‘UI’ ನಂತರ ಮತ್ತೊಂದು ಸಿನಿಮಾ ನಿರ್ದೇಶನಕ್ಕೆ ಉಪೇಂದ್ರ ಸಿದ್ಧತೆ; ಶೀಘ್ರದಲ್ಲೇ ಸಿಗಲಿದೆ ಬಿಗ್ ಅಪ್‌ಡೇಟ್..!

‘ಯುಐ’ ಚಿತ್ರದ ಬಳಿಕ ನಿರ್ದೇಶನದಿಂದ ಕೊಂಚ ವಿರಾಮ ಪಡೆದಿದ್ದ ರಿಯಲ್ ಸ್ಟಾರ್ ಉಪೇಂದ್ರ, ಇದೀಗ ಮತ್ತೊಂದು ಹೊಸ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಲು ಸಜ್ಜಾಗುತ್ತಿದ್ದಾರೆ.
ನಟನೆಯ ಚಿತ್ರೀಕರಣಗಳ ನಡುವೆಯೇ ಮುಂದಿನ ಚಿತ್ರದ ಕಥೆ ಬರೆಯುತ್ತಿರುವ ಅವರು, ಸದ್ಯದಲ್ಲೇ ತಮ್ಮ ಹೊಸ ನಿರ್ದೇಶನದ ಯೋಜನೆಯನ್ನು ಅಧಿಕೃತವಾಗಿ ಘೋಷಿಸುವ ಸುಳಿವು ನೀಡಿದ್ದಾರೆ.
ಎರಡು ಸಿನಿಮಾಗಳ ಚಿತ್ರೀಕರಣ ಪೂರ್ಣಗೊಂಡ ಬಳಿಕ ನಿರ್ದೇಶನದ ಕೆಲಸ ಆರಂಭಿಸುವುದಾಗಿ ಉಪೇಂದ್ರ ತಿಳಿಸಿದ್ದಾರೆ.
ಸದ್ಯ ನಾನು ಒಂದು ಕಥೆಯ ಕೆಲಸದಲ್ಲಿ ತೊಡಗಿಸಿಕೊಂಡಿದ್ದೇನೆ. ಈಗಿನ ಬದ್ಧತೆಗಳು ಪೂರ್ಣಗೊಂಡ ಬಳಿಕ ಚಿತ್ರದ ವಿವರಗಳನ್ನು ಬಹಿರಂಗಪಡಿಸುತ್ತೇನೆ. ಶೀಘ್ರದಲ್ಲೇ ಘೋಷಣೆ ಮಾಡಲಿದ್ದೇನೆ. ಘೋಷಣೆ ಮಾಡಿದಾಗ ಚಿತ್ರದ ಕಥಾವಸ್ತು ಏನೆಂಬುದರ ಬಗ್ಗೆ ನಿಮಗೆ ಸ್ಪಷ್ಟ ಕಲ್ಪನೆ ಸಿಗಲಿದೆ. ಸದ್ಯ ಎರಡು ಸಿನಿಮಾಗಳ ಚಿತ್ರೀಕರಣ ಬಾಕಿ ಇದೆ. ಅವೆರಡನ್ನೂ ಮುಗಿಸಿದ ತಕ್ಷಣ ನಿರ್ದೇಶನದ ಕೆಲಸ ಆರಂಭಿಸುವ ಯೋಜನೆ ಇದೆ ಎಂದು ಹೇಳಿದ್ದಾರೆ.
ಇದೇ ವೇಳೆ ತಮ್ಮ ಪುತ್ರ ಆಯುಷ್ ಅವರ ಚಿತ್ರರಂಗದ ಪ್ರವೇಶದ ಬಗ್ಗೆಯೂ ಮಾತನಾಡಿರುವ ಉಪೇಂದ್ರ ಅವರು, ಚಿತ್ರದ ಆರಂಭಿಕ ಕಥೆ ಚರ್ಚೆಗಳಲ್ಲಿ ತಾವು ಭಾಗವಹಿಸಿದ್ದಾಗಿ ತಿಳಿಸಿದ್ದಾರೆ. ಈ ಚಿತ್ರದ ಮೂಲಕ ಅವರ ಪತ್ನಿ ಹಾಗೂ ನಟಿ ಪ್ರಿಯಾಂಕಾ ಉಪೇಂದ್ರ ನಿರ್ದೇಶಕಿಯಾಗಿ ಪರಿಚಯವಾಗುತ್ತಿದ್ದಾರೆ.
ಸದ್ಯ ಉಪೇಂದ್ರ ಅವರು ಚಿಕ್ಕಮಗಳೂರಿನಿಂದ ಕೊಡೈಕೆನಾಲ್‌ಗೆ ಪ್ರಯಾಣಿಸುತ್ತಿದ್ದು, ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ಅವರ ಮುಂಬರುವ ತಮಿಳು ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದಾರೆ.
ನೇರವಾಗಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರವು ಸಾಂಪ್ರದಾಯಿಕ ಜಾನಪದ ಕಲೆಯಾದ ಪುಲಿಯಾಟ್ಟಂ ಹಿನ್ನೆಲೆಯನ್ನು ಹೊಂದಿದೆ. ಇದರಲ್ಲಿ ಉಪೇಂದ್ರ ಜೊತೆಗೆ ಪ್ರಭುದೇವ ಮತ್ತು ಅಥರ್ವ ನಟಿಸುತ್ತಿದ್ದಾರೆ.
24 ವರ್ಷಗಳ ಬಳಿಕ ಉಪೇಂದ್ರ ಮತ್ತು ಪ್ರಭುದೇವ ಮತ್ತೆ ಒಂದೇ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಎರಡು ವಿಭಿನ್ನ ಕಾಲಘಟ್ಟಗಳಲ್ಲಿ ಸಾಗುವ ಕಥೆಯನ್ನು ಸಿನಿಮಾ ಒಳಗೊಂಡಿದೆ.
ಇದರ ಜೊತೆಗೆ ಉಪೇಂದ್ರ ಅವರ ಮುಂದಿನ ಕನ್ನಡ ಚಿತ್ರ ‘ನೆಕ್ಸ್ಟ್ ಲೆವೆಲ್’ ಚಿತ್ರೀಕರಣದ ವೇಳಾಪಟ್ಟಿಯೂ ನಿಗದಿಯಾಗಿದೆ. ಅರವಿಂದ್ ಕೌಶಿಕ್ ನಿರ್ದೇಶನದ ಈ ಚಿತ್ರವನ್ನು ತರುಣ್ ಶಿವಪ್ಪ ನಿರ್ಮಿಸುತ್ತಿದ್ದಾರೆ. ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಮೂಡಿಬರುತ್ತಿರುವ ಈ ಸಾಹಸಮಯ ಚಿತ್ರದಲ್ಲಿ ಉಪೇಂದ್ರ ಅವರಿಗೆ ಆರಾಧನಾ ರಾಮ್ ನಾಯಕಿಯಾಗಿದ್ದಾರೆ. ಮತ್ತೊಂದು ವಿಶೇಷವೆಂದರೆ, ಇದೇ ಮೊದಲ ಬಾರಿಗೆ ಉಪೇಂದ್ರ ತಮ್ಮ ಸೋದರಳಿಯ ನಿರಂಜನ್ ಸುಧೀಂದ್ರ ಅವರೊಂದಿಗೆ ತೆರೆ ಹಂಚಿಕೊಳ್ಳಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



