US-Iran ಸಂಘರ್ಷ ಉಲ್ಬಣ: ನೌಕಾ ದಿಗ್ಬಂಧನ ಮುಂದುವರಿದರೆ ಶೇ.100ರಷ್ಟು ಪ್ರತೀಕಾರ; ‘ನೆತನ್ಯಾಹು ನರಕಕ್ಕೆ’: ಟ್ರಂಪ್‌ಗೆ Tehran ಖಡಕ್ ಎಚ್ಚರಿಕೆ

ಇದೇ ವೇಳೆ ಇಸ್ರೇಲ್‌ನೊಂದಿಗೆ ಮತ್ತೊಮ್ಮೆ ಸಂಘರ್ಷ ಆರಂಭವಾದರೆ ಅದು ಹೊಸ ಹಂತವನ್ನು ಪ್ರವೇಶಿಸಲಿದೆ ಎಂದು ರೆಜಾಯಿ ಎಚ್ಚರಿಸಿದ್ದಾರೆ.
Donald Trump
ಡೊನಾಲ್ಡ್ ಟ್ರಂಪ್
Updated on

ಟೆಹ್ರಾನ್: ಅಮೆರಿಕದ ನೌಕಾ ದಿಗ್ಬಂಧನ ಮುಂದುವರಿದರೆ ತೀವ್ರ ಸ್ವರೂಪದ ಮುಖಾಮುಖಿ ಸಂಘರ್ಷ ಎದುರಿಸಬೇಕಾಗುತ್ತದೆ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು "ನರಕಕ್ಕೆ ಕಳುಹಿಸುತ್ತೇವೆ" ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಇರಾನ್ ಖಡಕ್ ಎಚ್ಚರಿಕೆ ನೀಡಿದೆ.

ಇರಾನ್‌ನ ಸುಪ್ರೀಂ ನ್ಯಾಷನಲ್ ಸೆಕ್ಯುರಿಟಿ ಕೌನ್ಸಿಲ್‌ನ ಕಾರ್ಯದರ್ಶಿಯಾಗಿರುವ ಮೇಜರ್ ಜನರಲ್ ಮೊಹ್ಸೆನ್ ರೆಜಾಯಿ ಅವರು ಅಲ್-ಮನಾರ್ ಟಿವಿಗೆ ನೀಡಿದ ಸಂದರ್ಶನದಲ್ಲಿ ಈ ಹೇಳಿಕೆ ನೀಡಿದ್ದಾರೆ ಎಂದು ಇರಾನ್‌ನ ಸರ್ಕಾರಿ ಸುದ್ದಿ ಸಂಸ್ಥೆ ಐಆರ್‌ಐಬಿ ವರದಿ ಮಾಡಿದೆ.

ನೆತನ್ಯಾಹು ಅವರ ಕ್ರಮಗಳಿಂದ “ಝಿಯೋನಿಸ್ಟ್ ಆಡಳಿತದ ಅಸ್ತಿತ್ವದ ಅಂತ್ಯ ಸಮೀಪಿಸಿದೆ” ಎಂದು ರೆಜಾಯಿ ಹೇಳಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರನ ಹತ್ಯೆಗೆ ಇರಾನ್ ಸಂಚು ರೂಪಿಸಿದೆ ಎಂಬ ಸುಳ್ಳು ಸುದ್ದಿಯನ್ನು ಹರಡುವ ಮೂಲಕ ನೆತನ್ಯಾಹು ಟ್ರಂಪ್ ಅವರನ್ನು ಆತಂಕಕ್ಕೆ ದೂಡಿ, ಅವರ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಇದೇ ವೇಳೆ ಇಸ್ರೇಲ್‌ನೊಂದಿಗೆ ಮತ್ತೊಮ್ಮೆ ಸಂಘರ್ಷ ಆರಂಭವಾದರೆ ಅದು ಹೊಸ ಹಂತವನ್ನು ಪ್ರವೇಶಿಸಲಿದೆ ಎಂದು ರೆಜಾಯಿ ಎಚ್ಚರಿಸಿದ್ದಾರೆ. ವಿಶೇಷವಾಗಿ ಲೆಬನಾನ್ ವಿಚಾರದಲ್ಲಿ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಬಹುದು ಎಂದು ಹೇಳಿದ್ದಾರೆ.

