ಬಲೂಚಿಸ್ತಾನದಲ್ಲಿ ಉಗ್ರರ ವಿರುದ್ಧ ಭಾರಿ ಕಾರ್ಯಾಚರಣೆ: 145 ಭಯೋತ್ಪಾದಕರ ಹತ್ಯೆಗೈದಿದ್ದೇವೆಂದ ಪಾಕಿಸ್ತಾನ, ಭಾರತ-ಆಫ್ಘನ್ ವಿರುದ್ಧ ಗಂಭೀರ ಆರೋಪ

ಕಳೆದ 40 ಗಂಟೆಗಳ ಅವಧಿಯಲ್ಲಿ ಬಲೂಚಿಸ್ತಾನದ ವಿವಿಧ ಭಾಗಗಳಲ್ಲಿ ಪೊಲೀಸ್, ಸೇನೆ ಹಾಗೂ ಅರೆಸೈನಿಕ ಪಡೆಗಳು ಜಂಟಿ ಕಾರ್ಯಾಚರಣೆ ನಡೆಸಿದ್ದು, ಇದೂವರೆಗೆ ದಶಕಗಳಲ್ಲಿ ಕಂಡಿರದಷ್ಟು ಹೆಚ್ಚಿನ ಸಂಖ್ಯೆಯ ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂದು ಪಾಕಿಸ್ತಾನ ಹೇಳಿದೆ.
Police officers examine the site of Saturday's suicide bombing, in Quetta, Pakistan, Sunday, Feb. 1, 2026.
ಆತ್ಮಾಹುತಿ ದಾಳಿ ನಡೆದ ಸ್ಥಳದಲ್ಲಿ ಪೊಲೀಸರು
Updated on

ಕ್ವೆಟ್ಟಾ (ಪಾಕಿಸ್ತಾನ):ಪಾಕಿಸ್ತಾನದ ಅಶಾಂತ ದಕ್ಷಿಣ ಪಶ್ಚಿಮ ಪ್ರಾಂತ್ಯವಾದ ಬಲೂಚಿಸ್ತಾನದಲ್ಲಿ ನಡೆದ ಭೀಕರ ಉಗ್ರ ದಾಳಿಗಳ ನಂತರ, ಭದ್ರತಾ ಪಡೆಗಳು ನಡೆಸಿದ ಭಾರೀ ಕಾರ್ಯಾಚರಣೆಯಲ್ಲಿ 145 ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಪಾಕಿಸ್ತಾನ ಸರ್ಕಾರ ಭಾನುವಾರ ಘೋಷಿಸಿದೆ.

ಕಳೆದ 40 ಗಂಟೆಗಳ ಅವಧಿಯಲ್ಲಿ ಬಲೂಚಿಸ್ತಾನದ ವಿವಿಧ ಭಾಗಗಳಲ್ಲಿ ಪೊಲೀಸ್, ಸೇನೆ ಹಾಗೂ ಅರೆಸೈನಿಕ ಪಡೆಗಳು ಜಂಟಿ ಕಾರ್ಯಾಚರಣೆ ನಡೆಸಿದ್ದು, ಇದೂವರೆಗೆ ದಶಕಗಳಲ್ಲಿ ಕಂಡಿರದಷ್ಟು ಹೆಚ್ಚಿನ ಸಂಖ್ಯೆಯ ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶನಿವಾರ ನಡೆದ ಆತ್ಮಾಹುತಿ ಹಾಗೂ ಗುಂಡಿನ ದಾಳಿಗಳಲ್ಲಿ ಒಟ್ಟು 33 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ 18 ನಾಗರಿಕರು (ಐದು ಮಹಿಳೆಯರು ಮತ್ತು ಮೂರು ಮಕ್ಕಳು ಸೇರಿ) 15 ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಈ ದಾಳಿಗಳ ಬಳಿಕ ಶನಿವಾರ ಬೆಳಗ್ಗಿನಿಂದಲೇ ಬಲೂಚಿಸ್ತಾನದ ವಿವಿಧ ಪ್ರದೇಶಗಳಲ್ಲಿ ವ್ಯಾಪಕ ಕಾರ್ಯಾಚರಣೆ ಆರಂಭಿಸಲಾಯಿತು ಎಂದು ತಿಳಿಸಿದೆ.

