ವಿದೇಶ

WWE ಅಭಿಮಾನಿಗಳಿಗೆ ಶಾಕ್: ರಿಂಗ್‌ನಲ್ಲಿ ಘರ್ಜಿಸುತ್ತಿದ್ದ ದೈತ್ಯ ಕುಸ್ತಿಪಟು ಇನ್ನಿಲ್ಲ: 38ನೇ ವಯಸ್ಸಿಗೆ ಬಾರದ ಲೋಕಕ್ಕೆ ತೆರಳಿದ Bronson Reed..!

WWE ಅಭಿಮಾನಿಗಳಿಗೆ ಶಾಕ್: ರಿಂಗ್‌ನಲ್ಲಿ ಘರ್ಜಿಸುತ್ತಿದ್ದ ದೈತ್ಯ ಕುಸ್ತಿಪಟು ಇನ್ನಿಲ್ಲ: 38ನೇ ವಯಸ್ಸಿಗೆ ಬಾರದ ಲೋಕಕ್ಕೆ ತೆರಳಿದ Bronson Reed..!
ಬ್ರಾನ್ಸನ್ ರೀಡ್
Published On :

WWE ಕುಸ್ತಿ ಲೋಕಕ್ಕೆ ಆಘಾತಕಾರಿ ಸುದ್ದಿ ಎದುರಾಗಿದೆ. ಖ್ಯಾತ ವೃತ್ತಿಪರ ಕುಸ್ತಿಪಟು ಬ್ರಾನ್ಸನ್ ರೀಡ್ (Bronson Reed) ತಮ್ಮ 38ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.

ಬ್ರಾನ್ಸನ್ ರೀಡ್ ಅವರ ನಿಜವಾದ ಹೆಸರು ಜೆರ್ಮೈನ್ ಹೇಲಿ (Jermaine Haley). ವೈದ್ಯಕೀಯ ಸಮಸ್ಯೆಗಳಿಂದ ಅವರು ಮೃತಪಟ್ಟಿದ್ದಾರೆ ಎಂದು WWE ಶುಕ್ರವಾರ ಅಧಿಕೃತ ಪ್ರಕಟಣೆ ಹೊರಡಿಸಿದೆ. ನೆಚ್ಚಿನ ಕುಸ್ತಿಪಟುವಿನ ಅಕಾಲಿಕ ನಿಧನದ ಸುದ್ದಿ ಕೇಳಿ ಅಭಿಮಾನಿಗಳು ಹಾಗೂ ಕುಸ್ತಿ ಕ್ಷೇತ್ರದ ಗಣ್ಯರು ಕಂಬನಿ ಮಿಡಿದಿದ್ದಾರೆ.

ನವೆಂಬರ್ 7ರಂದು ಸೌದಿ ಅರೇಬಿಯಾದಲ್ಲಿ ನಡೆದ WWE ಕ್ರೌನ್ ಜ್ಯುವೆಲ್ ಕಾರ್ಯಕ್ರಮದ ವೇಳೆ ರೀಡ್ ಗಂಭೀರವಾಗಿ ಗಾಯಗೊಂಡಿದ್ದರು ಎಂಬ ವರದಿಗಳು ಬಂದಿದ್ದವು.

ರೆಸ್ಲಿಂಗ್ ಅಬ್ಸರ್ವರ್ ಲೈವ್‌ನ ಬ್ರಿಯಾನ್ ಅಲ್ವಾರೆಜ್ ಅವರ ವರದಿಯ ಪ್ರಕಾರ, ರೀಡ್‌ಗೆ ಪಕ್ಕೆಲುಬುಗಳು ಮುರಿದಿದ್ದು, ಮೂತ್ರಪಿಂಡಕ್ಕೂ ಗಾಯವಾಗಿತ್ತು ಎಂದು ತಿಳಿದುಬಂದಿತ್ತು.

