

ಬೈರೂತ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಿರಿಯ ಪುತ್ರ ಬ್ಯಾರನ್ ಟ್ರಂಪ್ ಅವರನ್ನು ಹತ್ಯೆ ಮಾಡಲು ಇರಾನ್ ಸಂಚು ರೂಪಿಸಿದೆ ಎಂಬ ವರದಿಯನ್ನು ಇರಾನ್ ಭದ್ರತಾ ಮುಖ್ಯಸ್ಥ ಮೊಹ್ಸೆನ್ ರೆಜಾಯಿ ತಳ್ಳಿಹಾಕಿದ್ದಾರೆ.
ಈ ಆರೋಪ ಸಂಪೂರ್ಣ ಸುಳ್ಳು ಎಂದು ಲೆಬನಾನ್‌ನ ಅಲ್-ಮನಾರ್ ಟಿವಿಗೆ ನೀಡಿದ ಸಂದರ್ಶನದಲ್ಲಿ ಹೇಳಿಕೆ ನೀಡಿದ್ದಾರೆ.
ಟ್ರಂಪ್ ಅವರ ಕಿರಿಯ ಪುತ್ರನ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂಬ ಕುರಿತು ಇರಾನ್ ಸರ್ಕಾರಿ ದೂರದರ್ಶನದಲ್ಲಿ ಪ್ರಸಾರವಾದ ವಿಡಿಯೊದ ಬಗ್ಗೆ ಮಾಹಿತಿ ಇದೆ ಎಂದು ಅಮೆರಿಕದ ಸೀಕ್ರೆಟ್ ಸರ್ವಿಸ್ ಮಂಗಳವಾರ ತಿಳಿಸಿತ್ತು.
ಇದೀಗ ಈ ಆರೋಪಕ್ಕೆ ಪ್ರತಿಕ್ರಿಯಿಸಿರುವ ರೆಜಾಯಿ, ಬ್ಯಾರನ್ ಟ್ರಂಪ್ ಅವರನ್ನು ಹತ್ಯೆ ಮಾಡುವ ಯಾವುದೇ ಸಂಚು ಇರಾನ್‌ನಿಂದ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದೇ ಸಂದರ್ಶನದಲ್ಲಿ ರೆಜಾಯಿ, ಹಾರ್ಮುಜ್ ಜಲಸಂಧಿಯನ್ನು ಮತ್ತೆ ಹಡಗು ಸಂಚಾರಕ್ಕೆ ತೆರೆಯಲು ಇರಾನ್ ವಿಧಿಸುವ ಷರತ್ತುಗಳನ್ನು ತಿಳಿಸುವಂತೆ ಮಧ್ಯವರ್ತಿಗಳು ಮನವಿ ಮಾಡಿದ್ದಾರೆ ಎಂದು ಹೇಳಿದ್ದಾರೆ. ಈ ಕುರಿತು ಇರಾನ್ ಷರತ್ತುಗಳ ಪಟ್ಟಿಯನ್ನು ಸಿದ್ಧಪಡಿಸುತ್ತಿದೆ ಎಂದು ತಿಳಿಸಿದ್ದಾರೆ.
ಈ ಪ್ರದೇಶದಲ್ಲಿ ನಡೆಯುತ್ತಿರುವ ಯುದ್ಧವನ್ನು ಅಂತ್ಯಗೊಳಿಸುವುದು ಇರಾನ್ ಮುಂದಿಟ್ಟಿರುವ ಪ್ರಮುಖ ಷರತ್ತುಗಳಲ್ಲಿ ಒಂದಾಗಿದೆ ಎಂದು ರೆಜಾಯಿ ಹೇಳಿದ್ದಾರೆ.
ಹಾರ್ಮುಜ್ ಜಲಸಂಧಿ ಮೂಲಕ ಸರಕು ಸಾಗಣೆಗಾಗಿ ಒಮಾನ್‌ನೊಂದಿಗೆ ಇರಾನ್ ಒಂದು ಮಾರ್ಗದ ಕುರಿತು ಒಪ್ಪಂದ ಮಾಡಿಕೊಂಡಿದೆ. ಈ ಮಾರ್ಗದ ಕೆಲವು ಭಾಗಗಳು ಒಮಾನ್ ಮತ್ತು ಇರಾನ್‌ನ ಜಲಪ್ರದೇಶಗಳ ಮೂಲಕ ಹಾದುಹೋಗಲಿವೆ ಎಂದು ಹೇಳಿದ್ದಾರೆ.
ಅಮೆರಿಕವು ಇರಾನ್‌ನ ಷರತ್ತುಗಳನ್ನು ಒಪ್ಪಿಕೊಂಡರೆ, ಹಡಗುಗಳು ಜಲಸಂಧಿಯ ಮಧ್ಯಭಾಗದಲ್ಲಿ ನಿಗದಿಪಡಿಸಲಾದ ಮಾರ್ಗದ ಮೂಲಕ ಸಂಚರಿಸಲು ಅವಕಾಶ ನೀಡಲಾಗುವುದು ಎಂದು ತಿಳಿಸಿದ್ದಾರೆ.