ನಾವು ಪರಿಸ್ಥಿತಿಯನ್ನು ಅತ್ಯಂತ ಗಂಭೀರವಾಗಿ ಗಮನಿಸುತ್ತಿದ್ದೇವೆ. ಲೆಬನಾನ್‌ನ ಆಕ್ರಮಿತ ಪ್ರದೇಶಗಳಿಂದ ಇಸ್ರೇಲ್ ಹಿಂತೆಗೆದುಕೊಳ್ಳುವಂತೆ ಮಾಡಲಾಗುವುದು. ಸಂಘರ್ಷ ಮತ್ತೆ ಆರಂಭವಾದರೆ ನಾವು ಹೊಸ ಹಂತಕ್ಕೆ ಸಿದ್ಧರಾಗುತ್ತಿದ್ದೇವೆ. ಮುಂದಿನ ಯಾವುದೇ ಯುದ್ಧವು ಹಿಂದಿನ ಯುದ್ಧಗಳಿಗಿಂತ ಭಿನ್ನವಾಗಿರಲಿದೆ ಎಂದು ತಿಳಿಸಿದ್ದಾರೆ.

ಅಮೆರಿಕವು ಇರಾನ್ ವಿರುದ್ಧ ಸೇನಾ ಕ್ರಮದ ಬದಲು ಆರ್ಥಿಕ ಒತ್ತಡ ಹೇರಲು ಮುಂದಾಗಿರುವುದನ್ನೂ ರೆಜಾಯಿ ಟೀಕಿಸಿದ್ದಾರೆ.

ಅಮೆರಿಕ ಆರ್ಥಿಕ ಒತ್ತಡವನ್ನು ಮುಂದುವರಿಸಿದರೆ ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ಆರ್ಥಿಕ ಹಿತಾಸಕ್ತಿಗಳನ್ನು ಗುರಿಯಾಗಿಸಿಕೊಂಡು ಪ್ರತೀಕಾರ ಕ್ರಮ ಕೈಗೊಳ್ಳುವುದಾಗಿ ಅವರು ಎಚ್ಚರಿಸಿದ್ದಾರೆ.

ಆರ್ಥಿಕ ಒತ್ತಡದತ್ತ ಅಮೆರಿಕದ ಬದಲಾವಣೆ ಸೇನಾ ದಾಳಿಗಳ ನಿರರ್ಥಕತೆಯನ್ನು ತೋರಿಸಿದೆ. ಆರ್ಥಿಕ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದರೆ, ಪ್ರದೇಶದಲ್ಲಿನ ಅಮೆರಿಕದ ಆರ್ಥಿಕ ಹಿತಾಸಕ್ತಿಗಳನ್ನು ಗುರಿಯಾಗಿಸಿಕೊಂಡು ಪ್ರತಿಕ್ರಿಯೆ ನೀಡುತ್ತೇವೆ ಎಂದು ಹೇಳಿದ್ದಾರೆ.

Donald Trump
Trump ಕಿರಿಯ ಪುತ್ರ ಬ್ಯಾರನ್ ಹತ್ಯೆಗೆ Iran ಸಂಚು? ಇದು ಸಂಪೂರ್ಣ ಸುಳ್ಳು; ಆರೋಪವನ್ನು ಸಾರಾಸಗಟಾಗಿ ತಳ್ಳಿಹಾಕಿದ ಟೆಹ್ರಾನ್..!

ಕದನ ವಿರಾಮದ ಅವಧಿಯಲ್ಲಿ ಇರಾನ್ 8 ಕೋಟಿ ಬ್ಯಾರೆಲ್ ತೈಲವನ್ನು ರಫ್ತು ಮಾಡಿದೆ ಎಂದು ರೆಜಾಯಿ ಹೇಳಿದ್ದಾರೆ. ಅಮೆರಿಕದ ದಿಗ್ಬಂಧನ ಮುಂದುವರಿದರೆ ಅಮೆರಿಕದ ಆರ್ಥಿಕ ಹಿತಾಸಕ್ತಿಗಳನ್ನು “ಶೇ.100ರಷ್ಟು ತೀವ್ರತೆ ಮತ್ತು ಬಲದಿಂದ” ಗುರಿಯಾಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಉದ್ವಿಗ್ನತೆ ಶಮನಕ್ಕೆ ಕತಾರ್ ರಾಜತಾಂತ್ರಿಕ ಪ್ರಯತ್ನ

ಈ ನಡುವೆ ಉದ್ವಿಗ್ನತೆ ಕಡಿಮೆ ಮಾಡಲು ಕತಾರ್ ರಾಜತಾಂತ್ರಿಕ ಪ್ರಯತ್ನಗಳನ್ನು ಹೆಚ್ಚಿಸಿದೆ. ಕತಾರ್ ಪ್ರಧಾನಿ ಮೊಹಮ್ಮದ್ ಬಿನ್ ಅಬ್ದುಲ್‌ರಹ್ಮಾನ್ ಬಿನ್ ಜಾಸಿಂ ಅಲ್ ಥಾನಿ ಗುರುವಾರ ತೆಹ್ರಾನ್‌ಗೆ ಭೇಟಿ ನೀಡಿ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರನ್ನು ಭೇಟಿಯಾದರು.