ಫೈಟ್‌ಫುಲ್‌ನ ಸೀನ್ ರಾಸ್ ಸ್ಯಾಪ್ ಅವರು ಕಾರ್ಯಕ್ರಮದ ಬಳಿಕ ರೀಡ್ ಗಾಯಗೊಂಡಿರುವ ಕುರಿತು ಮೊದಲಿಗೆ ವರದಿ ಮಾಡಿದ್ದರು. ಗಾಯದ ಗಂಭೀರತೆಯಿಂದಾಗಿ WWE ತಂಡದ ಉಳಿದ ಸದಸ್ಯರು ಅಮೆರಿಕಕ್ಕೆ ಮರಳಿದರೂ ರೀಡ್ ಸೌದಿ ಅರೇಬಿಯಾದಲ್ಲೇ ಉಳಿಯಬೇಕಾಯಿತು ಎನ್ನಲಾಗಿದೆ. ಈ ಸಂದರ್ಭದಲ್ಲಿ WWEಯ ಹಿರಿಯ ಅಂತಾರಾಷ್ಟ್ರೀಯ ಅಧಿಕಾರಿಯೊಬ್ಬರು ಮತ್ತು ವೈದ್ಯಕೀಯ ಸಿಬ್ಬಂದಿಯೊಬ್ಬರು ಅವರೊಂದಿಗೆ ಇದ್ದರು.

ಕ್ರೌನ್ ಜ್ಯುವೆಲ್‌ನಲ್ಲಿ ರೀಡ್ ಅಧಿಕೃತ ಪಂದ್ಯದಲ್ಲಿ ಭಾಗವಹಿಸಿರಲಿಲ್ಲ. ಆದರೆ, ದಿ ವಿಷನ್ ತಂಡದ ಬ್ರಾನ್ ಬ್ರೇಕರ್ ಮತ್ತು ಆಸ್ಟಿನ್ ಥಿಯರಿ ಅವರು ಪೆಂಟಾ ಹಾಗೂ ಜೆ'ವಾನ್ ಇವಾನ್ಸ್ ವಿರುದ್ಧ ಸೆಣಸಿದ ವರ್ಲ್ಡ್ ಟ್ಯಾಗ್ ಟೀಮ್ ಚಾಂಪಿಯನ್‌ಶಿಪ್ ಪಂದ್ಯದಲ್ಲಿ ಅವರು ಮಧ್ಯಪ್ರವೇಶಿಸಿದ್ದರು.

ಕಾರ್ಯಕ್ರಮದ ವೇಳೆ ಒಬಾ ಫೆಮಿ ಅವರೊಂದಿಗೆ ರೀಡ್ ಮುಖಾಮುಖಿಯಾಗಿದ್ದರು. ಈ ವೇಳೆ ಫೆಮಿ ಅವರನ್ನು ವೇದಿಕೆಯಿಂದ ಕೆಳಕ್ಕೆ ಎಸೆದಿದ್ದು, ಅವರು ಮೇಜುಗಳ ಮೇಲೆ ಬಿದ್ದಿದ್ದರು. ಈ ಘಟನೆಯಿಂದಲೇ ರೀಡ್‌ಗೆ ಗಂಭೀರ ಗಾಯಗಳಾಗಿವೆ ಎಂದು ರೆಸ್ಲಿಂಗ್ ಅಬ್ಸರ್ವರ್ ನ್ಯೂಸ್‌ಲೆಟರ್‌ನ ಡೇವ್ ಮೆಲ್ಟ್ಜರ್ ವರದಿ ಮಾಡಿದ್ದರು.

ಶಸ್ತ್ರಚಿಕಿತ್ಸೆಯ ಬಳಿಕ ರೀಡ್ ಮನೆಗೆ ಮರಳಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅಲ್ವಾರೆಜ್ ಕಳೆದ ವಾರ ಮಾಹಿತಿ ನೀಡಿದ್ದರು.

ಬ್ರಾನ್ಸನ್ ರೀಡ್ WWEನಲ್ಲಿ ಎರಡು ಪ್ರತ್ಯೇಕ ಅವಧಿಗಳಲ್ಲಿ ಕಾರ್ಯನಿರ್ವಹಿಸಿದ್ದರು. 2019ರಲ್ಲಿ ಮೊದಲ ಬಾರಿಗೆ WWE ಸೇರಿದ್ದ ಅವರು, 2021ರಲ್ಲಿ ಕಂಪನಿಯಿಂದ ಹೊರಬಂದಿದ್ದರು. ಬಳಿಕ 2022ರಲ್ಲಿ ಮತ್ತೆ WWEಗೆ ಮರಳಿದ್ದರು. 2026ರವರೆಗೆ ಕಂಪನಿಯೊಂದಿಗೆ ಗುರುತಿಸಿಕೊಂಡಿದ್ದರು.