ಏತನ್ಮಧ್ಯೆ ಯಥಾಪ್ರಕಾರ ಪಾಕಿಸ್ತಾನವು ಈ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂದು ಪುರಾವೆಯಿಲ್ಲದ ಆರೋಪ ಮಾಡಿದೆ. ಆದರೆ,ಭಾರತದ ವಿದೇಶಾಂಗ ಸಚಿವಾಲಯವು ಇದನ್ನು ಕಟುವಾಗಿ ತಿರಸ್ಕರಿಸಿದ್ದು, ತನ್ನ ಆಂತರಿಕ ಸಮಸ್ಯೆಗಳಿಂದ ವಿಶ್ವದ ಗಮನವನ್ನು ಬೇರೆಡೆಗೆ ಸೆಳೆಯಲು ಪಾಕಿಸ್ತಾನ ಈ ರೀತಿ ಸುಳ್ಳು ಆರೋಪ ಮಾಡುತ್ತಿದೆ. ಮೊದಲು ತನ್ನ ಜನರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲಿ ಎಂದು ಖಡಕ್ ಉತ್ತರ ನೀಡಿದೆ.

ಬಲೂಚಿಸ್ತಾನ ಮುಖ್ಯಮಂತ್ರಿ ಸರ್ಫ್ರಾಜ್ ಬುಗ್ತಿ ಅವರು, “ಭದ್ರತಾ ಪಡೆಗಳು ಮತ್ತು ಪೊಲೀಸರು ತ್ವರಿತವಾಗಿ ಪ್ರತಿಕ್ರಿಯಿಸಿ, ‘ಫಿತ್ನಾ ಅಲ್-ಹಿಂದೂಸ್ತಾನ್’ಗೆ ಸೇರಿದ 145 ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಹೇಳಿದ್ದರು.

Police officers examine the site of Saturday's suicide bombing, in Quetta, Pakistan, Sunday, Feb. 1, 2026.
ಬಲೂಚಿಸ್ತಾನ ಪ್ರತ್ಯೇಕ ದೇಶ: ಸೌದಿ ಅರೇಬಿಯಾದಲ್ಲಿ ನಿಂತು ಸಲ್ಮಾನ್ ಖಾನ್ ಅಚ್ಚರಿ ಹೇಳಿಕೆ; ವಿಡಿಯೋ ವೈರಲ್!

ಹತ್ಯೆಗೀಡಾದ ಉಗ್ರರ ಶವಗಳು ನಮ್ಮ ವಶದಲ್ಲಿವೆ. ಇವರಲ್ಲಿ ಕೆಲವರು ಆಫ್ಘನ್ ನಾಗರಿಕರು ಎಂಬ ಮಾಹಿತಿ ಕೂಡ ಇದೆ, "ಭಾರತೀಯ ಬೆಂಬಲಿತ ಭಯೋತ್ಪಾದಕರು" ಶವಗಳನ್ನು ತೆಗೆದುಕೊಳ್ಳಲು ಬಯಸಿದ್ದರು. ಆದರೆ, ನಗರ ಕೇಂದ್ರಕ್ಕೆ ಬರಲು ಹಿಂದೇಟು ಹಾಕಿದ್ದಾರೆಂದು ತಿಳಿಸಿದ್ದಾರೆ.

‘ಫಿತ್ನಾ ಅಲ್-ಹಿಂದೂಸ್ತಾನ್’ ಎಂಬ ಪದವನ್ನು ಪಾಕಿಸ್ತಾನ ಸರ್ಕಾರವು ಬಲೂಚ್ ಲಿಬರೇಶನ್ ಆರ್ಮಿ (BLA)ಗೆ ಬಳಸುತ್ತದೆ. ಈ ಸಂಘಟನೆಗೆ ಭಾರತದ ಬೆಂಬಲವಿದೆ ಎಂದೂ ಆರೋಪಿಸಿದೆ.

