ಮಹಿಳೆಯರಿಗೆ ಹೆಸರೇ ಇಲ್ಲ! ಆಸ್ಪತ್ರೆ, ಸರ್ಕಾರಿ ದಾಖಲೆಗಳಲ್ಲಿ ಎಲ್ಲಾ ಮಹಿಳೆಯರನ್ನು ಬೀಬಿ ಎಂದೇ ಕರೆಯಲು ತಾಲಿಬಾನ್ ಆದೇಶ!
ಬಾಲ್ಖ್ (ಅಫ್ಘಾನಿಸ್ತಾನ): ಆಫ್ಘಾನಿಸ್ತಾನದಲ್ಲಿ ಮಹಿಳೆಯರ ಮೇಲಿನ ನಿರ್ಬಂಧಗಳು ದಿನೇ ದಿನೇ ಹೊಸ ರೂಪ ಪಡೆಯುತ್ತಿದ್ದು, ಇದೀಗ ಅಲ್ಲಿನ ತಾಲಿಬಾನ್ ಆಡಳಿತ ಮಹಿಳೆಯರ ಅಸ್ತಿತ್ವಕ್ಕೆ ಮತ್ತೊಂದು ದೊಡ್ಡ ಪೆಟ್ಟು ನೀಡಿದೆ. ಉತ್ತರ ಆಫ್ಘಾನಿಸ್ತಾನದ ಬಾಲ್ಖ್ ಪ್ರಾಂತ್ಯದಲ್ಲಿ ಹೊರಡಿಸಲಾದ ಹೊಸ ಆದೇಶದ ಪ್ರಕಾರ, ಇನ್ಮುಂದೆ ಸರ್ಕಾರಿ ದಾಖಲೆಗಳು ಮತ್ತು ಆಸ್ಪತ್ರೆಯ ಚೀಟಿಗಳಲ್ಲಿ ಮಹಿಳೆಯರ ಅಸಲಿ ಹೆಸರನ್ನು ಬರೆಯುವಂತಿಲ್ಲ! ಆಸ್ಪತ್ರೆ, ಕ್ಲಿನಿಕ್ ಮತ್ತು ವೈದ್ಯಕೀಯ ದಾಖಲೆಗಳಲ್ಲಿ ಪ್ರತಿಯೊಬ್ಬ ಮಹಿಳಾ ರೋಗಿಯನ್ನು 'ಬೀಬಿ' ಎಂಬ ಅಡ್ಡಹೆಸರಿನಿಂದಲೇ ಗುರುತಿಸಬೇಕು ಎಂದು ಕಟ್ಟಪ್ಪಣೆ ಹೊರಡಿಸಲಾಗಿದೆ. ಆ ಕುರಿತ ವರದಿ ಇಲ್ಲಿದೆ:
ಮಹಿಳೆಯರನ್ನ ಬೀಬಿ/ಮೇಕೆ/ದನ/ಹಸು ಎಂದೇ ಕರೆಯಲು ತಾಲಿಬಾನ್ ಆದೇಶ!
ಬಾಲ್ಖ್ ಪ್ರಾಂತ್ಯದ ಆಸ್ಪತ್ರೆಗಳು, ಚಿಕಿತ್ಸಾಲಯಗಳು ಮತ್ತು ಸರ್ಕಾರಿ ಕಚೇರಿಗಳಲ್ಲಿ ಮಹಿಳಾ ರೋಗಿಗಳ ಹೆಸರನ್ನು ನಮೂದಿಸಬಾರದು ಎಂದು ಸೂಚಿಸಲಾಗಿದೆ. ಅದರ ಬದಲಿಗೆ ವಯಸ್ಸಿನ ಭೇದವಿಲ್ಲದೆ ಎಲ್ಲಾ ಮಹಿಳೆಯರನ್ನು 'ಬೀಬಿ' (ಸ್ಥಳೀಯವಾಗಿ ಅಜ್ಜಿ, ವೃದ್ಧೆ ಅಥವಾ ಗೌರವಾನ್ವಿತ ಮಹಿಳೆ ಎಂಬ ಅರ್ಥ ನೀಡುವ ಪದ) ಎಂದು ದಾಖಲಿಸಲು ತಿಳಿಸಲಾಗಿದೆ. ಅದರಲ್ಲೂ, ಈ ನಿಯಮವನ್ನು ಅಧಿಕೃತವಾಗಿ ಬೀಬಿ ಪದಕ್ಕೆ ಸೀಮಿತಗೊಳಿಸಿದ್ದರೂ, ವಾಸ್ತವದಲ್ಲಿ ಹಲವು ಕಡೆ ಮಹಿಳೆಯರನ್ನು ಅವಮಾನಕರವಾಗಿ ಮೇಕೆ ಅಥವಾ ದನ/ಹಸು ಮುಂತಾದ ಪ್ರಾಣಿಗಳ ಹೆಸರುಗಳಿಂದ ಕರೆಯಲಾಗುತ್ತಿದೆ ಎಂದು ಅಫ್ಘಾನ್ ಮಹಿಳಾ ಹಕ್ಕುಗಳ ಹೋರಾಟಗಾರರು ಹಾಗೂ ಸಂತ್ರಸ್ತರು ದೂರಿದ್ದಾರೆ.