ಮೊದಲ ಅವಧಿಯಲ್ಲಿ WWEಯ ಅಭಿವೃದ್ಧಿ ವಿಭಾಗದಲ್ಲಿ ಪ್ರಮುಖ ಕುಸ್ತಿಪಟುವಾಗಿ ಗುರುತಿಸಿಕೊಂಡಿದ್ದ ರೀಡ್, ಒಮ್ಮೆ ನಾರ್ತ್ ಅಮೆರಿಕನ್ ಚಾಂಪಿಯನ್‌ಶಿಪ್ ಗೆದ್ದಿದ್ದರು. WWE ತೊರೆದ ಬಳಿಕ ನ್ಯೂ ಜಪಾನ್ ಪ್ರೊ-ರೆಸ್ಲಿಂಗ್ ಮತ್ತು ಇಂಪ್ಯಾಕ್ಟ್ ರೆಸ್ಲಿಂಗ್‌ನಂತಹ ಸಂಸ್ಥೆಗಳಲ್ಲಿ ಸ್ಪರ್ಧಿಸಿದ್ದರು.

ಎರಡನೇ ಬಾರಿ WWEಗೆ ಮರಳಿದ ಬಳಿಕ ಅವರ ವೃತ್ತಿಜೀವನ ಮತ್ತಷ್ಟು ಯಶಸ್ಸು ಕಂಡಿತ್ತು. ಎದುರಾಳಿಗಳ ಮೇಲೆ ಹಾರಿಬಿದ್ದು ದಾಳಿ ಮಾಡುವ 'ಸುನಾಮಿ ಸ್ಪ್ಲಾಶ್' ಅವರ ಪ್ರಮುಖ ಅಂತಿಮ ತಂತ್ರವಾಗಿತ್ತು. ರೋಮನ್ ರೇನ್ಸ್ ಮತ್ತು ಸೇಥ್ ರೋಲಿನ್ಸ್ ಅವರಂತಹ ಖ್ಯಾತ ಕುಸ್ತಿಪಟುಗಳ ವಿರುದ್ಧವೂ ಗಮನಾರ್ಹ ಗೆಲುವು ದಾಖಲಿಸಿದ್ದರು. 2024ರಲ್ಲಿ ಆಂಡ್ರೆ ದಿ ಜೈಂಟ್ ಸ್ಮಾರಕ ಬ್ಯಾಟಲ್ ರಾಯಲ್ ಪ್ರಶಸ್ತಿಯನ್ನೂ ಗೆದ್ದಿದ್ದರು.

2025ರಿಂದ ರೀಡ್ 'ದಿ ವಿಷನ್' ತಂಡದ ಭಾಗವಾಗಿದ್ದರು. ಆರಂಭದಲ್ಲಿ ಬ್ರಾನ್ ಬ್ರೇಕರ್, ಸೇಥ್ ರೋಲಿನ್ಸ್ ಮತ್ತು ಪಾಲ್ ಹೇಮನ್ ಈ ತಂಡದಲ್ಲಿದ್ದರು. ನಂತರ ಆಸ್ಟಿನ್ ಥಿಯರಿ, ಲೋಗನ್ ಪಾಲ್ ಮತ್ತು ಮ್ಯಾಕ್ಸಿನ್ ಡುಪ್ರಿ ಕೂಡ ತಂಡದೊಂದಿಗೆ ಗುರುತಿಸಿಕೊಂಡಿದ್ದರು.

WWE ಹೊರತಾಗಿಯೂ ಆಸ್ಟ್ರೇಲಿಯಾ ಸೇರಿದಂತೆ ವಿಶ್ವದ ಹಲವು ಕುಸ್ತಿ ಸಂಸ್ಥೆಗಳಲ್ಲಿ ರೀಡ್ ಸ್ಪರ್ಧಿಸಿದ್ದರು. ತಮ್ಮ ವೃತ್ತಿಜೀವನದಲ್ಲಿ ಜೋನಾಹ್ ರಾಕ್, ಜೋನಾಹ್ ಮತ್ತು ಜೆ-ರಾಕ್ ಸೇರಿದಂತೆ ವಿವಿಧ ಹೆಸರುಗಳಿಂದ ಅವರು ಕುಸ್ತಿ ಪ್ರದರ್ಶನ ನೀಡಿದ್ದರು.

ರೀಡ್ ಪತ್ನಿ ಮತ್ತು ಮಗಳನ್ನು ಅಗಲಿದ್ದಾರೆ. ಅವರ ಪತ್ನಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಅವರ ನಿಧನಕ್ಕೆ WWE ಸೇರಿದಂತೆ ಕುಸ್ತಿ ಜಗತ್ತಿನ ಅನೇಕರು ಸಂತಾಪ ಸೂಚಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.