ಈ ಉಗ್ರರು ಕ್ವೆಟ್ಟಾ ನಗರ ಕೇಂದ್ರಕ್ಕೆ ನುಗ್ಗಿ ಸರ್ಕಾರಿ ಕಚೇರಿಗಳ ಮೇಲೆ ದಾಳಿ ನಡೆಸಿ, ಅಧಿಕಾರಿಗಳನ್ನು ಅಪಹರಿಸುವ ಯೋಜನೆ ಹಾಕಿಕೊಂಡಿದ್ದರು. ಆದರೆ, “ನಮಗೆ ಅವರ ಯೋಜನೆಯ ಬಗ್ಗೆ ಮೊದಲೇ ಮಾಹಿತಿ ಇತ್ತು. ನಮ್ಮ ಪಡೆಗಳು ಸಿದ್ಧವಾಗಿದ್ದರಿಂದ ಅವರ ಯತ್ನ ವಿಫಲವಾಯಿತು ಎಂದು ಸರ್ಫ್ರಾಜ್ ಬುಗ್ತಿ ತಿಳಿಸಿದ್ದಾರೆ.

ನಮ್ಮ ಮೇಲೆ ನಡೆದಿರುವ ಈ ದಾಳಿಗಳ ಹಿಂದೆ ಭಾರತ ಮತ್ತು ಆಫ್ಘಾನಿಸ್ತಾನ ಬೆಂಬಲವಿದೆ. ಬಲೂಚ ಲಿಬರೇಶನ್ ಆರ್ಮಿಯ ಉಗ್ರರುಆಫ್ಘಾನಿಸ್ತಾನ ಭೂಭಾಗದಿಂದ ಕಾರ್ಯಾಚರಿಸುತ್ತಿದ್ದಾರೆಂದು ಆರೋಪಿಸಿದ್ದಾರೆ.

2020ರ ದೋಹಾ ಒಪ್ಪಂದದ ಪ್ರಕಾರ, ಆಫ್ಘಾನಿಸ್ತಾನವು ತನ್ನ ನೆಲವನ್ನು ಇತರ ರಾಷ್ಟ್ರಗಳ ವಿರುದ್ಧ ದಾಳಿಗೆ ಬಳಸಲು ಅವಕಾಶ ನೀಡಬಾರದು, ಆದರೆ ದುರದೃಷ್ಟವಶಾತ್, ಪಾಕಿಸ್ತಾನ ವಿರುದ್ಧ ದಾಳಿ ಮಾಡಲು ಆಫ್ಘನ್ ಭೂಭಾಗ ಬಳಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಆದರೆ, ಈ ಆರೋಪಗಳನ್ನು ಭಾರತ ಮತ್ತು ಆಫ್ಘಾನಿಸ್ತಾನ ಎರಡೂ ದೇಶಗಳು ತಳ್ಳಿಹಾಕಿವೆ.

ಪಾಕಿಸ್ತಾನದ ಅತಿದೊಡ್ಡ ಮತ್ತು ಅತ್ಯಂತ ಬಡ ಪ್ರಾಂತ್ಯವಾದ ಬಲೂಚಿಸ್ತಾನ್, ದಶಕಗಳಿಂದ ಜನಾಂಗೀಯ ಬಲೂಚ್ ಪ್ರತ್ಯೇಕತಾವಾದಿಗಳ ಬಂಡಾಯವನ್ನು ಎದುರಿಸುತ್ತಿದೆ. ಈ ಗುಂಪುಗಳು ಹೆಚ್ಚಿನ ಸ್ವಾಯತ್ತತೆ ಮತ್ತು ಪ್ರಾಂತ್ಯದ ನೈಸರ್ಗಿಕ ಸಂಪನ್ಮೂಲಗಳಲ್ಲಿ ಹೆಚ್ಚಿನ ಪಾಲನ್ನು ಪಡೆಯಲು ಹೋರಾಡುತ್ತಿವೆ. ಇತ್ತೀಚಿನ ದಾಳಿಯಲ್ಲಿ ತಾವು ಪಾಕಿಸ್ತಾನದ ಭದ್ರತಾ ಪಡೆಗಳ 84 ಸದಸ್ಯರನ್ನು ಕೊಂದಿರುವುದಾಗಿ ಮತ್ತು 18 ಜನರನ್ನು ಸೆರೆಹಿಡಿದಿರುವುದಾಗಿ ಬಂಡಾಯ ಗುಂಪು ಹೇಳಿಕೊಂಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com