ಆರೋಗ್ಯ ಸೇವೆಯ ಮೇಲೆ ಗಂಭೀರ ಅಪಾಯ
ಆಸ್ಪತ್ರೆಗಳಲ್ಲಿ ದಾಖಲಾಗುವ ಹತ್ತಾರು ಮಹಿಳಾ ರೋಗಿಗಳ ಕಡತಗಳಲ್ಲಿ ಒಂದೇ ರೀತಿಯಾಗಿ ಬೀಬಿ ಎಂದು ನಮೂದಿಸುವುದರಿಂದ, ರೋಗಿಗಳ ಗುರುತು ಪತ್ತೆಹಚ್ಚುವುದು ಕಷ್ಟವಾಗುತ್ತದೆ. ಇದರಿಂದಾಗಿ ಔಷಧಗಳು ಮತ್ತು ವೈದ್ಯಕೀಯ ಪರೀಕ್ಷಾ ವರದಿಗಳು ಅದಲು-ಬದಲಾಗಿ ಮಹಿಳೆಯರ ಪ್ರಾಣಕ್ಕೆ ಕುತ್ತು ಬರುವ ಅಪಾಯವಿದೆ ಎಂದು ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ. ಇನ್ನು, ಜರ್ಮನಿಯಲ್ಲಿ ನೆಲೆಸಿರುವ ಅಫ್ಘಾನ್ ಹೋರಾಟಗಾರ್ತಿ ಲಾಲಾ ಉಸ್ಮಾನಿ ಈ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದಾರೆ. ಮಹಿಳೆಯರ ಹೆಸರನ್ನು ಅಳಿಸಿಹಾಕುವುದು ಅವರ ಅಸ್ತಿತ್ವವನ್ನೇ ನಾಶಪಡಿಸುವ ಮತ್ತು ಅವರನ್ನು ಕೇವಲ ವಸ್ತುಗಳಂತೆ ಕಾಣುವ ಪ್ರಯತ್ನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಫ್ಘಾನಿಸ್ತಾನದ ಶಾಲೆಯಲ್ಲಿ ಪಾಠ ನಡೆಯುತ್ತಿದ್ದಾಗಲೇ ಭೀಕರ ಸ್ಫೋಟ: 7 ವಿದ್ಯಾರ್ಥಿಗಳು ದುರ್ಮರಣ, 100 ಮಂದಿಗೆ ಗಾಯ
ಏತನ್ಮಧ್ಯೆ, ಸದ್ಯಕ್ಕೆ ಈ ಆದೇಶವು ಬಾಲ್ಖ್ ಪ್ರಾಂತ್ಯಕ್ಕೆ ಮಾತ್ರ ಸೀಮಿತವಾಗಿದ್ದು, ರಾಷ್ಟ್ರವ್ಯಾಪಿಯಾಗಿ ಜಾರಿಯಾಗಿರುವ ಬಗ್ಗೆ ಅಧಿಕೃತ ದೃಢೀಕರಣವಿಲ್ಲ. ಆದರೂ, ಈ ಹಿಂದೆ ಸ್ಥಳೀಯ ಮಟ್ಟದಲ್ಲಿ ಜಾರಿಯಾದ ಹಲವು ನಿರ್ಬಂಧಗಳು ನಂತರ ಇಡೀ ದೇಶಕ್ಕೆ ವಿಸ್ತರಿಸಿರುವುದರಿಂದ ಈ ನಿಯಮವೂ ಎಲ್ಲೆಡೆ ಜಾರಿಯಾಗುವ ಆತಂಕ ವ್ಯಕ್ತವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

