುತ್ತಿದ್ದು, ಭವಿಷ್ಯದ ಪ್ರಾದೇಶಿಕ ಸಹಕಾರಕ್ಕೆ ಇದು ಪ್ರಮುಖ ಹೆಜ್ಜೆಯಾಗಲಿದೆ ಎಂದು ತಿಳಿಸಿದ್ದರು.
ಈಗಾಗಲೇ ಅಂತಿಮಗೊಂಡಿರುವ ಅಥವಾ ಅಂತಿಮಗೊಳ್ಳುತ್ತಿರುವ ಈ ವ್ಯವಸ್ಥೆ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡಿದ್ದು, ಸೌದಿ ಅರೇಬಿಯಾ-ಪಾಕಿಸ್ತಾನ ಒಪ್ಪಂದಕ್ಕೆ ಕತಾರ್ ಮತ್ತು ಟರ್ಕಿ ಕೂಡ ಸೇರ್ಪಡೆಯಾದರೆ ಅದು ಸ್ವಾಗತಾರ್ಹ ಬೆಳವಣಿಗೆಯಾಗಲಿದೆ. ಇದರಿಂದ ನಮ್ಮ ಪ್ರದೇಶದ ರಾಷ್ಟ್ರಗಳು ಹೊರಗಿನ ಶಕ್ತಿಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳಬಹುದು" ಎಂದು ಹೇಳಿದ್ದರು.
ಈ ಪ್ರಸ್ತಾವಿತ ವ್ಯವಸ್ಥೆ ಯಾವುದೇ ದೇಶದ ವಿರುದ್ಧ ಅಲ್ಲ. ಬದಲಾಗಿ, ಪ್ರಾದೇಶಿಕ ಸ್ಥಿರತೆ ಬಲಪಡಿಸುವುದು ಹಾಗೂ ಹೊರಗಿನ ರಾಷ್ಟ್ರಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದೇ ಇದರ ಉದ್ದೇಶ ಎಂದು ಆಸಿಫ್ ಸ್ಪಷ್ಟಪಡಿಸಿದ್ದರು.
ಕಳೆದ ವರ್ಷ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಶರೀಫ್ ಅವರು ಸೌದಿ ಅರೇಬಿಯಾ ಪ್ರವಾಸ ಕೈಗೊಂಡ ವೇಳೆ, ಸೌದಿ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಅವರ ಸಮ್ಮುಖದಲ್ಲಿ 'ಸ್ಟ್ರಾಟೆಜಿಕ್ ಮ್ಯೂಚುಯಲ್ ಡಿಫೆನ್ಸ್ ಅಗ್ರಿಮೆಂಟ್' (Strategic Mutual Defence Agreement)ಗೆ ಉಭಯ ದೇಶಗಳು ಸಹಿ ಹಾಕಿದ್ದವು.
ಜಂಟಿ ಪ್ರಕಟಣೆಯ ಪ್ರಕಾರ, ಸುಮಾರು ಎಂಟು ದಶಕಗಳ ದ್ವಿಪಕ್ಷೀಯ ಸಂಬಂಧ, ಹಂಚಿಕೊಂಡಿರುವ ಕಾರ್ಯತಂತ್ರದ ಹಿತಾಸಕ್ತಿ ಹಾಗೂ ದೀರ್ಘಕಾಲದ ರಕ್ಷಣಾ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಈ ಒಪ್ಪಂದ ಮಾಡಿಕೊಳ್ಳಲಾಗಿತ್ತು.
ಆ ಒಪ್ಪಂದದ ಬಳಿಕ ಭಾರತವೂ ಪ್ರತಿಕ್ರಿಯೆ ನೀಡಿದ್ದು, ರಾಷ್ಟ್ರೀಯ ಭದ್ರತೆ ಮತ್ತು ಪ್ರಾದೇಶಿಕ ಸ್ಥಿರತೆ ಮೇಲೆ ಅದರ ಪರಿಣಾಮಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡುವುದಾಗಿ ಹೇಳಿತ್ತು.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, "ಸೌದಿ ಅರೇಬಿಯಾ ಮತ್ತು ಪಾಕಿಸ್ತಾನ ನಡುವಿನ ಕಾರ್ಯತಂತ್ರದ ಪರಸ್ಪರ ರಕ್ಷಣಾ ಒಪ್ಪಂದದ ಬಗ್ಗೆ ನಮಗೆ ಮಾಹಿತಿ ಇದೆ. ಇದು ಎರಡೂ ದೇಶಗಳ ನಡುವೆ ಬಹುಕಾಲದಿಂದ ಚರ್ಚೆಯಲ್ಲಿದ್ದ ವ್ಯವಸ್ಥೆಗೆ ಅಧಿಕೃತ ರೂಪ ನೀಡಿದೆ. ಇದರ ಪರಿಣಾಮಗಳನ್ನು ಭಾರತದ ರಾಷ್ಟ್ರೀಯ ಭದ್ರತೆ, ಪ್ರಾದೇಶಿಕ ಹಾಗೂ ಜಾಗತಿಕ ಸ್ಥಿರತೆಯ ದೃಷ್ಟಿಯಿಂದ ಅಧ್ಯಯನ ಮಾಡುತ್ತೇವೆ" ಎಂದು ತಿಳಿಸಿದ್ದರು.
ಆದರೆ, ಟರ್ಕಿ, ಸೌದಿ ಅರೇಬಿಯಾ ಹಾಗೂ ಪಾಕಿಸ್ತಾನ ಈ ತ್ರಿಪಕ್ಷೀಯ ರಕ್ಷಣಾ ಒಪ್ಪಂದದ ಬಗ್ಗೆ ಇನ್ನೂ ಅಧಿಕೃತ ಘೋಷಣೆ ಮಾಡಿಲ್ಲ.
ಒಪ್ಪಂದಕ್ಕೆ ಸಹಿ ಬಿದ್ದರೆ, ಮೂರು ದೇಶಗಳ ನಡುವಿನ ರಕ್ಷಣಾ ಸಹಕಾರ ಹೊಸ ಹಂತ ತಲುಪಲಿದ್ದು, ಪ್ರಾದೇಶಿಕ ಕಾರ್ಯತಂತ್ರ ಮತ್ತು ಭದ್ರತಾ ವಲಯದಲ್ಲಿ ಮಹತ್ವದ ಬೆಳವಣಿಗೆಯಾಗಿ ಪರಿಗಣಿಸಲಾಗುತ್ತಿದೆ.