ದೇಶ

ಅವಮಾನಿಸಿದ ಊರಿನವರೇ ಹರಸಿದರು: ಇದು 'ಲೋಮಶ ಕನ್ಯಾ' ರೇಬತಿ ಕನ್ಹರ್‌ಳ ಅಪರೂಪದ ಪ್ರೇಮಕಥೆ..!

ಇಡೀ ದೇಹದಾದ್ಯಂತ, ಮುಖವನ್ನೂ ಬಿಡದೆ ಬೆಳೆದಿದ್ದ ಅತಿಯಾದ ಕೂದಲು ಹಾಗೂ ಮುಖದ ಆಕಾರದಲ್ಲಿನ ವಿರೂಪದಿಂದಾಗಿ ರೇಬತಿ ಕನ್ಹರ್ ಅವರು ಬಾಲ್ಯದಲ್ಲಿ ಸಾಕಷ್ಟು ಅಪಮಾನ ಮತ್ತು ನೋವು ಅನುಭವಿಸಿದ್ದರು.

ಅವಮಾನಿಸಿದ ಊರಿನವರೇ ಹರಸಿದರು: ಇದು 'ಲೋಮಶ ಕನ್ಯಾ' ರೇಬತಿ ಕನ್ಹರ್‌ಳ ಅಪರೂಪದ ಪ್ರೇಮಕಥೆ..!
ದಾಂಪತ್ಯ ಜೀವನಕ್ಕೆ ಕಾಲಿಟ್ಟ ರೇಬತಿ ಕನ್ಹರ್
Published On :

ನಯಾಗಢ: ಸಮಾಜದ ಕಣ್ಣಲ್ಲಿ 'ವಿಚಿತ್ರ' ಎನಿಸಿಕೊಂಡು, ಹತ್ತಾರು ವರ್ಷಗಳ ಕಾಲ ಅವಮಾನ, ಬಹಿಷ್ಕಾರ ಮತ್ತು ನೋವಿನಲ್ಲೇ ಬದುಕಿದ್ದ ಒಡಿಶಾದ ಯುವತಿಯೊಬ್ಬರ ಬಾಳಲ್ಲಿ ಈಗ ಹೊಸ ಬೆಳಕು ಮೂಡಿದೆ.

ಒಂದೊಮ್ಮೆ ಅಪರೂಪದ ಆನುವಂಶಿಕ ಕಾಯಿಲೆಯಿಂದಾಗಿ ‘ಲೋಮಶ ಕನ್ಯಾ’ (ಕೂದಲಿನ ಹುಡುಗಿ) ಮತ್ತು ‘ಬನ ಬಾಲಿಕಾ’ (ಕಾಡಿನ ಹುಡುಗಿ) ಎಂದು ಅಪಹಾಸ್ಯಕ್ಕೊಳಗಾಗಿದ್ದ 31 ವರ್ಷದ ರೇಬತಿ ಕನ್ಹರ್, ಈಗ ತಮ್ಮ ಕನಸಿನ ರಾಜಕುಮಾರನ ಕೈಹಿಡಿದು ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.

ಇಡೀ ದೇಹದಾದ್ಯಂತ, ಮುಖವನ್ನೂ ಬಿಡದೆ ಬೆಳೆದಿದ್ದ ಅತಿಯಾದ ಕೂದಲು ಹಾಗೂ ಮುಖದ ಆಕಾರದಲ್ಲಿನ ವಿರೂಪದಿಂದಾಗಿ ರೇಬತಿ ಕನ್ಹರ್ ಅವರು ಬಾಲ್ಯದಲ್ಲಿ ಸಾಕಷ್ಟು ಅಪಮಾನ ಮತ್ತು ನೋವು ಅನುಭವಿಸಿದ್ದರು.

ಗ್ರಾಮಸ್ಥರು ಅವರನ್ನು ಅಣಕದಿಂದ ‘ಲೋಮಶ ಕನ್ಯೆ’ (ಕೂದಲುಳ್ಳ ಹುಡುಗಿ) ಮತ್ತು ‘ವನ ಬಾಲಕಿ’ ಎಂದು ಕರೆಯುತ್ತಿದ್ದರು. ಅಪರೂಪದ ವಂಶವಾಹಿ ದೋಷದಿಂದಾಗಿ ಅವರ ವಸಡಿನಲ್ಲಿ ಶೇ.100ರಷ್ಟು ಅತಿಯಾದ ಬೆಳವಣಿಗೆ ಉಂಟಾಗಿತ್ತು. ಇದರಿಂದ ಮುಖದ ಆಕಾರ ಸಂಪೂರ್ಣ ಬದಲಾಗಿತ್ತು. ಜೊತೆಗೆ ಹೈಪರ್‌ಟ್ರೈಕೋಸಿಸ್ ಎಂಬ ವೈದ್ಯಕೀಯ ಸ್ಥಿತಿಯಿಂದಾಗಿ ದೇಹದಾದ್ಯಂತ ಅಸಹಜವಾಗಿ ಕೂದಲು ಬೆಳೆದಿತ್ತು.