ಇಬ್ಬರೂ ಪ್ರಾದೇಶಿಕ ಭದ್ರತೆ ಹಾಗೂ ಮಾತುಕತೆಗೆ ಅನುಕೂಲಕರ ಪರಿಸ್ಥಿತಿ ನಿರ್ಮಿಸುವ ಪ್ರಯತ್ನಗಳ ಕುರಿತು ಚರ್ಚಿಸಿದರು.

ಕೆಲವು ಘಟನೆಗಳು ಸ್ವೀಕಾರಾರ್ಹವಾಗಿರಲಿಲ್ಲ. ಆದರೂ ಇರಾನ್ ಮತ್ತು ಕತಾರ್ ಸ್ನೇಹಿತ ಹಾಗೂ ಸಹೋದರ ರಾಷ್ಟ್ರಗಳಾಗಿವೆ ಎಂಬ ನಂಬಿಕೆ ನಮ್ಮಲ್ಲಿದೆ. ಉಂಟಾಗಿರುವ ಸಮಸ್ಯೆಗಳನ್ನು ಪರಸ್ಪರ ಅರ್ಥಮಾಡಿಕೊಳ್ಳುವ ಮೂಲಕ ಪರಿಹರಿಸಬಹುದು” ಎಂದು ಪೆಜೆಶ್ಕಿಯಾನ್ ಹೇಳಿದ್ದಾರೆ.

ಸಂಘರ್ಷವನ್ನು ವಿಸ್ತರಿಸುವ ಉದ್ದೇಶ ಇರಾನ್‌ಗೆ ಇಲ್ಲ ಹಾಗೂ ವಿವಾದಗಳನ್ನು ಮಾತುಕತೆಯ ಮೂಲಕ ಬಗೆಹರಿಸಲು ಬೆಂಬಲವಿದೆ ಎಂದು ತಿಳಿಸಿದ್ದಾರೆ.

ಬಲಪ್ರಯೋಗ ಮತ್ತು ಬೆದರಿಕೆಯ ಭಾಷೆ ಯಾವುದೇ ಪರಿಹಾರವಲ್ಲ. ರಾಜತಾಂತ್ರಿಕತೆ, ವಿವೇಚನೆ ಮತ್ತು ತರ್ಕದ ಮೂಲಕ ಪ್ರದೇಶದಲ್ಲಿ ಸ್ಥಿರತೆ, ಭದ್ರತೆ ಮತ್ತು ಆರ್ಥಿಕ ಶಾಂತಿಯನ್ನು ಮರಳಿ ಸ್ಥಾಪಿಸಬೇಕು ದು ಅಲ್ ಥಾನಿ ಹೇಳಿದ್ದಾರೆ.

ಹಾರ್ಮುಜ್ ಜಲಸಂಧಿ ವಿಚಾರದಲ್ಲಿ ಚರ್ಚೆ

ಹೋರ್ಮುಜ್ ಜಲಸಂಧಿಯನ್ನು ಸುತ್ತುವರಿದ ಉದ್ವಿಗ್ನತೆಯ ನಡುವೆಯೇ ಈ ರಾಜತಾಂತ್ರಿಕ ಪ್ರಯತ್ನಗಳು ನಡೆಯುತ್ತಿವೆ. ಜಲಸಂಧಿಯಲ್ಲಿ ತಾತ್ಕಾಲಿಕ ಹಡಗು ಸಂಚಾರ ಮಾರ್ಗ ನಿರ್ಮಿಸುವ ಸಾಧ್ಯತೆ ಹಾಗೂ ಜಲಮಾರ್ಗದಲ್ಲಿರುವ ಸ್ಫೋಟಕಗಳನ್ನು ತೆರವುಗೊಳಿಸುವ ಕುರಿತು ಕತಾರ್ ಮತ್ತು ಇರಾನ್ ಚರ್ಚೆ ನಡೆಸುತ್ತಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com