ಆದರೆ, ಈಗ ರೇಬತಿ ಬದುಕಿನಲ್ಲಿ ಹೊಸ ಕನಸುಗಳೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಶನಿವಾರ ತಮ್ಮದೇ ಗ್ರಾಮದ ಪಿಟಾಬಾಸ್ ಸಾಹು ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಮದುವೆಗೆ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನವಜೋಡಿಗೆ ಶುಭ ಹಾರೈಸಿದ್ದಾರೆ.

ಖಾಲಿಸಾಹಿಯಲ್ಲಿ ಸ್ಥಳೀಯ ಹಿರಿಯರು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಮದುವೆ ಸಮಾರಂಭ ನಡೆಯಿತು. ಸಾಂಪ್ರದಾಯಿಕ ವಿಧಿವಿಧಾನಗಳಂತೆ ಪಿಟಾಬಾಸ್ ಅವರು ರೇಬತಿ ಅವರ ಹಣೆಗೆ ಸಿಂಧೂರವಿಟ್ಟು, ಕೊರಳಿಗೆ ಮಾಂಗಲ್ಯ ಕಟ್ಟಿದರು. ಬಳಿಕ ಪರಸ್ಪರ ಹೂಮಾಲೆ ಬದಲಿಸಿಕೊಂಡರು. ಮದುವೆಯ ನಂತರ ನವದಂಪತಿ ಪಕ್ಕದ ನಯಾಗಢ ಜಿಲ್ಲೆಯ ಸುಬಾಲಯ ಗ್ರಾಮದಲ್ಲಿರುವ ಪಿಟಾಬಾಸ್ ಅವರ ಮನೆಗೆ ತೆರಳಿದರು.

ಕುಟುಂಬದ ಆಪ್ತ ಮೂಲಗಳ ಪ್ರಕಾರ, ಸಣ್ಣ ಪ್ರಮಾಣದ ವ್ಯಾಪಾರ ನಡೆಸುತ್ತಿರುವ ಪಿಟಾಬಾಸ್ ಅವರು ಕೆಲವು ದಿನಗಳ ಹಿಂದೆ ರೇಬತಿ ಅವರನ್ನು ಭೇಟಿಯಾಗಿದ್ದರು. ಖಾಲಿಸಾಹಿ ಗ್ರಾಮಕ್ಕೆ ಆಗಾಗ್ಗೆ ಭೇಟಿ ನೀಡುತ್ತಿದ್ದಂತೆ ಇಬ್ಬರ ನಡುವಿನ ಪರಿಚಯ ಗಾಢವಾಯಿತು. ಬಳಿಕ ಅದು ಪ್ರೀತಿಗೆ ತಿರುಗಿ, ಕೊನೆಗೆ ಮದುವೆಯಲ್ಲಿ ಅಂತ್ಯಗೊಂಡಿತು.

Lomasha Kanyaರೇಬತಿ ಅವರ ಬದುಕಿನ ಪಯಣ ನಿಜಕ್ಕೂ ಒಂದು ಕಥೆಯಂತಿದೆ. ದೈಹಿಕ ವೈಪರೀತ್ಯದಿಂದಾಗಿ ಸಮಾಜದಿಂದ ದೂರ ಉಳಿಯುವಂತಾಗಿದ್ದ ಅವರು, ವೈದ್ಯಕೀಯ ಚಿಕಿತ್ಸೆಯ ಮೂಲಕ ಹೊಸ ರೂಪ ಪಡೆದು, ಇದೀಗ ಪ್ರೀತಿಸಿ ಮದುವೆಯಾಗುವ ಮೂಲಕ ಬದುಕಿನ ಹೊಸ ಹಾದಿ ಹಿಡಿದಿದ್ದಾರೆ. ಹಲವು ಸಂಕಷ್ಟಗಳನ್ನು ಎದುರಿಸಿದ ಅವರ ಜೀವನದಲ್ಲಿ ಇದು ಮಹತ್ವದ ತಿರುವಾಗಿದೆ.

ರೇಬತಿ ಅವರ ವೈದ್ಯಕೀಯ ಸ್ಥಿತಿ ವಿಶ್ವದ ವೈದ್ಯಕೀಯ ವಲಯದಲ್ಲೂ ಭಾರೀ ಕುತೂಹಲ ಮೂಡಿಸಿತ್ತು. ವಸಡಿನ ಶೇ.100ರಷ್ಟು ಅತಿಯಾದ ಬೆಳವಣಿಗೆ ಮತ್ತು ಹೈಪರ್‌ಟ್ರೈಕೋಸಿಸ್ ಎರಡೂ ಸಮಸ್ಯೆಗಳಿಗೆ ಏಕಕಾಲದಲ್ಲಿ ತುತ್ತಾದ ದಾಖಲೆಯುಳ್ಳ ಏಕೈಕ ವ್ಯಕ್ತಿ ಅವರಾಗಿದ್ದಾರೆ ಎಂದು ವರದಿಯಾಗಿತ್ತು.

2008ರಲ್ಲಿ ಅವರ ವೈದ್ಯಕೀಯ ಸ್ಥಿತಿ ಮತ್ತು ಸಂಕಷ್ಟಗಳ ಕುರಿತು 'ಟಿಎನ್‌ಐಇ' ಸವಿಸ್ತಾರ ವರದಿ ಪ್ರಕಟಿಸಿತ್ತು. ಈ ವರದಿಯ ಬಳಿಕ ರಾಜ್ಯ ಸರ್ಕಾರ ಅವರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಒದಗಿಸಲು ಕ್ರಮ ಕೈಗೊಂಡಿತ್ತು.

ಆಗ ರೇಬತಿ ಅವರಿಗೆ ಕೇವಲ 13 ವರ್ಷ ವಯಸ್ಸಾಗಿತ್ತು. ಇದೇ ವಂಶವಾಹಿ ಸಮಸ್ಯೆಯಿಂದ ಬಳಲುತ್ತಿದ್ದ ಅವರ ಸಹೋದರ ಆಹಾರ ಸೇವಿಸಲು ಸಾಧ್ಯವಾಗದೆ ತೀವ್ರ ಅಪೌಷ್ಟಿಕತೆಗೆ ತುತ್ತಾಗಿ ಮೃತಪಟ್ಟಿದ್ದರು. ರೇಬತಿ ಅವರನ್ನು ತಂದೆ ಬಾಲಕೃಷ್ಣ ಕನ್ಹರ್ ಅವರು ಕಟಕ್‌ನ ಎಸ್‌ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕರೆತಂದು, ಅಲ್ಲಿನ ವಸಡು ಚಿಕಿತ್ಸಾ ವಿಭಾಗಕ್ಕೆ ದಾಖಲಿಸಿದ್ದರು.

ಬಳಿಕ ಅವರಿಗೆ ಹಲವು ಶಸ್ತ್ರಚಿಕಿತ್ಸೆಗಳು ಮತ್ತು ಇತರ ವೈದ್ಯಕೀಯ ಚಿಕಿತ್ಸೆಗಳನ್ನು ನೀಡಲಾಯಿತು. ದೇಹದ ಮೇಲಿನ ಅತಿಯಾದ ಕೂದಲನ್ನು ಶಾಶ್ವತವಾಗಿ ತೆಗೆದುಹಾಕಲು ಲೇಸರ್ ಚಿಕಿತ್ಸೆಯನ್ನೂ ನಡೆಸಲಾಯಿತು.

ರೇಬತಿ ಅವರ ಪ್ರಕರಣ ವಂಶವಾಹಿ ಸಂಶೋಧನೆಗೆ ಮಹತ್ವದ ವಿಷಯವಾಗಿದ್ದರೂ, ಆಸ್ಪತ್ರೆಯಲ್ಲಿದ್ದ ಅವರ ರಕ್ತದ ಮಾದರಿಗಳನ್ನು ಕದಿಯಲು ಯತ್ನಿಸಿದ ಆರೋಪ ಸೇರಿದಂತೆ ಹಲವು ವಿವಾದಗಳೂ ಸೃಷ್ಟಿಯಾಗಿದ್ದವು. ಆದರೆ, ಆಸ್ಪತ್ರೆಯಿಂದ ಬಿಡುಗಡೆಯಾಗುವ ಹೊತ್ತಿಗೆ ಅವರ ರೂಪ ಮತ್ತು ಬದುಕು ಸಂಪೂರ್ಣ ಬದಲಾಗಿತ್ತು. ಹಿಂದೆ ಅವರನ್ನು ದೂರವಿಟ್ಟಿದ್ದ ಸಮಾಜವೇ ಅವರನ್ನು ಒಪ್ಪಿಕೊಳ್ಳಲಾರಂಭಿಸಿತು. ಗೌರವಯುತ ಜೀವನ ನಡೆಸಲು ಸಾಧ್ಯವಾಯಿತು. ಆದರೆ, ಕೆಲವು ವರ್ಷಗಳ ಬಳಿಕ ತಂದೆಯನ್ನು ಕಳೆದುಕೊಂಡಿದ್ದರಿಂದ ಅವರ ಬದುಕಿನಲ್ಲಿ ಮತ್ತೊಂದು ಸಂಕಷ್ಟ ಎದುರಾಗಿತ್ತು.

ಇದೀಗ ರೇಬತಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವುದರಿಂದ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳು ಅವರಿಗೆ ಸಂತೋಷ, ಭದ್ರತೆ ಮತ್ತು ಪ್ರೀತಿಯಿಂದ ಕೂಡಿರಲಿ ಎಂದು ಹಾರೈಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.